Thursday, 28 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 9


ಅಷ್ಟಮ ಆವರಣ ಕೃತಿ

ಶ್ರೀ ಕಮಲಾಂಬಿಕೇ      ರಾಗ: ಘಂಟಾ       ತಾಳ: ಆದಿತಾಳ

ಶ್ರೀ ಕಮಲಾಂಬಿಕೇ ಅವಾವ ಶಿವೇ ಕರದೃತ ಶುಕ ಶಾರಿಕೆ |
ಲೋಕಪಾಲಿನೀ ಕಪಾಲಿನಿ ಶೂಲಿನಿ | ಲೋಕ ಜನನೀ ಭಗಮಾಲಿನೀ ಸಹೃದಾ ||

ಲೋಕಯಮಾಂ ಸರ್ವಸಿದ್ಧಿ ಪ್ರದಾಯಿಕೇ ತ್ರಿಪುರಾಂಬಿಕೇ ಬಾಲಾಂಬಿಕೇ ||

ಸಂತಪ್ತ ಹೇಮ ಸನ್ನಿಭ ದೇಹೇ | ಸದಾ ಅಖಂಡೈಕ ರಸಪ್ರವಾಹೇ |
ಸಂತಾಪಹರ ತ್ರಿಕೊಣ ಗೇಹೇ | ಸಕಾಮೇಶ್ವರೀ ಶಕ್ತಿ ಸಮೂಹೇ |
ಸತತಂ ಮುಕ್ತಿ ಘಂಟಾಮಣಿ ಘೋಷಾಯ ಮಾನ ಕವಾಟದ್ವಾರೇ |
ಅನಂತಗುರುಗು ವಿಧಿತೇ | ಕರಾಂಗುಲೀ ನಖೋದಯ ವಿಷ್ಣು ದಶಾವತಾರೇ ||

ಅಂತಃಕರಣೇಶು ಕಾರ್ಮುಕ ಶಬ್ದಾದಿ ಪಂಚ ತನ್ಮಾತ್ರ ವಿಶಿಕಾದ್ಯಂತ
ರಾಗ ಪಾಶಾಂಕುಶ ಧರಕರೇತಿ ರಹಸ್ಯಯೋಗಿನಿ ಪರೇ ||
            ……………………………………………………………
 
    ಶ್ರೀ ಕಮಲಾಂಬಿಕೇ ಅವಾವ ಶಿವೇ ಎಂಟನೇ ಆವರಣದ ಈ ಕೃತಿಯು ಸಂಬೋಧನಾ ವಿಭಕ್ತಿಯಲ್ಲಿದೆ. ಈ ಆವರಣದ ಹೆಸರು ತ್ರಿಕೋಣ. ಚಕ್ರದ ಹೆಸರು ಸರ್ವಸಿದ್ಧಿಪ್ರದ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರಾಂಬಾ. ಯೋಗಿನಿಯ ಹೆಸರು ಅತಿರಹಸ್ಯ ಯೋಗಿನಿ.
   ಪಲ್ಲವಿಯಲ್ಲಿ ಕೈಯಲ್ಲಿ ಶುಕವನ್ನು ಹಿಡಿದಿರುವ ಹೇ ಕಮಲಾಂಬಿಕೆಯೇ ಸದಾ ನನ್ನನ್ನು ರಕ್ಷಿಸು ಎಂದು ದೀಕ್ಷಿತರು ಬೇಡಿದ್ದಾರೆ.
   ಅನುಪಲ್ಲವಿಯಲ್ಲಿ ಸರ್ವಸಿದ್ಧಿಪ್ರದಾಯಿಕೆ(ಚಕ್ರದ ಹೆಸರು), ತ್ರಿಪುರಾಂಬಿಕೇ(ಚಕ್ರೇಶ್ವರಿಯ ಹೆಸರು) ಬಾಲಾಂಬಿಕೆಯೇ ರಕ್ಷಿಸು ಎಂದಿದ್ದಾರೆ.
   ಚರಣದಲ್ಲಿ ಚಿನ್ನದಂಥಹ ದೇಹ ಕಾಂತಿ ಹೊಂದಿರುವವಳೇ, ಅಖಂಡವಾದ ರಸಪ್ರವಾಹವುಳ್ಳವಳೇ, ತ್ರಿಕೋಣದ ಮನೆಯಲ್ಲಿ ವಾಸಿಸುವವಳೇ, ಕಾಮೇಶ್ವರಿ ಶಕ್ತಿ ಸಮೂಹೇ (ಕಾಮೇಶ್ವರಿಯೊಡಗೂಡಿದ ಹದಿನಾರು ಮಂದಿ ನಿತ್ಯೆಯರು- ಇವರು ನಿತ್ಯಷೋಡಶಿಕಾರೂಪರೆಂದು ಪ್ರಸಿದ್ಧರು.) ಮುಕ್ತಿ ಎಂಬ ಮನೆಯ ದ್ವಾರವನ್ನು ತೆರೆಯಲು ಘಂಟಾನಾದವುಳ್ಳವಳೇ, (ಘಂಟಾಮಣಿಘೋಷವೆಂಬ ಪದದಲ್ಲಿ ದೀಕ್ಷಿತರು ಘಂಟಾ ರಾಗದ ರಾಗಮುದ್ರೆಯನ್ನು ಜಾಣ್ಮೆಯಿಂದ ಪೋಣಿಸಿದ್ದಾರೆ.) ಭಂಡಸುರನ ರಾಕ್ಷಸ ಮಾಯಿಂದ ಸೃಷ್ಟಿಯಾದ ದೈತ್ಯರ ಸಂಹರಿಸಲು ಉಗುರುಗಳಿಂದಲೇ ವಿಷ್ಣುವಿನ ದಶಾವತಾರವನ್ನು ಸೃಷ್ಟಿಸಿದವಳೇ, ಮನಸ್ಸೆಂಬ ಬಿಲ್ಲನ್ನೂ, ಪಂಚಬಾಣಗಳನ್ನೂ, ರಾಗವೆಂಬ ಪಾಶಾಂಕುಶವನ್ನು ಧರಿಸಿರುವ ರಹಸ್ಯ ಯೋಗಿನಿಯೆಂಬ ಕಮಲಾಂಬಿಕೆಯೇ ನನ್ನನ್ನೊಮ್ಮೆ ನೋಡು ಎಂದಿದ್ದಾರೆ.
   ಇಡೀ ಕೃತಿಯ ಸಾಹಿತ್ಯವನ್ನೂ ಗಮನಿಸಿದರೆ ದೀಕ್ಷಿತರ ಕವಿತಾಶಕ್ತಿಯ ಅರಿವಾಗುತ್ತದೆ. ಜಗನ್ಮಾತೆಯನ್ನು ಯಾವರೀತಿ ಭಕ್ತಿಭಾವದಿಂದ ಬಣ್ಣಿಸಿದ್ದಾರೆಂದು ಇಡೀ ಸಾಹಿತ್ಯದಲ್ಲಿ ಗೊಚರಿಸುವ ಪದಪುಂಜಗಳೇ ಸಾಕ್ಷಿ.
   ಕೃತಿಯಲ್ಲಿ ಬರುವ ಲಲಿತಾಸಹಸ್ರನಾಮದ ನಾಮಗಳು: ಶಿವೇ (ಶ್ರೀ ಲಲಿತಾ ಸಹಸ್ರನಾಮದ 53ನೇ ನಾಮ),  ಕರಾಂಗುಲೀ ನಖೋದಯ ವಿಷ್ಣು ದಶಾವತಾರೇ (ಶ್ರೀ ಲಲಿತಾ ಸಹಸ್ರನಾಮದ 80ನೇ ನಾಮವಾದ ಕರಾಂಗುಲೀನಖೋತ್ಪನ್ನ ನಾರಾಯಣ ದಶಾಕೃತಿ ನಾಮಕ್ಕೆ ಪರ್ಯಾಯವಾಗಿದೆ ),  ಭಗಮಾಲಿನೀ (ಶ್ರೀ ಲಲಿತಾ ಸಹಸ್ರನಾಮದ 277ನೇ ನಾಮ), ಸಹೃದಾ (ಶ್ರೀ ಲಲಿತಾ ಸಹಸ್ರನಾಮದ 303ನೇ ನಾಮವಾದ ಹೃದ್ಯಾ ನಾಮಕ್ಕೆ ಪರ್ಯಾಯವಾಗಿದೆ )

