ಭಾರತೀಯ ಸಂಗೀತ ವೇದಜನಿತವಾದುದು. ‘ಮಾತು’ ಅಥವಾ ‘ಸಾಹಿತ್ಯ’ಕ್ಕೆ, ‘ಧಾತು’ ಅಥವಾ ‘ಸಂಗೀತ’ ಪ್ರಯೋಗ ಮಾಡಿರುವ ಮೊಟ್ಟಮೊದಲ ಸನ್ನಿವೇಶ ಕಂಡುಬರುವ ಋಕ್ಸಾಮ ವೇದಮಂತ್ರಗಳಲ್ಲಿ. ಗೀತ, ವಾದ್ಯ, ನೃತ್ಯ ಈ ಮೂರರ ಸಮನ್ವಯವೇ ಸಂಗೀತ. ಈ ಮೂರೂ ವೇದಕಾಲದಲ್ಲಿ ಪ್ರಯೋಗದಲ್ಲಿದ್ದವೆಂದು ತಿಳಿದು ಬರುತ್ತದೆ.
ಹಿಂದೆ ಆಖ್ಯಾನಗೀತೆಗಳಾದ ರಾಮಾಯಣ, ಮಹಾಭಾರತ, ಭಾಗವತಗಳನ್ನು ವೀಣೆಯಲ್ಲಿ ನುಡಿಸಿ ಹಾಡುತ್ತಿದ್ದರೆಂತೆ. ಲವಕುಶರಿಂದ ರಾಮಾಯಣವನ್ನು ವಾಲ್ಮೀಕಿ ಮುನಿಯು ಹಾಡಿಸಿದ್ದರೆಂದೂ, ರಾವಣನು ಸಾಮವೇದನ್ನು ಹಾಡಿದ್ದನೆಂದೂ ಪ್ರತೀತಿಯಿದೆ.
ಭಾರತದ ಸಂಗೀತ ಹೇಗೆ ರೂಪುಗೊಂಡು ಕಾಲಕಾಲಕ್ಕೆ ಹೇಗೆ ಬೆಳೆಯಿತೆಂದು ತಿಳಿಯಲು ನಮಗೆ ದೊರಕಿರುವ ಗ್ರಂಥಗಳೇ ಆಧಾರ. ಭರತಮುನಿಯ ನಾಟ್ಯಶಾಸ್ತ್ರವು ಸಂಗೀತಶಾಸ್ತ್ರವನ್ನು ತಿಳಿಸುವ ಪ್ರಥಮ. ಇದು ಸುಮಾರು ಮೊದಲನೆಯ ಶತಮಾನದ ಗ್ರಂಥವೆಂದು ತಿಳಿದು ಬಂದಿದೆ. ನಾಟ್ಯಶಾಸ್ತ್ರವನ್ನು ಮುಖ್ಯವಾಗಿ, ಸಂಗೀತವನ್ನು ಗೌಣವಾಗಿ ತಿಳಿಸುವ ಈ ಗ್ರ್ರಂಥದಲ್ಲಿ ರಾಗಗಳನ್ನು ಜಾತಿಯೆಂದು ಕರೆಯಲಾಗಿದೆ.
ಭರತನ ನಂತರದವರಾದ ಅವನ ಮಗ ದತ್ತಿಲ, ಅಹೋಬಲ, ಮತಂಗ ಮುಂತಾದವರು ಸಂಗೀತ ಶಾಸ್ತ್ರ ಗ್ರಂಥಗಳನ್ನು ರಚಿಸಿದರು. ಕನ್ನಡಿಗನಾದ ಮತಂಗನ ಬೃಹದ್ದೇಶಿ ಗ್ರಂಥದಲ್ಲಿ ಮೊದಲಬಾರಿಗೆ ರಾಗ ಎಂಬ ಶಬ್ದ ಬಳಕೆಯಾಗಿದೆ. ಕ್ರಿ.ಶ. 5ನೆಯ ಶತಮಾನದಿಂದ ದೇಶೀ ರಾಗಪದ್ಧತಿಯು ಬೆಳೆಯಿತೆನ್ನಬಹುದು. ಈ ಸಂದರ್ಭ ರಾಗಗಳನ್ನು ಶುದ್ಧ, ಭಿನ್ನ, ಗ್ರಾಮ, ರಾಗಾಂಗ, ಉಪಾಂಗ, ಭಾಷಾಂಗಗಳೆಂದು ವರ್ಗೀಕರಿಸಲಾಯಿತು.
