Thursday, 28 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 9


ಅಷ್ಟಮ ಆವರಣ ಕೃತಿ

ಶ್ರೀ ಕಮಲಾಂಬಿಕೇ      ರಾಗ: ಘಂಟಾ       ತಾಳ: ಆದಿತಾಳ

ಶ್ರೀ ಕಮಲಾಂಬಿಕೇ ಅವಾವ ಶಿವೇ ಕರದೃತ ಶುಕ ಶಾರಿಕೆ |
ಲೋಕಪಾಲಿನೀ ಕಪಾಲಿನಿ ಶೂಲಿನಿ | ಲೋಕ ಜನನೀ ಭಗಮಾಲಿನೀ ಸಹೃದಾ ||

ಲೋಕಯಮಾಂ ಸರ್ವಸಿದ್ಧಿ ಪ್ರದಾಯಿಕೇ ತ್ರಿಪುರಾಂಬಿಕೇ ಬಾಲಾಂಬಿಕೇ ||

ಸಂತಪ್ತ ಹೇಮ ಸನ್ನಿಭ ದೇಹೇ | ಸದಾ ಅಖಂಡೈಕ ರಸಪ್ರವಾಹೇ |
ಸಂತಾಪಹರ ತ್ರಿಕೊಣ ಗೇಹೇ | ಸಕಾಮೇಶ್ವರೀ ಶಕ್ತಿ ಸಮೂಹೇ |
ಸತತಂ ಮುಕ್ತಿ ಘಂಟಾಮಣಿ ಘೋಷಾಯ ಮಾನ ಕವಾಟದ್ವಾರೇ |
ಅನಂತಗುರುಗು ವಿಧಿತೇ | ಕರಾಂಗುಲೀ ನಖೋದಯ ವಿಷ್ಣು ದಶಾವತಾರೇ ||

ಅಂತಃಕರಣೇಶು ಕಾರ್ಮುಕ ಶಬ್ದಾದಿ ಪಂಚ ತನ್ಮಾತ್ರ ವಿಶಿಕಾದ್ಯಂತ
ರಾಗ ಪಾಶಾಂಕುಶ ಧರಕರೇತಿ ರಹಸ್ಯಯೋಗಿನಿ ಪರೇ ||
            ……………………………………………………………
 