Wednesday, 27 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 8


ಸಪ್ತಮ ಆವರಣ ಕೃತಿ

ಶ್ರೀ ಕಮಲಾಂಬಿಕಯಾಂ    ರಾಗ: ಶಹನಾ     ತಾಳ: ತ್ರಿಪುಟತಾಳ


ಶ್ರೀಕಮಲಾಂಬಿಕಾಯಾಂ ಭಕ್ತಿಂ ಕರೋಮಿ | ಶ್ರಿತಕಲ್ಪ ವಾಟಿಕಾಯಾಂ ಚಂಡಿಕಾಯಾಂ ಜಗದಂಬಿಕಾಯಾಂ ||

ರಾಕಾ ಚಂದ್ರವದನಾಯಾಂ ರಾಜೀವ ನಯನಾಯಾಂ | ಪಾಕಾರಿನುತ ಚರಣಾಯಾಂ ಆಕಾಶಾದಿ ಕಿರಣಾಯಾಂ |
ಹ್ರೀಂಕಾರ ವಿಪಿನ ಹರಿಣ್ಯಾ ಹ್ರೀಂಕಾರ ಸುಶರೀರಿಣ್ಯಾಂ | ಹ್ರೀಂಕಾರ ತರುಮಂಜಂರ್ಯಾಂ ಹ್ರೀಂಕಾರೇಶ್ವರ್ಯಾಂ ಗೌರ್ಯಾಂ ||

ಶರೀರತ್ರಯ ವಿಲಕ್ಷಣ ಸುಖತರ ಸ್ವಾತ್ಮಾನು ಭೋಗಿನ್ಯಾಂ | ವಿರಿಂಚಿ ಹರೀಶಾನ ಹರಿಹಯ ವೇದಿತ ರಹಸ್ಯ ಯೋಗಿನ್ಯಾಂ |
ಪರಾದಿ ವಾಗ್ದೇವತಾರೂಪ ವಶಿನ್ಯಾದಿ ವಿಭಾಗಿನ್ಯಾಂ | ಚರಾತ್ಮಕ ಸರ್ವರೋಗಹರ ನಿರಾಮಯ ರಾಜಯೋಗಿನ್ಯಾಂ ||

ಕರದೃತ ವೀಣಾ ವಾದಿನ್ಯಾಂ | ಕಮಲಾನಗರ ವಿನೋದಿನ್ಯಾಂ |
ಸುರನರ ಮುನಿಜನ ಮೋದಿನ್ಯಾಂ | ಗುರುಗುಹ ವರ ಪ್ರಸಾದಿನ್ಯಾಂ ||
                ……………………………………………………………………

ಶ್ರೀ ಕಮಲಾಂಬಿಕಾಯಾಂ ಸಪ್ತಮ ಆವರಣ ಕೃತಿಯು ಸಪ್ತಮಿ ವಿಭಕ್ತಿಯಲ್ಲಿದೆ. ಎಂಟು ತ್ರಿಕೋಣಳಿಂದ ಕೂಡಿದ ಈ ಆವರಣದ ಹೆಸರು ಅಷ್ಟಕೋಣ. ಚಕ್ರದ ಹೆಸರು ಸರ್ವರೋಗಹರ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರಸಿದ್ಧ. ಯೋಗಿನಿಯ ಹೆಸರು ರಹಸ್ಯ ಯೋಗಿನಿ.
ಅಷ್ಟಕೋಣಗಳೆಂದು ಕರೆಯಲ್ಪಡುವ ಎಂಟು ತ್ರಿಕೋಣಗಳ ಹೆಸರು ಇಂತಿವೆ.
ವಶಿನೀ, ಕಾಮೇಶೀ, ಮೋದಿನಿ, ವಿಮಲೇ, ಅರುಣೇ, ಜಯನೀ, ಸರ್ವೇಶ್ವರೀ, ಕೌಲಿನೀ.
ಪಲ್ಲವಿಯಲ್ಲಿ ದೀಕ್ಷಿತರು ಆಶ್ರಿತರಿಗೆ ಕಲ್ಪವೃಕ್ಷಳಾದ ಚಂಡಿಕೆಯೂ,  ಜಗದಂಬಿಕೆಯೂ ಆದ ಕಮಲಾಂಬಾ ದೇವಿಯನ್ನು ಭಕ್ತಿ ಮಾಡುತ್ತೇನೆ ಎಂದಿದ್ದಾರೆ.

ಅನುಪಲ್ಲವಿಯ ಈ ಕೆಳಗಿನ ಸಾಲುಗಳನ್ನು ಗಮನಿಸಿ ದೇವಿಯ ರೂಪವರ್ಣನೆ ಅರ್ಪೂವಾಗಿ ಕಲೆಗಟ್ಟಿದೆ.
ರಾಕಾ ಚಂದ್ರವದನಾಯಾಂ ರಾಜೀವ ನಯನಾಯಾಂ | ಪಾಕಾರಿನುತ ಚರಣಾಯಾಂ ಆಕಾಶಾದಿ ಕಿರಣಾಯಾಂ |
ಹ್ರೀಂಕಾರ ವಿಪಿನ ಹರಿಣ್ಯಾ ಹ್ರೀಂಕಾರ ಸುಶರೀರಿಣ್ಯಾಂ | ಹ್ರೀಂಕಾರ ತರುಮಂಜಂರ್ಯಾಂ ಹ್ರೀಂಕಾರೇಶ್ವರ್ಯಾಂ ಗೌರ್ಯಾಂ || 
   ಅಲ್ಲದೆ ಲಲಿತಾ ತ್ರಿಶತಿಯ ಹ್ರೀಂಕಾರ ನಾಮವಿಶೇಷಗಳು ಅನುಪಲ್ಲವಿಯಲ್ಲಿ ರಾರಾಜಿಸುತ್ತಿವೆ. ಹ್ರೀಂಕಾರ ಸುಶರೀರಿಣ್ಯಾಂ (ಲಲಿತಾ ತ್ರಿಶತಿಯ 100ನೇ ನಾಮವಾದ ಹ್ರೀಂಕಾರ ಶರೀರಿಣಿ ಎಂಬ ಪದಕ್ಕೆ ಪರ್ಯಾಯವಾಗಿ ಬಳಸಲ್ಪಟ್ಟಂತಿದೆ), ಹ್ರೀಂಕಾರ ವಿಪಿನ ಹರಿಣ್ಯಾ (ಲಲಿತಾ ತ್ರಿಶತಿಯ 213ನೇ ನಾಮ ಹ್ರೀಂಕಾರಾಣ್ಯಹರಿಣೀ ಎಂಬ ನಾಮಕ್ಕೆ ಪರ್ಯಾಯ ಪದವಾಗಿದೆ), ಹ್ರೀಂಕಾರ ತರುಮಂಜಂರ್ಯಾಂ (ಲಲಿತಾ ತ್ರಿಶತಿಯ 220ನೇ ನಾಮ), ಹ್ರೀಂಕಾರೇಶ್ವರ್ಯಾಂ ಗೌರ್ಯಾಂ ಲಲಿತಾ ತ್ರಿಶತಿಯ ಹ್ರೀಂಕಾರ ನಾಮದಂತೆ ಕಂಗೊಳಿಸುತ್ತದೆ.
 
ಚರಣದಲ್ಲಿ ವಿರಿಂಚಿ ಹರೀಶಾನ ಎಂಬ ಪದವು ಲಲಿತಾ ತ್ರಿಶತಿಯ 46ನೇ ನಾಮ ಈಶಾನಾದಿಬ್ರಹ್ಮಮಯೀ ಎಂಬ ನಾಮಕ್ಕೆ ಹತ್ತಿರವಾಗಿದೆ ಎನಿಸುತ್ತದೆ. ನೇರವಾಗಿ ರಾಗಮುದ್ರೆಯನ್ನು ಬಳಸಲು ಸಾಧ್ಯವಿಲ್ಲದ ಕಾರಣ ರಾಗಮುದ್ರೆಯನ್ನು ಸುಪ್ತವಾಗಿ ಹರೀಶಾನ(ಶಹನಾ-ರಾಗದ ಹೆಸರು) ಎಂಬಲ್ಲಿ ಪೋಣಿಸಿದ್ದು ದೀಕ್ಷಿತರ ಜಾಣ್ಮೆಗೆ ಸಾಕ್ಷಿ.
  ನಾವು ಜಗನ್ಮಾತೆಯಾದ ಕಮಲಾಂಬಿಕೆಯನ್ನು ಏಕಚಿತ್ತದಿಂದ ಆರಾಧಿಸೋಣ.