ಅನಂತರ 7ನೆಯ ಶತಮಾನಕ್ಕೆ ಸೇರಿದ್ದೆನ್ನಲಾದ ಪುದುಕೋಟೈ ಸಂಸ್ಥಾನದಲ್ಲಿರುವ ಪಲ್ಲವ ದೊರೆ ಮಹೇಂದ್ರವರ್ಮನ ಕಾಲದಲ್ಲಿ ಕುಡುಮಿಯಾಮಲೈ ಎಂಬ ಶಾಸನದಲ್ಲಿ ಸಪ್ತಸ್ವರಗಳ ನಿರೂಪಣೆ ಕಂಡುಬರುತ್ತದೆ. ನಂತರ 7ಮತ್ತು 11ನೇ ಶತಮಾನದ ಮಧ್ಯ ಭಾಗದಲ್ಲಿ ಕಂಡು ಬರುವ ನಾರದನ ಸಂಗೀತ ಮಕರಂದ ಗ್ರಂಥವು ಭಾರತೀಯ ಸಂಗೀತಶಾಸ್ತ್ರದ ಪ್ರಧಾನ ಗ್ರಂಥವೆಂದು ತಿಳಿದು ಬರುತ್ತದೆ. ಇದರಲ್ಲಿ ರಾಗಗಳ ಪಟ್ಟಿ ಮತ್ತು ರಾಗಗಳ ವಿವರಣೆ ಇದೆ. ಈತನು ರಾಗಗಳನ್ನು ಔಡವ, ಷಾಡವ ಮತ್ತು ಸಂಪೂರ್ಣಗಳೆಂದು ವಿಂಗಡಿಸಿದ್ದಾನೆ. 12ನೆಯ ಶತಮಾನದಲ್ಲಿ ಜಯದೇವನಿಂದ ರಚಿತವಾದ ಗೀತಗೋವಿಂದ ಕೃತಿಯಲ್ಲಿ ರಾಗಗಳ ಪರಿಚಯ ಕಾಣಸಿಗುತ್ತದೆ. ಇದೇ ಶತಮಾನದಲ್ಲಿ ರಚಿತವಾದ ಶಾರ್ಙದೇವನ ಸಂಗೀತ ರತ್ನಾಕರ ಇಂದಿಗೂ ಭಾರತೀಯ ಸಂಗೀತಕ್ಕೆ ಪ್ರಮುಖ ಆಧಾರಗ್ರಂಥ. ಈ ಗ್ರಂಥದಲ್ಲಿ ರಾಗಗಳನ್ನು ಜನ್ಯರಾಗ, ಜನಕರಾಗ, ಪ್ರಧಾನರಾಗ ಹಾಗೂ ಉಪರಾಗಗಳೆಂದು ವಿಂಗಡಿಸಲಾಗಿದೆ. ಅಲ್ಲದೆ ಸಂಗೀತದ ಲಕ್ಷ್ಯ ಲಕ್ಷಣಗಳ ಬಗ್ಗೆ ವಿಸ್ತಾರವಾಗಿ ಶಾರ್ಙದೇವನು ಬರೆದಿದ್ದಾನೆ.
