Thursday, 8 March 2018

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 1


 ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ

      18ನೇ ಶತಮಾನ ದಕ್ಷಿಣಾದಿ ಸಂಗೀತದ ಸುವರ್ಣಯುಗವೆಂದೇ ಜನಜನಿತ. ಈ ಶತಮಾನದಲ್ಲಿ ಬಾಳಿ ಬದುಕಿದ ಹಲವಾರು ವಾಗ್ಗೇಯಕಾರರು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಂಥವರಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರೂ ಒಬ್ಬರು. ಶ್ರೀ ವಿದ್ಯಾ ಪಾರಂಗತರೂ ಶ್ರೀ ಚಕ್ರ ಉಪಾಸಕರೂ ಆಗಿರುವ ದೀಕ್ಷಿತರಿಗೆ ದೇವಿಯ ಮೇಲೆ ಅವಿಚ್ಛಿನ್ನ ಭಕ್ತಿ. ಹಾಗಾಗಿಯೇ ಏನೋ ದೇವಿಪರ ಕೃತಿ ರಚನೆಯಲ್ಲಿ ದೀಕ್ಷಿತರಿಗೆ ಮಿಕ್ಕ ಯಾವ ವಾಗ್ಗೇಯಕಾರರು ಸಾಟಿಯಾಗಲಾರರು. ಇದು ಅವರ ಗುರುಗಳಾದ ಚಿದಂಬರ ಯೋಗಿಗಳಿಂದ ಕಲಿತ ಶ್ರೀವಿದ್ಯಾದೀಕ್ಷೆಯ  ಫಲವೆಂದರೆ ತಪ್ಪಲ್ಲ ವೆಂದೆನಿಸುತ್ತದೆ. 
     ದೀಕ್ಷಿತರ ದೇವಿಪರ ಕೃತಿಗಳಿಗೆ ಮುಕುಟಮಣಿ ಭೂಷಣವಾದುದು ನವಾವರಣ ಕೃತಿಗಳೆಂದೇ ಪ್ರಸಿದ್ಧವಾದ ‘ಶ್ರೀಕಮಲಾಂಬಾ ನವಾವರಣ’ ಕೃತಿಗಳು. ಈ ಕೃತಿಯು ದೀಕ್ಷಿತರ ಹುಟ್ಟೂರಾದ ತಂಜಾವೂರು ಜಿಲ್ಲೆಯ ತಿರುವಾರೂರು ದೇವಾಲಯದ ಅಧಿದೇವನಾದ ಶ್ರೀತ್ಯಾಗರಾಜ ಸ್ವಾಮಿಯ (ಶಿವ) ಮಡದಿಯಾದ ಶ್ರೀ ಕಮಲಾಂಬಾ ದೇವಿ (ಪಾರ್ವತಿ)ಯ ಕುರಿತ ಸ್ತುತಿಗೀತೆ ಯಾಗಿದೆ. ಈ ಕೃತಿಗಳಲ್ಲಿ ಕಂಡುಬರುವ ಆಧ್ಯಾತ್ಮಿಕತೆ, ಭಕ್ತಿಪರವಶತೆ, ತಂತ್ರ-ಮಂತ್ರಗಳ ಜ್ಞಾನ ಪ್ರಖರತೆ ಹಾಗೂ ರಾಗ-ತಾಳಗಳ ವೈಭವತೆ ದೀಕ್ಷಿತರ ಇತರ ಕೃತಿಗಳಿಗಿಂತ ಮೇಲ್ಮಟ್ಟದಲ್ಲಿವೆ ಎಂದರೆ ಅತಿಶಯೋಕ್ತಿಯಲ್ಲ. ಹಾಗಾಗಿಯೇ ಇಲ್ಲಿ ಭಕ್ತಿಯು ನಾದವಾಹಿನಿಯಾಗಿ ಪ್ರವಾಹಿಸುವ ಗಂಗೆಯಂತೆ ತುಂಬು ಗಾಂಭೀರ್ಯದಿಂದ ಹರಿದು ಕೃತಿಯ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವಂತೆ ಮಾಡಿದೆ.