Tuesday, 26 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 7


ಷಷ್ಠಮ ಆವರಣ ಕೃತಿ

ಕಮಲಾಂಬಿಕಾಯಾಃ   ರಾಗ: ಪುನ್ನಾಗವರಾಳಿ   ತಾಳ: ಆದಿತಾಳ

ಕಮಲಾಂಬಿಕಾಯಾಃ ತವ ಭಕ್ತೋಹಂ ಶ್ರೀ |
ಶಂಕರ್ಯಾಃ ಶ್ರೀಕರ್ಯಾಃ ಸಂಗೀತ ರಸಿಕಾಯಾಃ ಶ್ರೀ ||

ಸುಮಶರೇಷು ಕೋದಂಡ ಪಾಶಾಂಕುಶ ಪಾಣ್ಯಾಃ ||
ಅತಿ ಮಧುರತರ ವಾಣ್ಯಾಃ ಶರ್ವಾಣ್ಯಾಃ ಕಲ್ಯಾಣ್ಯಾ ||

ದಶಕಲಾತ್ಮಕ ವಹ್ನಿಸ್ವರೂಪ ಪ್ರಕಾಶಾಂತರ್ದಶಾರಾ | ಸರ್ವರಕ್ಷಾಕರ ಚಕ್ರೇಶ್ವರ್ಯಾಃ ||
ತ್ರಿದಶಾದಿನುತ ಕಚವರ್ಗದ್ವಯಮಯ ಸರ್ವಜ್ಞಾದಿ | ದಶಶಕ್ತಿ ಸಮೇತ ಮಾಲಿನಿ ಚಕ್ರೇಶ್ವರ್ಯಾಃ |
ತ್ರಿದಶವಿಂಶದ್ವರ್ಣ ಗರ್ಭಿಣೀ ಕುಂಡಲಿನ್ಯಾಃ | ದಶಮುದ್ರಾ ಸಮಾರಾಧಿತ ಕೌಳಿನ್ಯಾಃ ||
ದಶರಥಾದಿನುತ ಗುರುಗುಹ ಜನಕ ಶಿವ ಬೋಧಿನ್ಯಾಃ | ದಶಕರಣವೃತ್ತಿ ಮರೀಚಿ ನಿಗರ್ಭ ಯೋಗಿನ್ಯಾಃ ಶ್ರೀ ||
   ………………………………………………………………………………………………………

  ಶ್ರೀಚಕ್ರದ ಆರನೆಯ ಆವರಣದ ರಚನೆಯಾದ ಶ್ರೀ ಕಮಲಾಂಬಿಕಯಾಸ್ತವ ಭಕತೋಹಂ ಕೃತಿಯು ಷಷ್ಠಿ ವಿಭಕ್ತಿಯಲ್ಲಿದೆ. ಹತ್ತು ತ್ರಿಕೋಣಗಳಿಂದ ಕೂಡಿದ ಈ ಆವರಣದ ಹೆಸರು ಅಂತರ್ದಶಾರ. ಚಕ್ರದ ಹೆಸರು ಸರ್ವರಕ್ಷಾಕರ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರ ಮಾಲಿನಿ. ಯೋಗಿನಿಯ ಹೆಸರು ನಿಗರ್ಭ ಯೋಗಿನಿ. 
   ಈ ಆವರಣದಲ್ಲಿ ಹತ್ತು ತ್ರಿಕೋಣಗಳಿದ್ದು, ಅವುಗಳ ಹೆಸರು ಇಂತಿವೆ.
ಸರ್ವಜ್ಞೆ, ಸರ್ವಶಕ್ತೇ, ಸರ್ವೈಶ್ವರ್ಯಪ್ರದೇ, ಸರ್ವಜ್ಞಾನಮಯೀ, ಸರ್ವವ್ಯಾಧಿನಿವಾರಿಣೀ, ಸರ್ವಾಧಾರ ಸ್ವರೂಪೇ, ಸರ್ವಪಾಪಹರೇ, ಸರ್ವಾನಂದಮಯೀ, ಸರ್ವರಕ್ಷಾಸ್ವರೂಪಿಣೀ, ಸರ್ವೇಪ್ಸಿತಫಲಪ್ರದೇ.
ಈ ಕೃತಿಯ ಪಲ್ಲವಿಯ ಸಾಹಿತ್ಯವೇ ಅದ್ಭುತ. ಶಂಕರನ ಮಡದಿಯೂ, ಶ್ರೀಕರಿಯೂ, ಸಂಗೀತ ರಸಿಕೆಯೂ ಆದ ಶ್ರೀ ಕಮಲಾಂಬಿಕೆಯ ಭಕ್ತನು ನಾನು ಎಂದು ದೀಕ್ಷಿತರು ಕೃತಿಯಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ.
  ಅನುಪಲ್ಲವಿಯ ಸಾಹಿತ್ಯದಲ್ಲಿ ಪುಷ್ಪಬಾಣವನ್ನೂ , ಕಬ್ಬಿನ ಬಿಲ್ಲನ್ನೂ, ಪಾಶಾಂಕುಶವನ್ನು ಹಿಡಿದಿರುವವಳು ಎಂಬ ಪದವು ಮನೋರೂಪೇಕ್ಷುಕೋದಂಡ(10), ಪಂಚತನ್ಮಾತ್ರ ಸಾಯಕ(11) ಎಂಬ ಲಲಿತಾಸಹಸ್ರನಾಮದ 10,11ನೇ ನಾಮದ ಪ್ರತಿರೂಪದಂತಿದೆ.
  ಚರಣ ಸಾಹಿತ್ಯದಲ್ಲಿ ದೀಕ್ಷಿತರು ವೈಶಿಷ್ಟ್ಯಪೂರ್ಣವಾದ ಕವಿತಾಶಕ್ತಿಯನ್ನು ನೋಡಬಹುದು. ಇಲ್ಲಿ ದಶ ಎಂಬ ಪದ ಆರು ಸಲ ಬಳಸಲ್ಪಟ್ಟಿದೆ. ಅವುಗಳು ಇಂತಿವೆ. 1.ದಶಕಲಾತ್ಮಕ, 2. ಪ್ರಕಾಶಾಂತರ್ದಶಾರಾ, 3. ತ್ರಿದಶಾದಿನುತ, 4. ದಶಶಕ್ತಿ ಸಮೇತ ಮಾಲಿನಿ, 5. ತ್ರಿದಶವಿಂಶದ್ವರ್ಣ, 6. ದಶಮುದ್ರಾ ಸಮಾರಾಧಿತ. 
ಕೃತಿಯಲ್ಲಿ ಬಳಸಲ್ಪಟ್ಟ ಶ್ರೀ ಲಲಿತಾ ಸಹಸ್ರನಾಮದ ನಾಮಗಳು - ಶಂಕರ್ಯಾಃ (ಶ್ರೀ ಲಲಿತಾ ಸಹಸ್ರನಾಮದ 126ನೇ ನಾಮ),  ಶ್ರೀಕರ್ಯಾಃ (ಶ್ರೀ ಲಲಿತಾ ಸಹಸ್ರನಾಮದ 127ನೇ ನಾಮ), ಶರ್ವಾಣ್ಯಾಃ (ಶ್ರೀ ಲಲಿತಾ ಸಹಸ್ರನಾಮದ 124ನೇ ನಾಮ),  ದಶಮುದ್ರಾ ಸಮಾರಾಧಿತ (ಶ್ರೀ ಲಲಿತಾ ಸಹಸ್ರನಾಮದ 977ನೇ ನಾಮ), ಕೌಲಿನ್ಯಾಃ (ಶ್ರೀ ಲಲಿತಾ ಸಹಸ್ರನಾಮದ 94ನೇ ನಾಮ).

Monday, 25 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 6


ಪಂಚಮ ಆವರಣ ಕೃತಿ

ಶ್ರೀ ಕಮಲಾಂಬಾಯಾಃ   ರಾಗ: ಭೈರವಿ  ತಾಳ: ಮಿಶ್ರಛಾಪುತಾಳ

ಶ್ರೀ ಕಮಲಾಂಬಾಯಾಃ ಪರಂ ನಹಿ ರೇ ರೇ ಚಿತ್ತ
ಕ್ಷಿತ್ಯಾದಿ ಶಿವಾಂತ ತತ್ತ್ವ ಸ್ವರೂಪಿಣ್ಯಾಃ ||

ಶ್ರೀಕಂಠ ವಿಷ್ಣು ವಿರಿಂಚಾದಿ ಜನಯಿತ್ರಯಾಃ |
ಶಿವಾತ್ಮಕ ವಿಶ್ವಕತ್ರ್ಯಾಃ ಕಾರಯಿತ್ರ್ಯಾಃ ||

ಶ್ರೀಕರ ಬಹಿರ್ದಶಾರ ಚಕ್ರಸ್ಥಿತ್ಯಾ ಸೇವಿತ | ಭೈರವಿ ಭಾರ್ಗವಿ ಭಾರತ್ಯಾಃ ||

ನಾದಮಯ ಸೂಕ್ಷ್ಮರೂಪ ಸರ್ವಸಿದ್ಧಿ ಪ್ರದಾದಿ | ದಶ ಶಕ್ತ್ಯಾರಾಧಿತ ಮೂರ್ತೇಃ |
ಶ್ರೋತ್ರಾದಿ ದಶಕರಣಾತ್ಮಕ ಕುಳ ಕೌಳಿಕಾದಿ | ಬಹುವಿಧೋಪಾಸಿತ ಕೀರ್ತೇಃ |
ಅಭೇದ ನಿತ್ಯ ಶುದ್ಧ  ಬುದ್ಧ ಮುಕ್ತ | ಸಚ್ಚಿದಾನಂದಮಯ ಪರಮಾದ್ವೈತ ಸ್ಪೂರ್ತೇಃ |
ಆದಿ ಮದ್ಯಾಂತ ರಹಿತ ಪ್ರಮೇಯ | ಗುರುಗುಹ ಮೋದಿತ ಸರ್ವಾರ್ಥ ಸಾಧಕ ಪೂರ್ತೇಃ ||