ಹೀಗೆ ಬೆಳೆದು ಬಂದ ಭಾರತೀಯ ಸಂಗೀತ 13ನೆಯ ಶತಮಾನದಲ್ಲಿ ಅರೇಬಿಯಾ ಮತ್ತು ಪರ್ಷಿಯನ್ನರ ಧಾಳಿಯಿಂದ ಎರಡು ಕವಲಾಗಿ ಒಡೆಯಿತು. ಈ ಕವಲುಗಳೇ ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತ ಪದ್ಧತಿಗಳು. ಎರಡೂ ಪದ್ಧತಿಗಳಲ್ಲಿ ಸಾದೃಶ್ಯವೂ, ಭೇದವೂ ಇದೆ. ಎರಡೂ ಪದ್ಧತಿಗಳಲ್ಲೂ ರಾಗಗಳು ಒಂದೇ ಆದರೂ, ಹೆಸರುಗಳಲ್ಲಿ ಮತ್ತು ಹಾಡುವ ಕ್ರಮದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಮೊದಲಾಗಿ ಮೇಳಪದ್ಧತಿಯಲ್ಲೇ ವ್ಯತ್ಯಾಸ ಕಂಡುಬರುತ್ತದೆ. ಉತ್ತರಾದಿ ಸಂಗೀತದಲ್ಲಿ ಮೊದಲು ಆರು ಮೇಳಕರ್ತ ರಾಗಗಳಿದ್ದು, ಹತ್ತು ಮೇಳಕರ್ತ ರಾಗಗಳಾಗಿವೆ. ಅವುಗಳನ್ನು ಥಾಟ್‍ಗಳೆಂದು ಹೆಸರಿಸಲಾಗಿದೆ. ಇವುಗಳಿಂದ ಹುಟ್ಟಿದ ರಾಗಗಳನ್ನು ರಾಗಿಣಿಯರೆಂದು ಹೆಸರಿಸಿದ್ದಾರೆ. ದಕ್ಷಿಣಾದಿಯಲ್ಲಿ ಮೊದಲು ಹದಿನೈದು ಮೇಳಕರ್ತ ರಾಗಗಳಿದ್ದು ನಂತರ ಈಗ ಪ್ರಯೋಗದಲ್ಲಿರುವಂತೆ 72 ಮೇಳಕರ್ತರಾಗಗಳಾಗಿದೆ. ಇವುಗಳಿಂದ ಹುಟ್ಟಿದ ರಾಗಗಳಿಗೆ ಜನ್ಯ ರಾಗಗಳೆಂದು ಹೆಸರಿಲಾಗಿದೆ.
ಉತ್ತರದಲ್ಲಿ ಮೊಗಲರ ಕಾಲಕ್ಕೆ ಹಿಂದೂಸ್ತಾನಿ ಸಂಗೀತ(ಉತ್ತರಾದಿ ಸಂಗೀತ) ಉಚ್ಛ್ರಾಯ ಸ್ಥಿತಿಗೆ ತಲುಪಿತು. ಅವರು ಪರ್ಷಿಯಾ, ಅಫಘಾನಿಸ್ತಾನ, ಟರ್ಕಿ, ಅರೇಬಿಯಾ ಮೊದಲಾದ ಕಡೆಯಿಂದ ಸಂಗೀತಗಾರರನ್ನು ಕರೆಸಿ ಅವರನ್ನು ಪೋಷಿಸಿದರು. ಅಲ್ಲದೆ ಮೊಗಲರು ಸುಖಪ್ರಿಯರು, ರಸಿಕರೂ ಆಗಿದ್ದು, ಸಂಗೀತ ಕಲೆಗೆ ಅಪಾರವಾದ ಉತ್ತೇಜನ, ಪೋಷಣೆಗಳನ್ನಿತ್ತರು. ಭಾರತೀಯರು ಹಿಂದಿನಿಂದಲೂ ಉದಾರಿಗಳೂ, ವಿನಯಶೀಲರಾಗಿದ್ದು, ಕಾಲಾನುಸಾರ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸ್ವಭಾವದವರಾಗಿದ್ದಾರೆ. ಹೀಗಾಗಿ ಪರಕೀಯರಿಂದ ಬಂದ ಅನೇಕ ರಾಗಗಳು ನಮ್ಮನ್ನು ಬಿಟ್ಟು ಹೋಗಲಾರದೆ ಅಥವಾ ನಾವು ಅವನ್ನು ಬಿಟ್ಟುಗೊಡದೆ ಅವುಗಳನ್ನು ನಮ್ಮದೆನ್ನುವ ಮುದ್ರೆಯೊತ್ತಿ ನಮ್ಮ ಪದ್ಧತಿಯ ರಾಗಗಳನ್ನಾಗಿ ಮಾಡಿದ್ದಾರೆ ಸಂಗೀತ ಶಾಸ್ತ್ರÀಜ್ಞರು.