     ಈ ಕೃತಿಯ ಮೂಲಕ ಮುತ್ತುಸ್ವಾಮಿ ದೀಕ್ಷಿತರು ಕಮಲಾಂಬಾ ದೇವಿಯನ್ನು ಶ್ರೀಮಹಾ ತ್ರಿಪುರಸುಂದರೀ ರೂಪದಲ್ಲಿ ಶ್ರೀಚಕ್ರ ಪೀಠದ ಮೇಲೆ ವಿರಾಜಮಾನಳಾಗಿ ಕುಳ್ಳಿರಿಸಿ ಸ್ತುತಿಗೈದಿದ್ದಾರೆ ಶ್ರೀ ಚಕ್ರದ ಪೂಜಾವಿಧಿಗಳನ್ನು ದೀಕ್ಷಿತರು ನವಾವರಣ ದ ಒಂಭತ್ತು  ಕೃತಿಗಳಲ್ಲಿ ಮಂತ್ರ ಮತ್ತು ತಂತ್ರಗಳಿಗನುಸಾರವಾಗಿ ವಿವರಿಸಿದ್ದಾರೆ. ಮೊದಲು ಶ್ರೀಚಕ್ರದ ಸ್ಥೂಲ ಪರಿಚಯ ಮಾಡಿಕೊಳ್ಳೋಣ.
ಶ್ರೀಚಕ್ರದ ಸಂಕ್ಷಿಪ್ತ ವಿವರ:
     ಮೇಲಿರುವ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಇದನ್ನು ಶ್ರೀಚಕ್ರವೆಂದು ಕರೆಯುತ್ತಾರೆ. ಇದುವೇ ಶ್ರೀಚಕ್ರ ಸ್ವಾಮಿನಿ ಯಾದ ಶ್ರೀಮಹಾ ತ್ರಿಪುರಸುಂದರಿಯ ಆವಾಸಸ್ಥಾನ. ಶ್ರೀಚಕ್ರವು ಚೌಕದಿಂದ ಆರಂಭವಾಗಿ ಮಧ್ಯದ ಕೇಂದ್ರಬಿಂದುವಿನ ತನಕ ಒಂಭತ್ತು ಆವರಣಗಳನ್ನು ಒಳಗೊಂಡಿದೆ. ಈ ಒಂಭತ್ತು ಆವರಣಗಳಿಗೆ ಪ್ರತ್ಯೇಕ ಹೆಸರುಗಳಿವೆ. ಈ ಒಂಭತ್ತು ಆವರಣ ಗಳಿಗೂ ಒಂಭತ್ತು ಚಕ್ರಗಳಿದ್ದು ಒಂದೊಂದು ಚಕ್ರಕ್ಕೂ ಒಂದೊಂದು ಹೆಸರಿದೆ. ಆ ಒಂಭತ್ತು ಚಕ್ರಕ್ಕೂ ಒಂಭತ್ತು ಚಕ್ರೇಶ್ವರಿ ಯರಿದ್ದಾರೆ. ಅದೇ ರೀತಿ ಒಂಭತ್ತು ಆವರಣಗಳಿಗೆ ಒಂಭತ್ತು ಯೋಗಿನಿಯರಿದ್ದಾರೆ. ಹೀಗೆ ಒಂದೊಂದು ಆವರಣವನ್ನು , ಆವರಣದಲ್ಲಿರುವ ಚಕ್ರದ ಅಧಿದೇವತೆಯರನ್ನು ಆರಾಧಿಸುತ್ತಾ ಮುಂದೆ ಹೋದರೆ ಪ್ರಧಾನ ಶಕ್ತಿಯಾದ ಜಗನ್ಮಾತೆಯ ದರ್ಶನಭಾಗ್ಯ ಲಭಿಸುತ್ತದೆ.  ಶ್ರೀಚಕ್ರದ ಆವರಣಗಳ ಸ್ಥೂಲ ವಿವರ:



