Sunday, 11 March 2018

ಭಾರತೀಯ ಸಂಗೀತದ ಬೆಳವಣಿಗೆ

           
   ಭಾರತೀಯ ಸಂಗೀತ ವೇದಜನಿತವಾದುದು. ‘ಮಾತು’ ಅಥವಾ ‘ಸಾಹಿತ್ಯ’ಕ್ಕೆ, ‘ಧಾತು’ ಅಥವಾ ‘ಸಂಗೀತ’ ಪ್ರಯೋಗ ಮಾಡಿರುವ ಮೊಟ್ಟಮೊದಲ ಸನ್ನಿವೇಶ ಕಂಡುಬರುವ ಋಕ್ಸಾಮ ವೇದಮಂತ್ರಗಳಲ್ಲಿ. ಗೀತ, ವಾದ್ಯ, ನೃತ್ಯ ಈ ಮೂರರ ಸಮನ್ವಯವೇ ಸಂಗೀತ. ಈ ಮೂರೂ ವೇದಕಾಲದಲ್ಲಿ ಪ್ರಯೋಗದಲ್ಲಿದ್ದವೆಂದು ತಿಳಿದು ಬರುತ್ತದೆ.
      ಹಿಂದೆ ಆಖ್ಯಾನಗೀತೆಗಳಾದ ರಾಮಾಯಣ, ಮಹಾಭಾರತ, ಭಾಗವತಗಳನ್ನು ವೀಣೆಯಲ್ಲಿ ನುಡಿಸಿ ಹಾಡುತ್ತಿದ್ದರೆಂತೆ. ಲವಕುಶರಿಂದ ರಾಮಾಯಣವನ್ನು ವಾಲ್ಮೀಕಿ ಮುನಿಯು ಹಾಡಿಸಿದ್ದರೆಂದೂ, ರಾವಣನು ಸಾಮವೇದನ್ನು ಹಾಡಿದ್ದನೆಂದೂ ಪ್ರತೀತಿಯಿದೆ.
   ಭಾರತದ ಸಂಗೀತ ಹೇಗೆ ರೂಪುಗೊಂಡು ಕಾಲಕಾಲಕ್ಕೆ ಹೇಗೆ ಬೆಳೆಯಿತೆಂದು ತಿಳಿಯಲು ನಮಗೆ ದೊರಕಿರುವ ಗ್ರಂಥಗಳೇ ಆಧಾರ. ಭರತಮುನಿಯ ನಾಟ್ಯಶಾಸ್ತ್ರವು ಸಂಗೀತಶಾಸ್ತ್ರವನ್ನು ತಿಳಿಸುವ ಪ್ರಥಮ. ಇದು ಸುಮಾರು ಮೊದಲನೆಯ ಶತಮಾನದ ಗ್ರಂಥವೆಂದು ತಿಳಿದು ಬಂದಿದೆ. ನಾಟ್ಯಶಾಸ್ತ್ರವನ್ನು ಮುಖ್ಯವಾಗಿ, ಸಂಗೀತವನ್ನು ಗೌಣವಾಗಿ ತಿಳಿಸುವ ಈ ಗ್ರ್ರಂಥದಲ್ಲಿ ರಾಗಗಳನ್ನು ಜಾತಿಯೆಂದು ಕರೆಯಲಾಗಿದೆ.
  ಭರತನ ನಂತರದವರಾದ ಅವನ ಮಗ ದತ್ತಿಲ, ಅಹೋಬಲ, ಮತಂಗ ಮುಂತಾದವರು ಸಂಗೀತ ಶಾಸ್ತ್ರ ಗ್ರಂಥಗಳನ್ನು ರಚಿಸಿದರು. ಕನ್ನಡಿಗನಾದ ಮತಂಗನ ಬೃಹದ್ದೇಶಿ ಗ್ರಂಥದಲ್ಲಿ ಮೊದಲಬಾರಿಗೆ ರಾಗ ಎಂಬ ಶಬ್ದ ಬಳಕೆಯಾಗಿದೆ. ಕ್ರಿ.ಶ. 5ನೆಯ ಶತಮಾನದಿಂದ ದೇಶೀ ರಾಗಪದ್ಧತಿಯು ಬೆಳೆಯಿತೆನ್ನಬಹುದು. ಈ ಸಂದರ್ಭ ರಾಗಗಳನ್ನು ಶುದ್ಧ, ಭಿನ್ನ, ಗ್ರಾಮ, ರಾಗಾಂಗ, ಉಪಾಂಗ, ಭಾಷಾಂಗಗಳೆಂದು ವರ್ಗೀಕರಿಸಲಾಯಿತು.