    ಶ್ರೀ ಕಮಲಾಂಬಿಕೇ ಅವಾವ ಶಿವೇ ಎಂಟನೇ ಆವರಣದ ಈ ಕೃತಿಯು ಸಂಬೋಧನಾ ವಿಭಕ್ತಿಯಲ್ಲಿದೆ. ಈ ಆವರಣದ ಹೆಸರು ತ್ರಿಕೋಣ. ಚಕ್ರದ ಹೆಸರು ಸರ್ವಸಿದ್ಧಿಪ್ರದ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರಾಂಬಾ. ಯೋಗಿನಿಯ ಹೆಸರು ಅತಿರಹಸ್ಯ ಯೋಗಿನಿ.
   ಪಲ್ಲವಿಯಲ್ಲಿ ಕೈಯಲ್ಲಿ ಶುಕವನ್ನು ಹಿಡಿದಿರುವ ಹೇ ಕಮಲಾಂಬಿಕೆಯೇ ಸದಾ ನನ್ನನ್ನು ರಕ್ಷಿಸು ಎಂದು ದೀಕ್ಷಿತರು ಬೇಡಿದ್ದಾರೆ.
   ಅನುಪಲ್ಲವಿಯಲ್ಲಿ ಸರ್ವಸಿದ್ಧಿಪ್ರದಾಯಿಕೆ(ಚಕ್ರದ ಹೆಸರು), ತ್ರಿಪುರಾಂಬಿಕೇ(ಚಕ್ರೇಶ್ವರಿಯ ಹೆಸರು) ಬಾಲಾಂಬಿಕೆಯೇ ರಕ್ಷಿಸು ಎಂದಿದ್ದಾರೆ.
   ಚರಣದಲ್ಲಿ ಚಿನ್ನದಂಥಹ ದೇಹ ಕಾಂತಿ ಹೊಂದಿರುವವಳೇ, ಅಖಂಡವಾದ ರಸಪ್ರವಾಹವುಳ್ಳವಳೇ, ತ್ರಿಕೋಣದ ಮನೆಯಲ್ಲಿ ವಾಸಿಸುವವಳೇ, ಕಾಮೇಶ್ವರಿ ಶಕ್ತಿ ಸಮೂಹೇ (ಕಾಮೇಶ್ವರಿಯೊಡಗೂಡಿದ ಹದಿನಾರು ಮಂದಿ ನಿತ್ಯೆಯರು- ಇವರು ನಿತ್ಯಷೋಡಶಿಕಾರೂಪರೆಂದು ಪ್ರಸಿದ್ಧರು.) ಮುಕ್ತಿ ಎಂಬ ಮನೆಯ ದ್ವಾರವನ್ನು ತೆರೆಯಲು ಘಂಟಾನಾದವುಳ್ಳವಳೇ, (ಘಂಟಾಮಣಿಘೋಷವೆಂಬ ಪದದಲ್ಲಿ ದೀಕ್ಷಿತರು ಘಂಟಾ ರಾಗದ ರಾಗಮುದ್ರೆಯನ್ನು ಜಾಣ್ಮೆಯಿಂದ ಪೋಣಿಸಿದ್ದಾರೆ.) ಭಂಡಸುರನ ರಾಕ್ಷಸ ಮಾಯಿಂದ ಸೃಷ್ಟಿಯಾದ ದೈತ್ಯರ ಸಂಹರಿಸಲು ಉಗುರುಗಳಿಂದಲೇ ವಿಷ್ಣುವಿನ ದಶಾವತಾರವನ್ನು ಸೃಷ್ಟಿಸಿದವಳೇ, ಮನಸ್ಸೆಂಬ ಬಿಲ್ಲನ್ನೂ, ಪಂಚಬಾಣಗಳನ್ನೂ, ರಾಗವೆಂಬ ಪಾಶಾಂಕುಶವನ್ನು ಧರಿಸಿರುವ ರಹಸ್ಯ ಯೋಗಿನಿಯೆಂಬ ಕಮಲಾಂಬಿಕೆಯೇ ನನ್ನನ್ನೊಮ್ಮೆ ನೋಡು ಎಂದಿದ್ದಾರೆ.
   ಇಡೀ ಕೃತಿಯ ಸಾಹಿತ್ಯವನ್ನೂ ಗಮನಿಸಿದರೆ ದೀಕ್ಷಿತರ ಕವಿತಾಶಕ್ತಿಯ ಅರಿವಾಗುತ್ತದೆ. ಜಗನ್ಮಾತೆಯನ್ನು ಯಾವರೀತಿ ಭಕ್ತಿಭಾವದಿಂದ ಬಣ್ಣಿಸಿದ್ದಾರೆಂದು ಇಡೀ ಸಾಹಿತ್ಯದಲ್ಲಿ ಗೊಚರಿಸುವ ಪದಪುಂಜಗಳೇ ಸಾಕ್ಷಿ.
   ಕೃತಿಯಲ್ಲಿ ಬರುವ ಲಲಿತಾಸಹಸ್ರನಾಮದ ನಾಮಗಳು: ಶಿವೇ (ಶ್ರೀ ಲಲಿತಾ ಸಹಸ್ರನಾಮದ 53ನೇ ನಾಮ),  ಕರಾಂಗುಲೀ ನಖೋದಯ ವಿಷ್ಣು ದಶಾವತಾರೇ (ಶ್ರೀ ಲಲಿತಾ ಸಹಸ್ರನಾಮದ 80ನೇ ನಾಮವಾದ ಕರಾಂಗುಲೀನಖೋತ್ಪನ್ನ ನಾರಾಯಣ ದಶಾಕೃತಿ ನಾಮಕ್ಕೆ ಪರ್ಯಾಯವಾಗಿದೆ ),  ಭಗಮಾಲಿನೀ (ಶ್ರೀ ಲಲಿತಾ ಸಹಸ್ರನಾಮದ 277ನೇ ನಾಮ), ಸಹೃದಾ (ಶ್ರೀ ಲಲಿತಾ ಸಹಸ್ರನಾಮದ 303ನೇ ನಾಮವಾದ ಹೃದ್ಯಾ ನಾಮಕ್ಕೆ ಪರ್ಯಾಯವಾಗಿದೆ )

No comments:

Post a Comment