ಆವರಣದ ಹೆಸರು   ಆವರಣದ ವಿವರ

1 ಭೂಪುರ (ಭೂಗ್ರಹ)
ಹೊರಗಿರುವ ಚೌಕರೂಪ
2 ಷೋಡಶದಳ ಪದ್ಮ
16 ಕಮಲಗಳಿಂದ ಕೂಡಿದೆ
3 ಅಷ್ಟದಳ ಪದ್ಮ
8 ಕಮಲಗಳಿಂದ ಕೂಡಿದೆ
4 ಚತುರ್ದಶಾರ
14 ತ್ರಿಕೋಣಗಳಿಂದ ಕೂಡಿದೆ
5 ಬಹಿರ್ದಶಾರ
10 ತ್ರಿಕೋಣಗಳಿಂದ ಕೂಡಿದೆ
6 ಅಂತರ್ದಶಾರ
10 ತ್ರಿಕೋನಗಳಿಂದ ಕೂಡಿದೆ.
7 ಅಷ್ಟಕೋಣ
8  ತ್ರಿಕೋಣಗಳಿಂದ ಕೂಡಿದೆ.
8 ತ್ರಿಕೋಣ
1  ತ್ರಿಕೋಣ
9 ಬಿಂದು
ಮಧ್ಯದ ಕೇಂದ್ರ ಬಿಂದು



ಹಾಗೆಯೇ 9 ಚಕ್ರ, 9 ಚಕ್ರೇಶ್ವರಿ ಹಾಗೂ 9 ಯೋಗಿನಿಯರ ವಿವರ ಇಂತಿವೆ:
  ಚಕ್ರದ ಹೆಸರು
ಚಕ್ರೇಶ್ವರಿಯರ ಹೆಸರು
ಯೋಗಿನಿಯರ ಹೆಸರು
ತ್ರೈಲೋಕ್ಯ ಮೋಹನ ಚಕ್ರ
ತ್ರಿಪುರಾ
ಪ್ರಕಟ ಯೋಗಿನಿ
ಸರ್ವಾರ್ಥ ಸಾಧಕ ಚಕ್ರ
ತ್ರಿಪುರೇಶಿ
ಗುಪ್ತ ಯೋಗಿನಿ
ಸರ್ವ ಸಂಕ್ಷೋಭಣ ಚಕ್ರ
ತ್ರಿಪುರ ಸುಂದರಿ
ಗುಪ್ತತರ ಯೋಗಿನಿ
ಸರ್ವ ಸೌಭಾಗ್ಯದಾಯಕ
 ಚಕ್ರ ತ್ರಿಪುರವಾಸಿನಿ
ಸಂಪ್ರದಾಯ ಯೋಗಿನಿ
ಸರ್ವಾರ್ಥ ಸಾಧಕ ಚಕ್ರ
ತ್ರಿಪುರಾಶ್ರೀ
ಕುಲೋತ್ತೀರ್ಣ ಯೋಗಿನಿ
ಸರ್ವರಕ್ಷಾಕರ ಚಕ್ರ
ತ್ರಿಪುರಮಾಲಿನಿ
ನಿಗರ್ಭ ಯೋಗಿನಿ
ಸರ್ವರೋಗಹರ ಚಕ್ರ
ತ್ರಿಪುರ ಸಿದ್ಧ
ರಹಸ್ಯ ಯೋಗಿನಿ
¸ಸರ್ವಸಿದ್ಧಿಪ್ರದ ಚಕ್ರ
ತ್ರಿಪುರಾಂಬಾ
ಅತಿರಹಸ್ಯ ಯೋಗಿನಿ
ಸರ್ವಾನಂದಮಯ ಚಕ್ರ
ಮಹಾತ್ರಿಪುರ ಸುಂದರಿ
ಪರಾಪರ ರಹಸ್ಯ ಯೋಗಿನಿ
    