ಮೂಲಾದಿ ನವಾಧಾರ ವ್ಯಾವೃತ್ತ ದಶಧ್ವನಿ ಬೇಧಜ್ಞ ಯೋಗಿ ವೃಂದ ಸಂರಕ್ಷಿಣ್ಯಾಃ |
ವಿನೋದ ಕರಣ ಪಟುತರ ಕಟಾಕ್ಷ ವೀಕ್ಷಣ್ಯಾಃ ||
.......…....….................…............
ಭೈರವಿರಾಗದ ಶ್ರೀ ಕಮಲಾಂಬಿಕಯಾಃ ಪರಂ ನಹಿ ರೇರೇ ಪಂಚಮ ನವಾವರಣ ರಚನೆಯು ಪಂಚಮಿ ವಿಭಕ್ತಿಯಲ್ಲಿದೆ. ಈ ಆವರಣದ ಹೆಸರು ಬಹಿದರ್ಶಾರ. ಚಕ್ರದ ಹೆಸರು ಸರ್ವಾರ್ಥ ಸಾಧಕ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರಾಶ್ರೀ. ಯೋಗಿನಿಯ ಹೆಸರು ಕುಲೋತ್ತೀರ್ಣ ಯೋಗಿನಿ. ಹತ್ತು ತ್ರಿಕೋಣಗಳಿಂದ ಕೂಡಿದ ಈ ತ್ರಿಕೋಣಗಳ ಹೆಸರು ಇಂತಿವೆ.
ಸರ್ವಸಿದ್ಧಿಪ್ರದೇ, ಸರ್ವಸಂಪದ್ಪ್ರದೇ, ಸರ್ವಪ್ರಿಯಂಕರೀ, ಸರ್ವಮಂಗಳಕಾರಿಣೀ, ಸರ್ವಕಾಮಪ್ರದೇ, ಸರ್ವದುಃಖವಿಮೋಚನೀ, ಸರ್ವಮೃತ್ಯುಶಮನೀ, ಸರ್ವವಿಘ್ನನಿವಾರಿಣೀ, ಸರ್ವಾಂಗ ಸುಂದರೀ, ಸರ್ವಸೌಭಾಗ್ಯದಾಯಿನೀ.
ದೀಕ್ಷಿತರು ಪಲ್ಲವಿಯಲ್ಲಿ ಶ್ರೀ ಕಮಲಾಂಬಿಕಾಯಾಃ ಪರಂ ನಹಿ ರೇ ರೇ ಎಂದು ಹೇಳಿದ್ದಾರೆ. ಅಂದರೆ ಕಮಲಾಂಬಿಕೆಗಿಂತಲೂ ಬೇರೆ ಯಾವುದು ಇಲ್ಲವೇ ಇಲ್ಲ ಅಂದಿದ್ದಾರೆ. ಬ್ರಹ್ಮ, ವಿಷ್ಣು, ರುದ್ರರ ಜನನಿ ಇವಳು. ಶಿವಸ್ವರೂಪವಾದ ಪ್ರಪಂಚವನ್ನು ಸೃಷ್ಟಿಸುವವಳು, ಪಾಲಿಸುವವಳು ಇವಳೇ ಅಂದಿದ್ದಾರೆ. ಚರಣದಲ್ಲಿ ನಾದ ಸೂಕ್ಷ್ಮರೂಪಳೆಂದು ತಾಯಿಯನ್ನು ಹೊಗಳಿದ್ದಾರೆ. ದಶ ಶಕ್ತಿಗಳಿಂದ ಆರಾಧಿತಳೂ, ಬಹುವಿಧಗಳಿಂದ ಪೂಜೆಗೊಳ್ಳುವವಳೂ ಎಂದಿದ್ದಾರೆ. ಕೊನೆಯ ಪದವಾದ ಕಟಾಕ್ಷ ವೀಕ್ಷಣ್ಯಾಃ ಪದದ ಮೂಲಕ ತನ್ನ ಸಮರ್ಥವಾದ ಕಡೆಗಣ್ಣ ನೋಟವುಳ್ಳ ಕಮಲಾಂಬಿಕೆಗಿಂತ ಅನ್ಯ ಯಾವುದಿದೆ. ಅವಳೇ ಎಲ್ಲ , ಅವಳಿಂದಳೇ ಎಲ್ಲ ಎಂದು ದೀಕ್ಷಿತರು ಹೇಳಿದ್ದಾರೆ.

Sunday, 24 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 5


ಚತುರ್ಥ ನವಾವರಣ ಕೃತಿ
ಕಮಲಾಂಬಿಕಾಯೈ            ರಾಗ: ಕಾಂಭೋಜಿ           ತಾಳ: ಅಟ್ಟತಾಳ

ಕಮಲಾಂಬಿಕಾಯೈ ಕನಕಾಂಶುಕಾಯೈ | ಕರ್ಪೂರ ವೀಟಿಕಾಯೈ ನಮಸ್ತೇ ನಮಸ್ತೇ ||
ಕಮಲಾ ಕಾಂತಾನುಜಾಯೈ ಕಾಮೇಶ್ವರ್ಯೈ ಅಜಾಯೈ | 
ಹಿಮಗಿರಿ ತನುಜಾಯೈ ಹ್ರೀಂಕಾರ ಪೂಜ್ಯಾಯೈ ||

ಕಮಲಾ ನಗರ ವಿಹಾರಿಣ್ಯೈ | ಖಲ ಸಮೂಹ ಸಂಹಾರಿಣ್ಯೈ |
ಕಮಣೀಯ ರತ್ನ ಹಾರಿಣ್ಯೈ |  ಕಲಿಕಲ್ಮಷ ಹಾರಿಣ್ಯೈ ||

ಸಕಲ ಸೌಭಾಗ್ಯದಾಯೈ | ಕಾಂಭೋಜ ಚರಣಾಯೈ |
ಸಂಕ್ಷೋಭಿಣ್ಯಾಧಿ ಶಕ್ತಿಯುತ ಚತುರ್ಥ ಆವರಾಣಾಯೈ |
ಪ್ರಕಟ ಚತುರ್ದಶ ಭುವನ ಭರಣಾಯೈ |
ಪ್ರಬಲ ಗುರುಗುಹ ಸಂಪ್ರದಾಯಾಂತಃ ಕರಣಾಯೈ |
ಅಕಳಂಕ ರೂಪ ವರ್ಣಾಯೈ ಅಪರ್ಣಾಯೈ ಸುಪರ್ಣಾಯೈ |
ಸುಕರದೃತ ಛಾಪಬಾಣಾಯೈ | ಶೋಭನಕರ ಮನುಕೋಣಾಯೈ ||

ಸಕುಂಕುಮಾದಿ ಲೇಪನಾಯೈ | ಚರಾಚರಾದಿ ಕಲ್ಪನಾಯೈ |
ಚಿಕುರ ವಿಜಿತ ನೀಲ ಘನಾಯೈ | ಚಿದಾನಂದ ಪೂರ್ಣ ಘನಾಯೈ ||

   ಕಾಂಭೋಜಿ ರಾಗದ ಕಮಲಾಂಬಿಕಾಯೈ ಈ ಕೃತಿಯು ಕಮಲಾಂಬಾ ನವಾವರಣದ ಚತುರ್ಥ ಆವರಣ ಕೃತಿಯಾಗಿದೆ. ಚತುರ್ಥಿ ವಿಭಕ್ತಿಯಲ್ಲಿದೆ. ಆವರಣದ ಹೆಸರು ಸರ್ವಸೌಭಾಗ್ಯದಾಯಕ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರವಾಸಿನಿ. ಯೋಗಿನಿಯ ಹೆಸರು ಸಂಪ್ರದಾಯ ಯೋಗಿನಿ.
  ಶ್ರೀಚಕ್ರದ ನಾಲ್ಕನೆಯ ಆವರಣವಾದ ಇದು ಹದಿನಾಲ್ಕು ತ್ರಿಕೋಣಗಳಿಂದ ಕೂಡಿದೆ. ಆ ಹದಿನಾಲ್ಕು ತ್ರಿಕೋಣಗಳ ಹೆಸರು ಇಂತಿವೆ.
  ಸರ್ವಸಂಕ್ಷೋಭಿಣಿ, ಸರ್ವವಿದ್ರಾವಿಣಿ, ಸರ್ವಾಕರ್ಷಿಣಿ, ಸರ್ವಾಹ್ಲಾದಿನಿ, ಸರ್ವಸಮ್ಮೋಹಿನಿ, ಸರ್ವಸ್ತಂಭಿಣಿ, ಸರ್ವಜೃಂಭಿಣಿ, ಸರ್ವವಶಂಕರಿ, ಸರ್ವರಂಜನಿ, ಸರ್ವೋನ್ಮಾದಿನಿ, ಸರ್ವಾರ್ಥಸಾಧಿಕೆ, ಸರ್ವಸಂಪತ್ತಿಪೂರಣ, ಸರ್ವಮಂತ್ರಮಯೀ, ಸರ್ವದ್ವಂದ್ವಕ್ಷಯಕರೀ.
  ಪಲ್ಲವಿಯಲ್ಲಿಯೆ ಕರ್ಪೂರ ವೀಟಿಕಾ ಎಂಬ ಲಲಿತಾ ಸಹಸ್ರನಾಮದ 26ನೆ ನಾಮವನ್ನು ಬಳಸಿಕೋಳ್ಳಲಾಗಿದೆ.
ಚರಣದಲ್ಲಿ ಮೊದಲ ಸಾಲಿನಲ್ಲಿ ಸಕಲ ಸೌಭಾಗ್ಯದಾಯಕಾಂಭೋಜ ಚರಣಾಯೈ ಎಂಬಲ್ಲಿ ಆವರಣ ಚಕ್ರದ ನಾಮದೊಂದಿಗೆ ರಾಗಮುದ್ರೆಯನ್ನು ಸುಲಲಿತವಾಗಿ ಪೋಣಿಸಲಾಗದೆ. ಈ ಚಕ್ರದಲ್ಲಿರುವ ಹದಿನಾಲ್ಕು ತ್ರಿಕೋಣಗಳನ್ನು ಹದಿನಾಲ್ಕು ಲೋಕಗಳಿಗೆ ದೀಕ್ಷಿತರು ಹೋಲಿಸಿದ್ದಾರೆ. ಲಲಿತಾಸಹಸ್ರನಾಮವಾದ ಅಪರ್ಣಾ, ಲಲಿತಾ ತ್ರಿಶತಿಯ ಸಕುಂಕುಮದಿ ಲೇಪನಾ ಎಂಬ ನಾಮಗಳು ಕೃತಿಯ ಘನತೆಯನ್ನು ಇಮ್ಮಡಿಗೊಳಿಸಿದೆ.  ಕೃತಿಯನ್ನು ಗಮನಿಸಿದರೆ ಎಲ್ಲಾ ಪದವು ಯೈ ಎಂದು ಕೊನೆಗೊಳ್ಳುತ್ತದೆ. ಇದೂ ಕೃತಿಯ ಸೊಗಸಿಗೊಂದು ಹಿಡಿದ ಕನ್ನಡಿಯಾಗಿದೆ.

Friday, 22 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 4



ತೃತೀಯ ನವಾವರಣ ಕೃತಿ

ಶ್ರೀಕಮಲಾಂಬಿಕಯಾ ಕಟಾಕ್ಷಿ ತೋಹಂ ರಾಗ: ಶಂಕರಾಭರಣ ತಾಳ: ರೂಪಕ ತಾಳ

ಶ್ರೀ ಕಮಲಾಂಬಿಕಯಾ ಕಟಾಕ್ಷಿತೋಹಂ | ಸಚ್ಚಿದಾನಂದ ಪರಿಪೂರ್ಣ ಬ್ರಹ್ಮಾಸ್ಮಿ ||
ಪಾಕಾಶಾಸನಾದಿ ಸಕಲ ದೇವತಾ ಸೇವಿತಯಾ | ಪಂಕಜಾಸನಾದಿ ಪಂಚಕೃತ್ಯ ಕೃತ್ ಭಾವಿತಯಾ ||

ಕೋಕಹರ ಚತುರಪದಯಾ | ಮೂಕ ವಾಕ್ಯವಾಕ್ ಪ್ರದಯಾ |
ಕೋಕನದ ವಿಜಯ ಪದಯಾ | ಗುರುಗುಹ ತತ್ರೈ ಪದಯಾ ||

ಅನಂಗ ಕುಸುಮಾದ್ಯಷ್ಟ ಶಕ್ತ್ಯಾ ಕಾರಯಾ | ಅರುಣ ವರ್ಣ ಸಂಕ್ಷೋಭಣ ಚಕ್ರ ಕಾರಯಾ |
ಅನಂತ ಕೋಟ್ಯಂಡ ನಾಯಕ ಶಂಕರ ನಾಯಿಕಯಾ | ಅಷ್ಟವರ್ಗಾತ್ಮಕ ಗುಪ್ತತರಯಾ ವರಯಾ ||

ಅನಂಗಾದ್ಯುಪಾಸಿತಯಾ | ಅಷ್ಟದಳಾಬ್ಜ ಸ್ಥಿತಯಾ |
ಧನುರ್ಭಾಣಧರಕರಯಾ ದಯಾ ಸುಧಾ ಸಾಗರಯಾ ||


ಶ್ರೀ ಕಮಲಾಂಬಾ ನವಾವರಣದ ಮೂರನೇ ಕೃತಿಯಾದ ಶಂಕರಾಭರಣ ರಾಗದ ಶ್ರೀ ಕಮಲಾಂಬಿಕಯಾ ಕಟಾಕ್ಷಿತೊಹಂ ಮೂರನೇ ವಿಭಕ್ತಿಯಲ್ಲಿದೆ. ಈ ಆವರಣದ ಚಕ್ರದ ಹೆಸರು ಸರ್ವಸಂಕ್ಷೋಭಣ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರಸುಂದರಿ, ಯೋಗಿನಿಯಹೆಸರು ಗುಪ್ತತರ ಯೋಗಿನಿ. ಈ ಕೃತಿಯು ಶ್ರೀ ಚಕ್ರದ ಮೂರನೆಯ ಆವರಣದ ಅಷ್ಟ ಕಮಲದಳವನ್ನು ಸಂಭೋಧಿಸುತ್ತದೆ. ಆ ಅಷ್ಟ ಕಮಲದಳಗಳ ಹೆಸರು ಇಂತಿವೆ.
ಅನಂಗ ಕುಸುಮಾ, ಅನಂಗ ಮೇಖಲಾ, ಅನಂಗ ಮದನಾ, ಅನಂಗ ಮದನಾತುರಾ, ಅನಂಗ ರೇಖಾ, ಅನಂಗ ವೇಗಿನಿ, ಅನಂಗಾಮಕುಶ, ಅನಂಗಮಾಲಿನಿ.
  
 ದೀಕ್ಷಿತರ ಸಾಹಿತ್ಯ ಜ್ಞಾನ ಯಾವ ರೀತಿ ಇದೆ ಎಂದು ಈ ಕೃತಿಯ ಪದಭಂಡಾರವನ್ನು ನೋಡಿದಾಗ ತಿಳಿಯುತ್ತದೆ.  ‘ಪಂಕಜಾಸನಾದಿ ಪಂಚಕೃತ್ಯ ಕೃತ್ ಭಾವಿತಯಾ’, ‘ಅನಂಗ ಕುಸುಮಾದ್ಯಷ್ಟ ಶಕ್ತ್ಯಾ ಕಾರಯಾ’,’ಅನಂತ ಕೋಟ್ಯಂಡ ನಾಯಕ ಶಂಕರ ನಾಯಿಕಯಾ’, ‘ಅನಂಗಾದ್ಯುಪಾಸಿತಯಾ’, ‘ಧನುರ್ಭಾಣಧರಕರಯಾ’ ಮುಂತಾದ ನಾಮಗಳು ಯಾವ ಲಲಿತಾ ಸಹಸ್ರನಾಮ, ಲಲಿತಾತ್ರಿಶತೀಗೂ ಕಡಿಮೆಯಿಲ್ಲದಂತಿದೆ. ಇಲ್ಲಿ ರಾಗ ಮದ್ರೆಯನ್ನು ದೀಕ್ಷಿತರು ಸಾಹಿತ್ಯಭಾವಕ್ಕೆ ದಕ್ಕೆಯಾಗದಂತೆ ಶಂಕರ ನಾಯಿಕಯಾ(ಶಂಕರಾಭರಣ) ಎಂದು ಬಹಳ ಜಾಣ್ಮೆಯಿಂದ ಬಳಸಿಕೊಂಡಿದ್ದಾರೆ ಎನಿಸುತ್ತದೆ. ನಾವು ಶ್ರೀ ಕಮಲಾಂಬೆಯನ್ನು ದುರಿತವ ದೂರಿಕರಿಸು ಎಂದು ಭಕ್ತಿಯಿಂದ ಬೇಡಿಕೊಳ್ಳೋಣ.