ಉತ್ತರಾದಿ ಸಂಗೀತದಲ್ಲಿ ಹಲವಾರು ಶೈಲಿಗಳಿವೆ. ಇವು ದ್ರುಪದ್, ಧಮಾರ್, ಖ್ಯಾಲ್, ಠುಮ್ರಿ, ಟಪ್ಪಾ, ದಾದ್ರಾ, ಗಜಲ್, ಖವ್ವಾಲಿ, ಭಜನ್ ಇತ್ಯಾದಿ. ಉತ್ತರದಲ್ಲಿ ಉತ್ತರಾದಿ ಸಂಗೀತವು ಗೋಪಾಲನಾಯಕ, ಬೃಂದಾವನ ಹರಿದಾಸ ಸ್ವಾಮಿ ಹಾಗೂ ಅಮೀರ್‍ಖುಸ್ರೋವಿನಂಥ ಸಂಗೀತ ಶಾಸ್ತ್ರಜ್ಞನರ ಮೂಲಕ ಹಸನಾಗಿ ಹರಳುಗಟ್ಟಿತು. 19ನೇ ಶತಮಾನದಲ್ಲಿ ಉತ್ತರದಲ್ಲಿ ಹೊಸಶಕೆಯೊಂದು ಆರಂಭವಾಯಿತು. ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿದ ವಿಷ್ಣು ನಾರಾಯಣ ಬಾತ್ಕಂಡೆಯವರು ಈಗ ಪ್ರಚಾರದಲ್ಲಿರುವ ಶಾಸ್ತ್ರೀಯರೂಪವನ್ನು ಮತ್ತು ಅಭ್ಯಾಸಕ್ರಮವನ್ನು ವ್ಯವಸ್ಥೆಗೊಳಿಸಿದರು.
ಇತ್ತ ದಕ್ಷಿಣದಲ್ಲಿ ಕರ್ಣಾಟಕ ಸಂಗೀತವು (ದಕ್ಷಿಣಾದಿ ಸಂಗೀತ) ವಿಜಯನಗರ ಸ್ಥಾಪನಾಚಾರ್ಯ ಶ್ರೀ ವಿದ್ಯಾರಣ್ಯ ಸ್ವಾಮಿಗಳಿಂದ ಹೊಸ ಸ್ವರೂಪ ಗಳಿಸಿತು. ಮುಂದೆ ಕನ್ನಡಿಗರೇ ಆದ ಪುಂಡರೀಕ ವಿಠ್ಠಲ, ವೆಂಕಟಮುಖಿ ಮುಂತಾದ ಶಾಸ್ತ್ರಜ್ಞರಿಂದ ಮತ್ತಷ್ಟು ಹೊಸರೂಪ ಪಡೆದು ಶ್ರೀ ಪುರಂದರ ದಾಸರ ಪ್ರಯತ್ನ ಫಲವಾಗಿ ಈಗಿನ ಶೈಲಿಯನ್ನು ಪಡೆದುಕೊಂಡಿತು.