ಮುತ್ತುಸ್ವಾಮಿ ದೀಕ್ಷಿತರು ಶ್ರೀಚಕ್ರದ ಒಂದೊಂದು ಆವರಣಕ್ಕೂ ಸಮಾನವಾಗುವಂತೆ ಒಂದೊಂದು ಕೃತಿಯನ್ನು ರಚಿಸಿದ್ದಾರೆ. ಶ್ರೀಚಕ್ರದ ಒಂಭತ್ತು ಆವರಣಗಳ ಸಂಪೂರ್ಣ ವಿವರಗಳು ಬರುವ ಹಾಗೆ ಶ್ರೀ ಕಮಲಾಂಬ ನವಾವರಣ ಕೃತಿಯನ್ನು ರಚಿಸಿದ್ದಾರೆ. ಈ ಹಿಂದೆಯೇ ತಿಳಿಸಿದಂತೆ ಶ್ರೀಚಕ್ರದ ಒಂಭತ್ತು ಆವರಣಕ್ಕೂ ಒಂದೊಂದು ಚಕ್ರವಿದೆ, ಒಬ್ಬೊಬ್ಬ ಚಕ್ರೇಶ್ವರಿಯರಿದ್ದಾರೆ, ಒಬ್ಬೊಬ್ಬ ಯೋಗಿನಿಯರಿದ್ದಾರೆ. ದೇವಿ ಖಡ್ಗಮಾಲಾ ಸ್ತೋತ್ರದಲ್ಲಿ ಬರುವ ಈ ಎಲ್ಲಾ ವಿವರಗಳನ್ನು ದೀಕ್ಷಿತರು ಶ್ರೀಕಮಲಾಂಬಾ ನವಾವರಣ ಕೃತಿಯಲ್ಲಿ ಕ್ರಮವಾಗಿಯೂ , ಅರ್ಥಪೂರ್ಣವಾಗಿಯೂ ಬರುವಂತೆ ರಚಿಸಿದ್ದು ಅವರ ಫ್ರೌಢಿಮೆಗೆ ಮತ್ತು ರಚನಾ ಕೌಶಲಕ್ಕೆ ಸಾಕ್ಷಿ. ಈ ಕೃತಿಗಳನ್ನು ನವರಾತ್ರಿ ಸಂದರ್ಭ ಹಾಡುವ ಪರಿಪಾಠವಿದೆ. ಈ ಕೃತಿಗುಚ್ಛದಲ್ಲಿ ಒಟ್ಟು ಹದಿಮೂರು ಕೃತಿಗಳಿವೆ. ಗಣಪತಿಯ ಮತ್ತು ಸುಬ್ರಹಣ್ಯನ ಮೊದಲ ಎರಡು ಧ್ಯಾನಕೃತಿಗಳನ್ನು ನವರಾತ್ರಿಯ ಹಿಂದಿನ ದಿನ ಅಂದರೆ ಮಹಾಲಯ ಅಮವಾಸ್ಯೆಯಂದು ಹಾಡಲಾಗುವುದು. ಪಾಡ್ಯದಂದು ಅಂದರೆ ನವರಾತ್ರಾರಂಭದ ದಿನ ತೋಡಿ ರಾಗದ ಧ್ಯಾನ ಕೃತಿಯನ್ನು ಹಾಡಿ ಪ್ರಥಮ ಆವರಣವಾದ ಆನಂದ ಭೈರವಿ ರಾಗದ ಕೃತಿಯಿಂದ ಆರಂಭ ಮಾಡಿ ನಂತರದ ದಿನಗಳಲ್ಲಿ ದಿನಕ್ಕೊಂದು ಕೃತಿಯಂತೆ ಕ್ರಮವಾಗಿ ವಿಜಯದಶಮಿಗೆ ಶ್ರೀರಾಗ ಮಂಗಳ ಕೃತಿಯನ್ನು ಹಾಡಿಮುಗಿಸುವುದು ಸಂಪ್ರದಾಯ.  
ಶ್ರೀ ಕಮಲಾಂಬಾ ನವಾವರಣ ಕೃತಿಯ ಮೊದಲ ಮೂರು ಧ್ಯಾನ ಕೃತಿಗಳು, ಕೊನೆಯ ಒಂದು ಮಂಗಳ ಕೃತಿಯನ್ನೊಳ ಗೊಂಡ ಒಂಭತ್ತು ಆವರಣ ಕೃತಿಗಳ ವಿವರ ಇಂತಿವೆ.