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 3

ದ್ವಿತೀಯ  ನವಾವರಣ ಕೃತಿ

ಕಮಲಾಂಬಾಂ ಭಜರೇ ರೇ    ರಾಗ: ಕಲ್ಯಾಣಿ       ತಾಳ: ಆದಿತಾಳ      

ಕಮಲಾಂಬಾಂ  ಭಜರೇ ರೇ ಮಾನಸ
ಕಲ್ಪಿತ ಮಾಯಾಕಾರ್ಯಂ ತ್ಯಜರೇ  ||

ಕಮಲಾವಾಣೀ ಸೇವಿತ ಪಾಶ್ರ್ವಾಂ
ಕಂಬು ಜಯ ಗ್ರೀವಾಂ ನತದೇವಾಂ||

ಸರ್ವಾಶಾಪಾರಿಪೂರಕ ಚಕ್ರಸ್ವ್ವಾಮಿನೀಂ | ಪರಮ ಶಿವಕಾಮಿನೀಂ |
ದೂರ್ವಾಸಾರ್ಚಿತ ಗುಪ್ತಯೋಗಿನೀಂ | ದುಃಖಧ್ವಂಸಿನೀಂ |
ನಿರ್ವಾಣ ನಿಜಸುಖ ಪ್ರದಾಯಿನೀಂ | ನಿತ್ಯ ಕಲ್ಯಾಣೀಂ ಕಾತ್ಯಾಯಿನೀಂ |
ಶರ್ವಾಣೀಂ ಮಧುಪ ವಿಜಯ ವೇಣೀಂ | ಸದ್ಗುರುಗುಹ ಜನನೀಂ ನಿರಂಜನೀಂ ||

ಗರ್ವಿತ ಭಂಡಾಸುರ ಭಂಜನೀಂ | ಕಾಮ್ಯಾಕರ್ಷಣಾದಿ ರಂಜನೀಂ |
ನಿರ್ವಿಶೇಷ ಚೈತನ್ಯರೂಪಿಣೀಂ | ಉರ್ವೀ ತತ್ತ್ವಾದಿ ಸ್ವರೂಪಿಣೀಂ ||
         
   …………………………………………………………


    ಕಲ್ಯಾಣಿ ರಾಗದ ಈ ದ್ವಿತೀಯ ನವಾವರಣ ಕೃತಿಯು ದ್ವಿತೀಯ ವಿಭಕ್ತಿಯಲ್ಲಿದೆ. ಶ್ರೀಚಕ್ರದ ದ್ವಿತೀಯ ಆವರಣವಾದ ಷೋಡಶದಳ ಪದ್ಮ(ಹದಿನಾರು ದಳದ ಪದ್ಮ)ವನ್ನು ಕೃತಿಯು ಸಂಭೋದಿಸುತ್ತದೆ. ಕೃತಿಯ ಕೊನೆಗೆ ಕಾಮ್ಯಾಕರ್ಷಣಾದಿ ನಿರಂಜನೀ ಎಂದು ದೇವಿಯನ್ನು ದೀಕ್ಷಿತರು ಹೊಗಳಿದ್ದಾರೆ. ಇದು ಚಕ್ರದ ದ್ವಿತೀಯ ಆವರಣವಾದ ಹದಿನಾರು ಕಮಲದಳಗಳ ಹೆಸರು.
   ಈ ಹದಿನಾರು ಕಮಲದಳಗಳ ಹೆಸರು ಇಂತಿವೆ. ಕಾಮ್ಯಾಕರ್ಷಣಿ, ಬುದ್ಯಾಕರ್ಷಣಿ, ಅಹಂಕಾರಾಕರ್ಷಿಣಿ, ಶಬ್ದಾಕರ್ಷಿಣಿ, ಸ್ಪರ್ಶಾಕರ್ಷಿಣಿ, ರೂಪಾಕರ್ಷಿಣಿ, ರಸಾಕರ್ಷಿಣಿ, ಗಂಧಾಕರ್ಷಿಣಿ, ಚಿತ್ತಾಕರ್ಷಿಣಿ, ಧೈರ್ಯಾಕರ್ಷಿಣಿ, ಸ್ಮøತ್ಯಾಕರ್ಷಿಣಿ, ನಾಮಾಕರ್ಷಿಣಿ, ಬೀಜಾಕರ್ಷಿಣಿ, ಆತ್ಮಾಕರ್ಷಿಣಿ, ಅಮೃತಾಕರ್ಷಿಣಿ, ಶರೀರಾಕರ್ಷಿಣಿ.
ಚರಣದಲ್ಲಿ ಸರ್ವಶಾಪರಿಪೂರಕ ಚಕ್ರಸ್ವಾಮಿನಿಂ ಎಂದು ದೀಕ್ಷಿತರು ದೇವಿಯನ್ನು ಹೊಗಳಿದ್ದಾರೆ. ಷೋಡಶ ದಳ ಪದ್ಮದ ಚಕ್ರದ ಹೆಸರು ಸರ್ವಶಾಪರಿಪೂರಕ ಚಕ್ರ.
   ಶರ್ವಾಣೀಂ(ಲಲಿತಾ ಸಹಸ್ರನಾಮದ 124ನೇ ನಾಮ), ಕಾತ್ಯಾಯಿನೀಂ(ಲಲಿತಾಸಹಸ್ರನಾಮದ 556ನೇ ನಾಮ), ನಿರಂಜನೀ(ಲಲಿತಾಸಹಸ್ರನಾಮದ 133ನೇ ನಾಮ), ದುಃಖಧ್ವಂಸಿನೀ(ಲಲಿತಾ ಸಹಸ್ರನಾಮದ 191ನೇ ನಾಮ ದುಃಖಹಂತ್ರಿಯ ಪ್ರತಿರೂಪದಂತಿದೆ.), ಜನನೀ(ಲಲಿತಾ ಸಹಸ್ರನಾಮದ 823ನೇ ನಾಮ), ರಂಜನೀ(ಲಲಿತಾಸಹಸ್ರನಾಮದ 306ನೆ ನಾಮ)ಮುಂತಾದ ಲಲಿತಾ ಸಹಸ್ರನಾಮದ ನಾಮಗಳು ಈ ಕೃತಿಯಲ್ಲಿ ಅದ್ಭುತವಾಗಿ ಹೆಣೆಯಲ್ಪಟ್ಟಿದೆ. ಗರ್ವಿತ ಭಂಡಾಸುರ ಮರ್ದಿನಿ ಎಂಬ ನಾಮವು ಶ್ರೀ ಲಲಿತೋಪಖ್ಯಾನವನ್ನು ನೆನಪಿಸುತ್ತದೆ.
   ಕೊನೆಯ ಸಾಲಿನಲ್ಲಿರುವ ಉರ್ವೀ ತತ್ತ್ವಾದಿ ಚೈತನ್ಯ ಸ್ವರೂಪಿಣೀ ಎಂಬ ಪದವು ಶ್ರೀ ಚಕ್ರದ 36 ತತ್ತ್ವಗಳನ್ನು ಪ್ರತಿಪಾದಿಸುತ್ತದೆ. ಈ 36 ತತ್ತ್ವಗಳೇ ಶ್ರೀ ಚಕ್ರದ ಉಸಿರು ಎನ್ನಲಾಗಿದೆ. ‘ಹಾಂ’ ಎಂಬ ಬೀಜಾಕ್ಷರವನ್ನು ಈ ತತ್ತ್ವಗಳು ಒಳಗೊಂಡಿವೆ. ಆ 36 ತತ್ತ್ವಗಳು ಇಂತಿವೆ.
    ಪ್ರಥ್ವೀ ತತ್ತ್ವ, ಜಲ ತತ್ತ್ವ, ತೇಜ ತತ್ತ್ವ, ವಾಯು ತತ್ತ್ವ, ಆಕಾಶ ತತ್ತ್ವ, ಗಂಧ ತತ್ತ್ವ, ರಸ ತತ್ತ್ವ, ರೂಪ ತತ್ತ್ವ, ಸ್ಪರ್ಶ ತತ್ತ್ವ, ಶಬ್ದ ತತ್ತ್ವ, ಉಪಸ್ಥ ತತ್ತ್ವ, ಪಾದ ತತ್ತ್ವ, ಪಾಣಿ ತತ್ತ್ವ, ವಾಕ್ ತತ್ತ್ವ, ಘ್ರಾಣ ತತ್ತ್ವ, ಜಿಹ್ವಾ ತತ್ತ್ವ, ನೇತ್ರ ತತ್ತ್ವ, ತ್ವಕ್ ತತ್ತ್ವ, ಶ್ರೋತೃ ತತ್ತ್ವ, ಮನಃಸ್ತತ್ತ್ವ, ಅಹಂಕಾರ ತತ್ತ್ವ, ಬುದ್ಧಿ ತತ್ತ್ವ, ಪ್ರಕೃತಿ ತತ್ತ್ವ, ಮಾಯಾ ತತ್ತ್ವ, ಪುರುಷ ತತ್ತ್ವ, ಶುದ್ಧ ವಿದ್ಯಾ ತತ್ತ್ವ, ನಿಯತಿ ತತ್ತ್ವ, ಈಶ್ವರ ತತ್ತ್ವ, ಕಾಲ ತತ್ತ್ವ, ಸದಾಶಿವ ತತ್ತ್ವ, ರಾಗ ತತ್ತ್ವ, ಶಕ್ತಿ ತತ್ತ್ವ, ಕಲಾ ತತ್ತ್ವ, ಶಿವ ತತ್ತ್ವ, ಆತ್ಮ ತತ್ತ್ವ