ಮುಂದೆ 18ನೇ ಶತಮಾನದ ಕಾಲಕ್ಕೆ ಕರ್ಣಾಟಕ ಸಂಗೀತ ಉಚ್ಛ್ರಾಯ ಸ್ಥಿತಿಗೆ ತಲುಪಿತು. ಆ ಕಾಲವು ಕರ್ಣಾಟಕ ಸಂಗೀತದ ಇತಿಹಾಸದಲ್ಲಿ ಸುವರ್ಣಯುಗವೆಂದು ದಾಖಲಾಗಿದೆ. ಆ ಸಂದರ್ಭ ದಕ್ಷಿಣ ಭಾರತದಲ್ಲಿ ಮಹಾಮಹಿಮರಾದ ವಾಗ್ಗೇಯಕಾರರು ಜನಿಸಿ ಹೊಸಕ್ರಾಂತಿಯನ್ನೇ ಮಾಡಿದರು. ಇವರಲ್ಲಿ ತ್ರ್ರಿಮೂರ್ತಿಗಳೆಂದು ಪ್ರಸಿದ್ಧರಾದ ಶ್ರೀ ಶ್ಯಾಮಾಶಾಸ್ತ್ರಿಗಳು, ಶ್ರೀ ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರ ಪ್ರಯತ್ನ ಫಲವಾಗಿ ಕರ್ಣಾಟಕ ಸಂಗೀತವು ಹೊಸ ಆಯಾಮವನ್ನೇ ಪಡೆದುಕೊಂಡಿತು. ಇವರಿಂದ ರಚನೆಗೊಂಡ ಶಾಸ್ತ್ರೀಯವೂ, ಭಕ್ತಿರಸ ಪ್ರಧಾನವಾದ ಕೃತಿಗಳು ಇಂದಿಗೂ ಅಜರಾಮರ. ಮುಂದೆ ಸ್ವಾತಿ ತಿರುನಾಳ್ ಮಹಾರಾಜ್, ಮಹಾ ವೈದ್ಯನಾಥ ಅಯ್ಯರ್, ಪಟ್ಣಂ ಸುಬ್ರಹ್ಮಣ್ಯ ಅಯ್ಯರ್, ವೀಣಾ ಕುಪ್ಪಯ್ಯರ್, ಮೈಸೂರು ವಾಸುದೇವಾಚಾರ್, ವಾಜಲಾಪೇಟೆ ವೆಂಕಟರಮಣ ಭಾಗವತರು, ತಿರುವೊಟ್ಟಿಯರ್ ತ್ಯಾಗಯ್ಯ ಮುಂತಾದವರ ಪ್ರಯತ್ನ ಫಲವಾಗಿ ಕರ್ಣಾಟಕ ಸಂಗೀತ ಮತ್ತಷ್ಟು ವೃದ್ಧಿಗೊಂಡಿತು.
ಭಾರತೀಯರಲ್ಲಿ ಸಂಪ್ರದಾಯ, ಮಡಿವಂತಿಕೆಯನ್ನು ಚಾಚೂ ತಪ್ಪದೆ ಪಾಲಿಸುವ ಮನಸ್ಥಿತಿಯಿದೆ. ಆದರೆ ಇದರ ನಡುವೆಯೂ ಇತರರಿಂದ ಉತ್ಕøಷ್ಟತೆಯೇನಾದರು ದೊರಕಿದರೆ ಅದನ್ನು ಅಷ್ಟೇ ಉದಾರ ಮನೋಭಾವದಿಂದ ಸ್ವೀಕರಿಸುವ ಮನೋಭಾವವೂ ಇದೆ. ಭಾರತವು ದೀರ್ಘಕಾಲ ಆಂಗ್ಲರ ಅಧಿಕಾರ ಮುಷ್ಟಿಯಲ್ಲಿ ಪರಭಾರೆಯಾಗಿದ್ದು ಈಗ ಇತಿಹಾಸ. ಆಗ ಭಾರತೀಯ ಸಂಗೀತವು ಪಾಶ್ಚಾತ್ಯರ ಪ್ರಭಾವಕ್ಕೊಳಗಾಗಿ ಪಾಶ್ಚಾತ್ಯ ಸಂಗೀತವನ್ನು