        ಕೃತಿ             
 ರಾಗ
  ತಾಳ
1  ಶ್ರೀ ಮಹಾಗಣಪತಿ ರವತು ಮಾಂ  (ಧ್ಯಾನ ಕೃತಿ)      
ಗೌಳ
 ಮಿಶ್ರಛಾಪುತಾಳ
2  ಬಾಲ ಸುಬ್ರಹ್ಮಣ್ಯಂ ಭಜೇಹಂ      (ಧ್ಯಾನ ಕೃತಿ)     
 ಸುರಟಿ
 ಆದಿತಾಳ
3  ಶ್ರೀ ಕಮಲಾಂಬಿಕೇ             (ಧ್ಯಾನ ಕೃತಿ)    
 ತೋಡಿ
ರೂಪಕ ತಾಳ
4  ಕಮಲಾಂಬಾ ಸಂರಕ್ಷತುಮಾಂ      (ಪ್ರಥಮ ಆವರಣ)  
 ಆನಂದಭೈರವಿ 
ಮಿಶ್ರಛಾಪುತಾಳ
5  ಕಮಲಾಂಬಾಂ ಭಜರೇ          (ದ್ವಿತೀಯ ಆವರಣ)     
 ಕಲ್ಯಾಣಿ
ಆದಿತಾಳ
6  ಶ್ರೀ ಕಮಲಾಂಬಿಕಯಾ          (ತೃತೀಯ ಆವರಣ)     
 ಶಂಕರಾಭರಣ
ರೂಪಕತಾಳ
7  ಕಮಲಾಂಬಿಕಾಯೈ             (ಚತುರ್ಥ ಆವರಣ)       
ಕಾಂಭೋಜಿ
ಅಟ್ಟತಾಳ
8  ಶ್ರೀ ಕಮಲಾಂಬಾಯಾಃ          (ಪಂಚಮ ಆವರಣ)     
 ಭೈರವಿ
ಮಿಶ್ರಝಂಪೆ ತಾಳ
9  ಕಮಲಾಂಬಿಕಯಾಃ            (ಷಷ್ಠಮ ಆವರಣ)
 ಪುನ್ನಾಗವರಾಳಿ   
ರೂಪಕ ತಾಳ
10  ಶ್ರೀ ಕಮಲಾಂಬಿಕಯಾಂ         (ಸಪ್ತಮಿ ಆವರಣ)       
 ಶಹನ
 ತ್ರಿಪುಟ ತಾಳ
11  ಶ್ರೀ ಕಮಲಾಂಬಿಕೆ             (ಅಷ್ಟಮಿ ಆವರಣ)       
 ಘಂಟಾ
 ಆದಿತಾಳ
12  ಶ್ರೀ ಕಮಲಾಂಬಾ ಜಯತಿ       (ನವಮಾವರಣ)       
 ಆಹಿರಿ
ತಿಶ್ರಜಾತಿ ಏಕತಾಳ
13  ಶ್ರೀ ಕಮಲಾಂಬಿಕೆ ಶಿವೇ        (ಮಂಗಳ ಕೃತಿ)     
 ಶ್ರೀ
 ಖಂಡ ಏಕತಾಳ


ಶ್ರೀ ಮಹಾಗಣಪತಿರವತುಮಾಂ        ರಾಗ: ಗೌಳ,   ತಾಳ: ಮಿಶ್ರಛಾಪು


ಶ್ರೀ ಮಹಾಗಣಪತಿಂ ರವತುಮಾಂ  |  ಸಿದ್ಧಿವಿನಾಯಕೋ ಮಾತಂಗ ಮುಖ||   || ಪಲ್ಲವಿ ||

ಕಾಮಜನಕ ವಿಧೀಂದ್ರ ಸನ್ನುತ  |  ಕಮಲಾಲಯ ತಟನಿವಾಸೋ  |
ಕೋಮಲಕರ ಪಲ್ಲವಪದಕರ  |  ಗುರುಗುಹಾಗ್ರಜ ಶಿವಾತ್ಮಜ  ||     || ಅನುಪಲ್ಲವಿ ||