Thursday, 21 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 2

                                       

                                 ಧ್ಯಾನ ಕೃತಿ

ಕಮಲಾಂಬಿಕೇ                ರಾಗ: ತೋಡಿ            ತಾಳ: ರೂಪಕ ತಾಳ
   ಕಮಲಾಂಬಿಕೇ ಆಶ್ರಿತ ಕಲ್ಪಲತಿಕೇ ಚಂಡಿಕೇ 
    ಕಮನೀಯಾರುಣಾಂಶುಕೇ ಕರವಿಧೃತ ಶುಕೇ ಮಾಮವ ||
    
    ಕಮಲಾಸನಾದಿ ಪೂಜಿತ ಕಮಲ ಪದೇ ಬಹುವರದೇ |
  ಕಮಲಾಲಯ ತೀರ್ಥ ವೈಭವೇ ಶಿವೇ ಕರುಣಾರ್ಣವೇ || | ಶ್ರೀ ಕಮಲಾಂಬಿಕೇ |

  ಸಕಲ ಲೋಕನಾಯಿಕೇ ಸಂಗೀತರಸಿಕೇ |
  ಸುಕವಿತ್ವ ಪ್ರದಾಯಿಕೇ ಸುಂದರೀ ಗತಮಾಯಿಕೇ |
  ವಿಕಳೇಬರ ಮುಕ್ತಿದಾನ ನಿಪುಣೇ ಅಘಹರಣೇ |
  ವಿಯದಾದಿ ಭೂತ ಕಿರಣೇ ವಿನೋದ ಚರಣೇ ಅರುಣೇ ||  | ಶ್ರೀ ಕಮಲಾಂಬಿಕೇ |

 ಸಕಲೇ ಗುರುಗುಹ ಚರಣೇ | ಸದಾಶಿವಾಂತಃ ಕರಣೇ |
 ಅಕಚಟತಪಾದಿ ವರ್ಣೇ | ಅಕSಂಡೈಕ ರಸಪೂರ್ಣೇ ||  | ಶ್ರೀ ಕಮಲಾಂಬಿಕೇ |

   ಈ ರಚನೆ ಕಮಲಾಂಬಾ ನವಾವರಣ ಕೃತಿಗಳಿಗೆ ಧ್ಯಾನ ಕೃತಿಯಾಗಿದೆ. ಇನ್ನು ಮುಂದೆ ಬರುವ ಹತ್ತು ರಚನೆಗಳು ಕಮಲಾಂಬಿಕೆ ಎಂಬ ನಾಮದಿಂದಲೇ ಆರಂಭಗೊಳ್ಳುವುದು. ಇಲ್ಲಿನ ವಿಶೇಷವೆಂದರೆ ಎಲ್ಲಾ ವಿಭಕ್ತಿಗಳಲ್ಲೂ ಕ್ರಮವಾಗಿ ರಚನೆಯಾಗುವುದರಿಂದ ಈ ರಚನೆಗಳನ್ನು  ‘ಕಮಲಾಂಬಾ ವಿಭಕ್ತಿ ಕೃತಿಗಳು’ ಎಂದು ಕರೆಯಲಾಗುತ್ತದೆ. ನವರಾತ್ರಾರಂಭದ ದಿನ ಅಂದರೆ ಪಾಡ್ಯದಂದು ಈ ತೋಡಿರಾಗದ ಕಮಲಾಂಬಿಕೇ ಧ್ಯಾನಕೃತಿಯನ್ನು ಹಾಡಿ, ನಂತರ ಆನಂದಭೈರವಿ ರಾಗದ ‘ಶ್ರೀ ಕಮಲಾಂಬ ಸಂರಕ್ಷತುಮಾಂ’ ಕೃತಿ ಹಾಡುವುದು ಸಂಪ್ರದಾಯ.
   ತೋಡಿ ರಾಗದ ಈ ಕೃತಿಯಲ್ಲಿ ದೀಕ್ಷಿತರ ಅತಿಶಯವಾದ ಭಕ್ತಿ, ಜ್ಞಾನ, ಶ್ರದ್ಧೆಯು ಗೋಚರಿಸಲ್ಪಡುತ್ತದೆ. ದೇವಿಯನ್ನು ವಿವಿಧ ನಾಮಗಳಿಂದ ಹಾಡಿ ಹೊಗಳಿದ್ದಾರೆ. ಈ ಕೃತಿಯು ಮುಂದಿನ ಹತ್ತು ಕೃತಿಗಳಿಗೆ ಪೀಠಿಕಾರೂಪದಲ್ಲಿದೆ. ಇಲ್ಲಿ ದೀಕ್ಷಿತರ ಅಕ್ಷರ ಪ್ರೌಢಿಮೆ ಸ್ಪಷ್ಟವಾಗಿ ಗೋಚರಿಸುತ್ತದೆ.
ಕಮಲಾಂಬಿಕೇ ಆಶ್ರಿತ ಕಲ್ಪಲತಿಕೇ ಚಂಡಿಕೇ | ಕಮನೀಯಾರುಣಾಂಶುಕೇ ಕರವಿಧೃತ ಶುಕೇ ಮಾಮವ ||
ಕಮಲಾಸನಾದಿ ಪೂಜಿತ ಕಮಲ ಪದೇ ಬಹುವರದೇ | ಕಮಲಾಲಯ ತೀರ್ಥ ವೈಭವೇ ಶಿವೇ ಕರುಣಾರ್ಣವೇ ||
 ಪಲ್ಲವಿ ಮತ್ತು ಅನುಪಲ್ಲವಿಯ ಈ ಸಾಹಿತ್ಯ ಶ್ರೀಲಲಿತಾ ತ್ರಿಶತಿಯ ಕಕಾರಾದಿ ನಾಮಗಳ ಹಾಗೆ ಕಂಡುಬರುತ್ತದೆ.
 ಚರಣ ಸಾಹಿತ್ಯದ ಸುಕವಿತ್ವಪ್ರದಾಯಿಕೆ (ಶ್ರೇಷ್ಠ ಕವಿತಾಶಕ್ತಿಯನ್ನು ಅನುಗ್ರಹಿಸುವವಳು) ಪದವನ್ನು ಗಮನಿಸಿದರೆ ದೀಕ್ಷಿತರು ಮುಂದಿನ ತಮ್ಮ ರಚನೆಗೆ ಪ್ರೇರಕಳಾಗಿ ಅನುಗ್ರಹಿಸು ಎಂದು ದೈನ್ಯತೆಯಿಂದ ತಾಯಿಯನ್ನು  ಬೇಡಿದಂತಿದೆ. ಕೃತಿಯ ಕೊನೆಯ ಸಾಲು ಅಕಚಟತಪಾದಿ ವರ್ಣೇ, ಅSಂಡೈಕ ರಸಪ್ರರ್ಣೇ ಎಂಬ ಸಾಹಿತ್ಯ ದೀಕ್ಷಿತರು ಕಮಲಾಂಬಿಕೆಯನ್ನು ಮೈನವಿರೇಳಿಸುವಂತೆ ಸ್ತುತಿಸುತ್ತಿರುವಂತೆ ಕಾಣುತ್ತದೆ.
     ……………………………………………………………………………
               
          ಪ್ರಥಮ ನವಾವರಣ ಕೃತಿ
             ******************************

 ಕಮಲಾಂಬಾಂ ಸಂರಕ್ಷತುಮಾಂ     ರಾಗ: ಆನಂದ ಭೈರವಿ      ತಾಳ: ಮಿಶ್ರಛಾಪುತಾಳ
ಕಮಲಾಂಬಾಂ ಸಂರಕ್ಷತು ಮಾಂ | ಶ್ರೀಹೃತ್ ಕಮಲಾ ನಗರ ನಿವಾಸಿನೀ ||

ಸುಮನ ಸಾರಾದಿತಾಬ್ಜಮುಖೀ | ಸುಂದರ ಮನ ಪ್ರಿಯಕರ ಸಖೀ
ಕಮಲಜಾನಂದ ಭೋಧ ಸುಖೀ | ಕಾಂತಾತಾರ ಪಂಜರ ಶುಕೀ ||

ತ್ರಿಪುರಾದಿ ಚಕ್ರೇಶ್ವರೀ ಅಣಿಮಾದಿ ಸಿದ್ಧೀಶ್ವರೀ |
ನಿತ್ಯ ಕಾಮೇಶ್ವರೀ ಕ್ಷಿತ್ರಿಪುರಾದಿ ತ್ರೈಲೋಕ್ಯ ಮೋಹನ
ಚಕ್ರವರ್ತಿನೀ ಪ್ರಕಟಯೋಗಿನೀ |
ಸುರರಿಪು ಮಹಿಷಾಸುರಾದಿ ಮರ್ದಿನಿ |
ನಿಗಮ ಪುರಾಣಾದಿ ಸಂವೇದಿನೀ ||