ಅನುಕರಿಸಿ, ಅನುಸರಿಸಿ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತಾರಗೊಳಿಸಿತು. ಈ ಕಾರಣದಿಂದಲೇ ಇಂದು ಭಾರತದ ಸಂಗೀತ ಕಚೇರಿಗಳಲ್ಲಿ ಪಾಶ್ಚಾತ್ಯ ವಾದ್ಯಗಳ ಪ್ರಯೋಗ ಕಂಡು ಬರುತ್ತದೆ. ಕ್ಲ್ಯಾರಿಯೊನೆಟ್, ಸಾಕ್ಸೋಫೋನ್, ಹಾರ್ಮೋನಿಯಂ ಪ್ರಮುಖ ವಾದ್ಯಗಳಾಗಿ ಬಳಸಲ್ಪಡುತ್ತಿವೆ. ಹದಿನೆಂಟನೇ ಶತಮಾನದಲ್ಲಿ ಬಾಲುಸ್ವಾಮಿ ದೀಕ್ಷಿತರು ಪಾಶ್ಚಾತ್ಯ ವಾದ್ಯವಾದ ಪಿಟೀಲನ್ನು ಹಾಡಿಕೆಗೆ ಪಕ್ಕವಾದ್ಯವಾಗಿ ನುಡಿಸುವ ಪ್ರಯೋಗ ಮಾಡಿದರು. ಈ ಪ್ರಯತ್ನ ಫಲವಾಗಿ ಹಾರ್ಮೋನಿಯಂ, ಪಿಟೀಲು, ಕ್ಲ್ಯಾರಿಯೊನೆಟ್, ಸಾಕ್ಸೋಫೋನ್ ಮುಂತಾದ ವಾದ್ಯಗಳು ಯಾವುದೇ ಮಡಿವಂತಿಕೆಯ ಹಂಗಿಲ್ಲದೆ ಭಾರತೀಯ ಸಂಗೀತ ಕಚೇರಿಗಳಲ್ಲಿ ಶುದ್ಧ ಭಾರತೀಯ ವಾದ್ಯಗಳೇ ಆಗಿ ಬಳಕೆಯಲ್ಲಿವೆ.
ಕರ್ಣಾಟಕ ಸಂಗೀತದ ತ್ರಿಮೂರ್ತಿಗಳ ಕಾಲಕ್ಕೆ ಪಾಶ್ಚಾತ್ಯ ಸಂಗೀತದ ಪ್ರಯೋಗ ದಕ್ಷಿಣಾದಿ ಸಂಗೀತದಲ್ಲಿ ನಡೆದಿದೆ. ಮುತ್ತುಸ್ವಾಮಿ ದೀಕ್ಷಿತರು ಕರ್ನಲ್ ಬ್ರೌನ್ ಎಂಬ ಆಂಗ್ಲ ಅಧಿಕಾರಿಯ ಸಲಹೆಯಂತೆ ಇಂಗ್ಲಿಷ್ ನೋಟ್ ಸ್ವರ ಎಂಬ ಹೆಸರಿನಲ್ಲಿ ಪಾಶ್ಚಾತ್ಯ ಧಾಟಿಯಲ್ಲಿ ಹಲವಾರು ದೇವಿ, ಸುಬ್ರಹ್ಮಣ್ಯ, ರಾಮ ಪರ ಕೃತಿಗಳನ್ನೂ ರಚಿಸಿದ್ದಾರೆ. ವಿಶೇಷವೆಂದರೆ ದೀಕ್ಷಿತರ ಎಲ್ಲಾ ಪಾಶ್ಚಾತ್ಯ ಮಟ್ಟುವಿನ ಕೃತಿಗಳು ಶಂಕರಾಭರಣ ರಾಗದಲ್ಲಿದೆ. ಕಾರಣ ಶಂಕರಾಭರಣ ಪಾಶ್ಚಾತ್ಯರ ಮೇಜೆರ್ ಸ್ಕೇಲ್‍ಗೆ ಹತ್ತಿರದ ರಾಗವಾಗಿರುವುದೇ ಆಗಿರಬಹುದು. ತ್ಯಾಗರಾಜರೂ ಅನೇಕ ಅಪೂರ್ವ ರಾಗಗಳನ್ನು ಆವಿಷ್ಕರಿಸಿ ಪಾಶ್ಚಾತ್ಯ ಮಟ್ಟುಗಳನ್ನೂ ಜೋಡಿಸಿ ಕೃತಿ ರಚಿಸಿದ್ದಾರೆ. (ಉದಾ: ಸುಪೋಷಿಣಿ ರಾಗದ ರಮಿಂಚುವಾರೆವರುರಾ). ಪಟ್ಣಂ ಸುಬ್ರಹ್ಮಣ್ಯಂ ಅಯ್ಯರ್‍ರವರ ಕಥನಕುತೂಹಲ ರಾಗದ ರಘುವಂಶ ಸುಧಾಂಬುಧಿ ಕೃತಿಯಲ್ಲಿ ಪಾಶ್ಚಾತ್ಯ ಪ್ರಭಾವ ದಟ್ಟವಾಗಿ ಕಾಣುತ್ತದೆ. ಸ್ವಾತಿ ತಿರುನಾಳ್ ಮಹಾರಾಜರು, ಮೈಸೂರು ವಾಸುದೇವಾಚಾರ್ಯರು ಇಂಥಹ ಪ್ರಯೋಗಗಳನ್ನು ಮಾಡಿದ್ದಾರೆ. ಹೀಗೆ ಪಾಶ್ಚಾತ್ಯ ಸಂಗೀತದ ಅನುಕರಣೆ ಕರ್ಣಾಟಕ ಸಂಗೀತದಲ್ಲಿ ಹೇರಳವಾಗಿ ಕಾಣಸಿಗುತ್ತದೆ.
ಇಪ್ಪತ್ತೊಂದನೆ ಶತಮಾನದ ಈ ಕಾಲಘಟ್ಟದಲ್ಲಿಯೂ ಭಾರತೀಯ ಸಂಗೀತದಲ್ಲಿ ಹೊಸಹೊಸ ಪ್ರಯೋಗಗಳು ನಡೆಯುತ್ತಲೇ ಇದೆ. ನಂತರ ಬಂದ ಉತ್ತರ ಮತ್ತು ದಕ್ಷಿಣ ಭಾರತದÀ ಹಲವಾರು ಗಾಯಕರ ಕೊಡುಗೆ ಅಪಾರ. ಉತ್ತರದಲ್ಲಿ ಕರೀಂ ಖಾನ್, ಬಡೇ ಗುಲಾಂ ಆಲಿ ಖಾನ್, ಪಂಡಿತ್ ರವಿಶಂಕರ್, ಹರಿ ಪ್ರಸಾದ್ ಚೌರಾಸಿಯಾ, ಗಿರಿಜಾ ದೇವಿ, ಅಲಿ ಅಕ್ಬರ್ ಖಾನ್, ಭೀಮ್ ಸೇನ್ ಜೋಶಿ, ಮಲ್ಲಿಕಾರ್ಜುನ್ ಮನ್ಸೂರ್, ಗಂಗೂಬಾಯಿ ಹಾನಗಲ್ ಮುಂತಾದ ಹಲವಾರು ಗಾಯಕರ, ವಾದಕರ ಕೊಡುಗೆ ಅಪಾರ. ಇತ್ತ ಕಡೆ ದಕ್ಷಿಣದಲ್ಲಿ ಜಿ ಎನ್ ಬಾಲಸುಬ್ರಹ್ಮಣ್ಯಂ, ಅರಿಯಾಕ್ಕುಡಿ ರಾಮಾನುಜ ಅಯ್ಯಂಗಾರ್, ಶೆಮ್ಮಗುಂಡಿ ಶ್ರೀನಿವಾಸ ಅಯ್ಯರ್, ಎಂ.ಎಸ್. ಸುಬ್ಬುಲಕ್ಷ್ಮಿ, ಎಂ. ಎಲ್. ವಸಂತ ಕುಮಾರಿ, ಎಂ. ಬಾಲಮುರಳಿ ಕೃಷ್ಣ ಮುಂತಾದವರು ಸಂಗೀತದಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡಿ ಭಾರತೀಯ ಸಂಗೀತವು ದೇಶ, ಭಾಷೆ, ಕಾಲವನ್ನು ಮೀರಿ ನಡೆಯುವಂತೆ ಮಾಡಿದ್ದಾರೆ.