ಸುವರ್ಣಾಕರ್ಷಣ ವಿಘ್ನರಾಜೋ | ಪಾದಾಂಬುಜೋ ಗೌರÀವರ್ಣ ವಸನಧರೋ | ಫಾಲಚಂದ್ರೋ |
ನರಾದಿವಿನುತ ಲಂಬೋದರೋ | ಕುವಲಯ ಸ್ವವಿಷಾಣ ಪಾಶಾಂಕುಶ ಮೋದಕೋ |
ಪ್ರಕಾಶಕರೋ ಭವಜಲಧಿ ನಾವೋ | ಮೂಲ ಪ್ರಕೃತಿ ಸ್ವಭಾವ ಸುಖಕರೋ ||         || ಶ್ರೀ ಮಹಾಗಣಪತಿ|| 

ರವಿಸಹಸ್ರಭ ಸನ್ನಿಭ ದೇಹೋ | ಕವಿಜನನುತ ಮೂಷಿಕವಾಹೋ |
ಅವನತ ದೇವತಾ ಸಮೂಹೋ | ಅವಿನಾಶ ಕೈವಲ್ಯ ದೇಹೋ ||     || ಶ್ರೀ ಮಹಾಗಣಪತಿ||

    ಯಾವುದೇ ಕಾರ್ಯ ಮಾಡುವಾಗಲೂ ಆದಿವಂದ್ಯನಾದ ಮಹಾಗಣಪತಿಗೆ ಮೊದಲ ಪೂಜೆ ಸಲ್ಲಬೇಕು. ಈ ಕಾರಣದಿಂದಲೇ ದೀಕ್ಷಿತರು ವಿಘ್ನ ನಿವಾರಕನಾದ ವಿಘ್ನೇಶ್ವರನ ಆರಾಧನೆಯಿಂದಲೇ ನವಾವರಣ ಕೃತಿರಚನೆಗೆ ತೊಡಗಿದ್ದಾರೆ. ಈ ಕೃತಿಗೆ ಗಣಪತಿಯ ಗಂಭೀರ ಭಾವಕ್ಕೆ ತಕ್ಕುದಾದ ಘನ ಗಂಭೀರ ರಾಗವಾದÀ ಗೌಳವನ್ನು ಆಯ್ಕೆ ಮಾಡಿದ್ದಾರೆ.  
   ಪಲ್ಲವಿ: ಮಹಾಗಣಪತಿಯೇ, ಸಿದ್ಧಿವಿನಾಯಕನೇ, ಆನೆ ಮುಖದವನೇ ನನ್ನನ್ನು ರಕ್ಷಿಸು ಎಂದಿದ್ದಾರೆ. ಶ್ರೀ ಎಂಬ ಪದದಿಂದ ಕೃತಿಯ ಶುಭಾರಂಭ.
   ಅನುಪಲ್ಲವಿ: ಈ ಹಿಂದೆಯೇ ಹೇಳಿದಂತೆ ಈ ಕೃತಿಯು ತಿರುವಾರೂರು ಕ್ಷೇತ್ರ ದೇವತೆ ಕಮಲಾಂಬಿಕಾ ಅಮ್ಮನವರ ಸ್ತುತಿಗೀತೆ. ಈ ಕ್ಷೇತ್ರದಲ್ಲಿ ಕಮಲಾಲಂiÀÉುಂಬ ಎಂಬ ಕಲ್ಯಾಣಿ ಇದೆ. ಅಲ್ಲಿ ವಿಘ್ನೇಶ್ವರನು ವಾಸವಾಗಿದ್ದನೆ. ಆ ಗಣಪತಿಯನ್ನು ನಾನು ಭಕ್ತಿಯಿಂದ ಸ್ತುತಿಗೈಯ್ಯುತ್ತಿರುವೆ ಎಂದು ದೀಕ್ಷಿತರು ಅನುಪಲ್ಲವಿಯಲ್ಲಿ ತುಂಬಾ ಸೊಗಸಾಗಿ ಹೇಳಿದ್ದಾರೆ.