ತ್ರಿಪುರೇಶಿ ಗುರುಗುಹ ಜನನೀ | ತ್ರಿಪುರ ಭಂಜನ ರಂಜನೀ |
ಮಧುರಿಪು ಸಹೋದರಿ ತಲೋದರಿ | ತ್ರಿಪುರ ಸುಂದರೀ ಮಹೇಶ್ವರೀ ||
   ………………………………………………………………

ಕಮಲಾಂಬಾ ಸಂರಕ್ಷತುಮಾಂ ಕೃತಿಯು ಶ್ರೀಚಕ್ರದ ಮೊದಲ ಆವರಣ ಕೃತಿ. ಪ್ರಥಮಾ ವಿಭಕ್ತಿ ಕೃತಿ. ಈ ಕೃತಿಯು ಶ್ರೀಚಕ್ರದ ಮೊದಲನೆಯ ಆವರಣವಾದ ಭೂಪುರ ಚಕ್ರವನ್ನು ಸಂಭೋಧಿಸುತ್ತದೆ. ಭೂಪುರದ ಚಕ್ರದ ಹೆಸರು ತ್ರೈಲೋಕ್ಯ ಮೋಹನ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರಾ. ಯೋಗಿನಿಯ ಹೆಸರು ಪ್ರಕಟಯೋಗಿನಿ. ಈ ಎಲ್ಲಾ ವಿವರಗಳನ್ನು ದೀಕ್ಷಿತರು ಕೃತಿಯಲ್ಲಿ ಜಾಣ್ಮೆಯಿಂದ ಜೋಡಿಸಿದ್ದರೆ.

                                             ಮೂರು ರೇಖೆಗಳಿರುವ   ಭೂಪುರ ಚಕ್ರ
                                         ..........................................................
 
    ಭೂಪುರ ಚಕ್ರದಲ್ಲಿ ಮೂರು ರೇಖೆಗಳಿದ್ದು ಮೊದಲನೆಯ ರೇಖೆಯಲ್ಲಿ ಅಣಿಮಾ, ಗರಿಮಾ, ಲಘಿಮಾ, ಮಹಿಮಾ, ಈಶಿತ್ವ, ವಶಿತ್ವ, ಪ್ರಾಪ್ತಿ, ಪ್ರಾಕಾಮ್ಯಗಳು ಎಂಬ ಅಷ್ಟ ಸಿದ್ಧಿಗಳಿವೆ.
   ಎರಡನೆಯ ರೇಖೆಯಲ್ಲಿ ಅಷ್ಟ ಮಾತೃಕೆಯರಾದ ಬ್ರಾಹ್ಮಿ, ಮಾಹೇಶ್ವರಿ, ಕೌಮಾ
   ಮೂರನೆಯ ರೇಖೆಯಲ್ಲಿ ಸರ್ವಸಂಕ್ಷೋಭಿಣಿ, ಸರ್ವವಿದ್ರಾವಿಣಿ, ಸರ್ವಾಕರ್ಷಿಣಿ, ಸರ್ವವಶಂಕರಿ, ಸರ್ವೋನ್ಮಾದಿನಿ, ಸರ್ವಮಹಾಂಕುಶೇ, ಸರ್ವಖೇಚರಿ, ಸರ್ವಬೀಜೇ, ಸರ್ವಯೋನಿ, ಸರ್ವತ್ರಿಖಂಡೇ ಎಂಬ ದಶಮುದ್ರಾ ದೇವತೆಗಳಿದ್ದಾರೆ.
   ಕೃತಿಯ ಮೊದಲಿಗೆ ಬರುವ ಶ್ರೀಹೃತ್ ಕಮಲಾನಗರ ನಿವಾಸಿನಿ ಎಂಬ ಸಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿ, ನಾರಸಿಂಹಿಯರಿದ್ದಾರೆ.ಲು ದೀಕ್ಷಿತರು ಕಮಲಾಂಬೆಯು ನನ್ನ ಹೃದಯವೆಂಬ ಕಮಲಾನಗರದಲ್ಲಿ ವಾಸಿಸುತ್ತಿದ್ದಾಳೆಯೆಂದು ಹೇಳುವಂತಿದೆ. ಚರಣದಲ್ಲಿ ಅಣಿಮಾದಿ ಅಷ್ಟಸಿದ್ಧಿಗಳ ಒಡೆಯಳು ನಿತ್ಯಕಾಮೇಶ್ವರಿ ಎಂದಿದೆ.  ಇದು ಲಲಿತಾ ಸಹಸ್ರನಾಮದ 391ನೇ ನಾಮ ನಿತ್ಯಷೋಡಶಿಕಾರೂಪಾ ಪ್ರತಿರೂಪದಂತಿದೆ.
{ನಿತ್ಯಷೋಡಶಿಕಾರೂಪಾ (16ಮಂದಿ ನಿತ್ಯೆಯರು) : ಕಾಮೇಶ್ವರೀ, ಭಗಮಾಲಿನಿ, ನಿತ್ಯಕ್ಲಿನ್ನಾ, ಭೇರುಂಡಾ, ವಹ್ನಿವಾಸಿನೀ, ಮಹಾವಜ್ರೇಶ್ವರಿ ಅಥವಾ ಮಹಾ ವಿದ್ಯೇಶ್ವರೀ, ಶಿವದೂತಿ, ತ್ವರಿತಾ, ಕುಲಸುಂದರೀ, ನಿತ್ಯಾ, ನೀಲಪತಾಕಿನೀ, ವಿಜಯಾ, ಸರ್ವಮಂಗಲಾ, ಜ್ವಾಲಾಮಾಲಿನೀ, ಚಿತ್ರಾ, ತ್ರಿಪುರಸುಂದರೀ ಇವರು ಹದಿನಾರು ನಿತ್ಯೆಯರು. ಮೊದಲಿನವಳಾದ ಕಾಮೇಶ್ವರಿಯ ಅಂಗಗಳೆಂದು ಉಳಿದ ಹದಿನೈದು ಮಂದಿ ನಿತ್ಯೆಯರು ಪ್ರಸಿದ್ಧರು.}
ಇಡಿ ಕೃತಿಯನ್ನು ಗಮನಿಸಿದಾಗ ದೀಕ್ಷಿತರು ಕಮಲಾಂಬೆಯನ್ನು ತ್ರಿಪುರಾ, ತ್ರಿಪುರೇಶಿ, ತ್ರಿಪುರ ಭಂಜನ ನಿರಂಜನಿ, ತ್ರಿಪುರ ಸುಂದರಿ ಎಂದು ಮನಃಪೂರ್ವಕವಾಗಿ ಬೇಡಿದ್ದಾರೆ ಅನಿಸುತ್ತದೆ. ತ್ರಿಪುರಾ (ಲಲಿತಾಸಹಸ್ರನಾಮದ 626ನೆ ನಾಮ ತ್ರಿಪುರಾ)  ಎಂದರೆ ತ್ರಿಮೂರ್ತಿಗಳಿಗಿಂತಲೂ ಪುರಾತನಳಾದವಳು ಎಂದರ್ಥ ಬರುತ್ತದೆ. ತ್ರ್ರಿಪುರ ಎಂದರೆ ಸುಷಮ್ನಾ, ಇಡಾ, ಪಿಂಗಲಾ ಎಂಬ ಮೂರು ಬಗೆಯ ನಾಡಿಗಳು. ದೇವಿಯು ಇದರಲ್ಲಿ ಆವಾಸಳಾಗಿರುವುದರಿಂದ ತ್ರಿಪುರಾವೆಂದೆನಿಸಿಕೊಂಡಿದ್ದಾಳೆ.
   ನಾಡೀತ್ರಯಂ ತ್ರಿಪುರಾ ಸುಷಮ್ನಾ ಪಿಂಗಲಾ ಇಡಾ | 
   ಮನೋ ಬುದ್ಧಿಸ್ತಥಾ ಚಿತ್ತಂ ಪ್ಮರತ್ರಯಮುದಾಹೃತಮ್ |
   ತತ್ರ ತತ್ರ ವಸತ್ಯೇಷಾ ತಸ್ಮ್ಮಾತ್ತು ತ್ರಿಪುರಾ ಮತಾ || 
ಎಂದು ತ್ರ್ರಿಪುರಾರ್ಣವದಲ್ಲಿ ಹೇಳಿದೆ. ಅವಳ ಮಂಡಲವು ತ್ರಿಕೋಣ. “ಸರ್ವಂ ತ್ರಯಂ ತ್ರಯಂ ಯಸ್ಮಾತ್ತಸ್ಮಾತ್ತು ತ್ರಿಪುರಾ ಮತಾ” ಎಲ್ಲವೂ ಮೂರು ಮೂರು ಆಗಿರುವುದರಿಂದ ತ್ರಿಪುರಾ ಎಂದೆನಿಸಿಕೊಂಡಿದ್ದಾಳೆ.
               …………………………………………………………………………………………………………………………………………