   ಚರಣ: ಚರಣ ಸಾಹಿತ್ಯದ ಮೊಲಿಗೆ ಸುವರ್ಣಾಕರ್ಷೊ ವಿಘ್ನರಾಜೋ ಎಂದಿದ್ದಾರೆ. ಕ್ಷೇತ್ರಪುರಾಣದ ಪ್ರಕಾರ ಪ್ರಚಲಿತದಲ್ಲಿರುವ ಕಥೆಯ ಬಗ್ಗೆ ದೀಕ್ಷಿತರು ಇಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ಈ ಕಥೆ ಹೀಗಿದೆ. ಹಿಂದೆ ತಿರುವಾರೂರಿನಲ್ಲಿ ಸುಂದರಮೂರ್ತೀ ಎಂಬ ಶಿವಭಕ್ತರೊಬ್ಬರು ಇದ್ರು. ಅವರ ಪತ್ನಿಗೆ ಬಂಗಾರದ ಒಡವೆಗಳಿಂದ ತಮ್ಮನ್ನು ಸಿಂಗರಿಸಬೇಕೆಂದು ಆಸೆಯಾಗಿ ಪತಿಗೆ ತಿಳಿಸಿದ್ದರಂತೆ. ಆಗ ಅವರು ತಿರುವಾರೂರಿನ ಅಧಿದೇವ ತ್ಯಾಗರಾಜನನ್ನು ಭಕ್ತಿಯಿಂದ ಬೇಡುತ್ತಾರೆ. ಭಕ್ತಿಗೆ ಮೆಚ್ಚಿದ ತ್ಯಾಗರಾಜ ಪ್ರತ್ಯಕ್ಷನಾಗಿ ಕೆಲವು ಚಿನ್ನದ ಗಟ್ಟಿಗಳನ್ನು ಸುಂದರ ಮೂರ್ತಿಗೆ ಕೊಡುತ್ತಾನೆ. ಈ ಚಿನ್ನದ ಗಟ್ಟಿಗಳನ್ನು ಸ್ಥಳೀಯ ಅಕ್ಕಸಾಲಿಯಲ್ಲಿ ಒಡವೆ ಮಾಡಲು ಕೊಟ್ಟಾಗ ಆತ ಪರೀಕ್ಷಿಸಿ ಇದು ಶುದ್ಧ ಚಿನ್ನವಲ್ಲ ಎಂದನು. ಈ ವಿಚಾರವನ್ನು ಸುಂದರಮೂರ್ತಿ ತ್ಯಾಗರಾಜನಲ್ಲಿ ತಿಳಿಸಿದಾಗ. ಆತ ತನ್ನ ಮಗ ವಿಘ್ನೇಶ್ವgನÀನ್ನು ಅಕ್ಕಸಾಲಿಗನ ರೂಪದಲ್ಲಿ ಕಳುಹಿಸಿದನಂತೆ. ವಿಘ್ನೇಶ್ವರನು ಚಿನ್ನದ ಗಟ್ಟಿಯನ್ನು ಒರೆಗೆ ಹಚ್ಚಿ ಶುದ್ಧಚಿನ್ನವೆಂದು ನಿರೂಪಿಸಿದನೆಂದು ಪ್ರತೀತಿ.
 ಮುಂದೆ ಗೌರವರ್ಣ ಎಂಬಲ್ಲಿ ಗೌರ-[ಗೌಳ] ಎಂಬ ಪದವನ್ನು ರಾಗಮುದ್ರೆಯಾಗಿ ದೀಕ್ಷ್ಷಿತರು ಜಾಣ್ಮೆಯಿಂದ ಬಳಸಿಕೊಂಡಿದ್ದಾರೆ. ಹೀಗೆ ದೀಕ್ಷಿತರು ನವಾವರಣ ಕೃತಿ ರಚಿಸುವ ಸಂದರ್ಭ ಯಾವುದೇ ವಿಘ್ನ ಬರದಂತೆ ಅನುಗ್ರಹಿಸು ಎಂದು ಮಹಾಗಣಪತಿಯನ್ನು ಪರಿಪರಿಯಾಗಿ ಸ್ತುತಿಸಿದ್ದಾರೆ ಎಂಬರ್ಥದಲ್ಲಿ ಗುಚ್ಚದ ಮೊದಲ ಕೃತಿಯಾಗಿ ಮೂಡಿಬಂದಿದೆ.



ಬಾಲಸುಬ್ರಹ್ಮಣ್ಯಂ ಭಜೇಹಂ             ರಾಗ: ಸುರಟಿ      ತಾಳ: ಆದಿತಾಳ 



ಬಾಲಸುಬ್ರಹ್ಮಣ್ಯಂ ಭಜೇಹಂ | ಭಕ್ತ ಕಲ್ಪ ಭೂರುಹಂ ಶ್ರೀ ||

ನೀಲಕಂಠ ಹೃದಾನಂದಕರಂ | ನಿತ್ಯ ಶುದ್ಧ ಬುದ್ಧ ಮುಕ್ತಾಂಬರಂ ||

ವೇಲಾಯುಧ ಧರಂ ಸುಂದರಂ | ವ್ಭೆದಾಂತಾರ್ಥ ಬೋಧ ಚತುರಂ ||
ಫಾಲಾಕ್ಷ ಗುರುಗುಹಾವತಾರಂ | ಪರಾಶಕ್ತಿ ಕುಮಾರಂ ಧೀರಂ ||
ಪಾಲಿತ ಗೀರ್ವಾಣಾದಿ ಸಮೂಹಂ | ಪಂಚಭೂತಮಯಂ ಮಾಯಾಮೋಹಂ ||
ನೀಲಕಂಠ ವಾಹಂ ಸುದೇಹಂ | ನಿರತಿಶಯಾನಂದ ಪ್ರವಾಹಂ ||                                             
   ದೀಕ್ಷಿತರು ಕೃತಿಯ ಮೊದಲಿಗೆ ಬಾಲಸುಬ್ರಹ್ಮಣ್ಯನು ಕೇಳಿದ್ದನ್ನು ಕೊಡುವ ಕಲ್ಪವೃಕ್ಷದಂತೆ ಎಂದು ಹಾಡಿ ಹೊಗಳಿದ್ದಾರೆ. ತಂದೆಯಾದ ನೀಲಕಂಠನಿಗೆ ಆನಂದವನ್ನುಂಟು ಮಾಡುವವನು, ವೇಲಾಯುಧವನ್ನು ಧರಿಸಿದವನು, ಉಪನಿಷತ್ತಿನ ಅರ್ಥವನ್ನು ಬೋಧಿಸುವಲ್ಲಿ ನಿಷ್ಣಾತನು. ಪರಾಶಕ್ತಿಯ ಸುಕುಮಾರನು, ತಾನೇ ರಕ್ಷಿಸಿದ ದೇವತೆಗಳ ಸಮೂಹದೊಂದಿಗೆ ಇರುವವನು, ಪಂಚಭೂತ ಮಯವಾದ ಮಾಯಾ ಮೋಹವನ್ನು ಹೊಂದಿರುವವನು. ಮಯೂರ ವಾಹನನು. ಸುಂದರ ಶರೀರನು, ಆನಂದ ಸಾಗರದಲ್ಲಿ ಮುಳುಗಿರುವವನಾದ ಬಾಲಸುಬ್ರಹ್ಮಣ್ಯನನ್ನು ಭಜಿಸುತ್ತೇನೆ.                                                               
    ದೀಕ್ಷಿತರು ಅದ್ವೈತಿಗಳು. ಯಾವುದೇ ಬೇಧ-ಭಾವವಿಲ್ಲದೆ ಎಲ್ಲಾ ದೇವ-ದೇವತೆಗಳ ಕುರಿತು ಕೃತಿ ರಚಿಸಿದ್ದಾರೆ. ಆದರೆ ಅವರ ಆರಾಧ್ಯ ದೈವ ತಿರುತ್ತಣಿಯ ಮುರುಗ. ಹಾಗಾಗಿ ಈ ಗುಚ್ಚ ಕೃತಿಯ ಎರಡನೇ ರಚನೆಯಾಗಿ ಬಾಲಸುಬ್ರಹ್ಮಣ್ಯಂ ಭಜೇಹಂ ಮೂಡಿಬಂದಿದೆ. ಇಲ್ಲಿ ಕಮಲಾಂಬಾ ನವಾವರಣ ಕೃತಿಯನ್ನು ರಚಿಸುವ ಶಕ್ತಿಯನ್ನು ದಯಪಾಲಿಸು ತಂದೆ ಎಂಬರ್ಥದಲ್ಲಿ ಕೃತಿ ರಚನೆಗೊಂಡಿದೆ.


No comments:

Post a Comment