  ಅನಂತರ 7ನೆಯ ಶತಮಾನಕ್ಕೆ ಸೇರಿದ್ದೆನ್ನಲಾದ ಪುದುಕೋಟೈ ಸಂಸ್ಥಾನದಲ್ಲಿರುವ ಪಲ್ಲವ ದೊರೆ ಮಹೇಂದ್ರವರ್ಮನ ಕಾಲದಲ್ಲಿ ಕುಡುಮಿಯಾಮಲೈ ಎಂಬ ಶಾಸನದಲ್ಲಿ ಸಪ್ತಸ್ವರಗಳ ನಿರೂಪಣೆ ಕಂಡುಬರುತ್ತದೆ. ನಂತರ 7ಮತ್ತು 11ನೇ ಶತಮಾನದ ಮಧ್ಯ ಭಾಗದಲ್ಲಿ ಕಂಡು ಬರುವ ನಾರದನ ಸಂಗೀತ ಮಕರಂದ ಗ್ರಂಥವು ಭಾರತೀಯ ಸಂಗೀತಶಾಸ್ತ್ರದ ಪ್ರಧಾನ ಗ್ರಂಥವೆಂದು ತಿಳಿದು ಬರುತ್ತದೆ. ಇದರಲ್ಲಿ ರಾಗಗಳ ಪಟ್ಟಿ ಮತ್ತು ರಾಗಗಳ ವಿವರಣೆ ಇದೆ. ಈತನು ರಾಗಗಳನ್ನು ಔಡವ, ಷಾಡವ ಮತ್ತು ಸಂಪೂರ್ಣಗಳೆಂದು ವಿಂಗಡಿಸಿದ್ದಾನೆ. 12ನೆಯ ಶತಮಾನದಲ್ಲಿ ಜಯದೇವನಿಂದ ರಚಿತವಾದ ಗೀತಗೋವಿಂದ ಕೃತಿಯಲ್ಲಿ  ರಾಗಗಳ ಪರಿಚಯ ಕಾಣಸಿಗುತ್ತದೆ. ಇದೇ ಶತಮಾನದಲ್ಲಿ ರಚಿತವಾದ ಶಾರ್ಙದೇವನ ಸಂಗೀತ ರತ್ನಾಕರ ಇಂದಿಗೂ ಭಾರತೀಯ ಸಂಗೀತಕ್ಕೆ ಪ್ರಮುಖ ಆಧಾರಗ್ರಂಥ. ಈ ಗ್ರಂಥದಲ್ಲಿ ರಾಗಗಳನ್ನು ಜನ್ಯರಾಗ, ಜನಕರಾಗ, ಪ್ರಧಾನರಾಗ ಹಾಗೂ ಉಪರಾಗಗಳೆಂದು ವಿಂಗಡಿಸಲಾಗಿದೆ. ಅಲ್ಲದೆ ಸಂಗೀತದ ಲಕ್ಷ್ಯ ಲಕ್ಷಣಗಳ ಬಗ್ಗೆ ವಿಸ್ತಾರವಾಗಿ ಶಾರ್ಙದೇವನು ಬರೆದಿದ್ದಾನೆ.
   ಹೀಗೆ ಬೆಳೆದು ಬಂದ ಭಾರತೀಯ ಸಂಗೀತ 13ನೆಯ ಶತಮಾನದಲ್ಲಿ ಅರೇಬಿಯಾ ಮತ್ತು ಪರ್ಷಿಯನ್ನರ ಧಾಳಿಯಿಂದ ಎರಡು ಕವಲಾಗಿ ಒಡೆಯಿತು. ಈ ಕವಲುಗಳೇ ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತ ಪದ್ಧತಿಗಳು. ಎರಡೂ ಪದ್ಧತಿಗಳಲ್ಲಿ ಸಾದೃಶ್ಯವೂ, ಭೇದವೂ ಇದೆ. ಎರಡೂ ಪದ್ಧತಿಗಳಲ್ಲೂ ರಾಗಗಳು ಒಂದೇ ಆದರೂ, ಹೆಸರುಗಳಲ್ಲಿ ಮತ್ತು ಹಾಡುವ ಕ್ರಮದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಮೊದಲಾಗಿ ಮೇಳಪದ್ಧತಿಯಲ್ಲೇ ವ್ಯತ್ಯಾಸ ಕಂಡುಬರುತ್ತದೆ. ಉತ್ತರಾದಿ ಸಂಗೀತದಲ್ಲಿ ಮೊದಲು ಆರು ಮೇಳಕರ್ತ ರಾಗಗಳಿದ್ದು, ಹತ್ತು ಮೇಳಕರ್ತ ರಾಗಗಳಾಗಿವೆ. ಅವುಗಳನ್ನು ಥಾಟ್‍ಗಳೆಂದು ಹೆಸರಿಸಲಾಗಿದೆ. ಇವುಗಳಿಂದ ಹುಟ್ಟಿದ ರಾಗಗಳನ್ನು ರಾಗಿಣಿಯರೆಂದು ಹೆಸರಿಸಿದ್ದಾರೆ. ದಕ್ಷಿಣಾದಿಯಲ್ಲಿ ಮೊದಲು ಹದಿನೈದು ಮೇಳಕರ್ತ ರಾಗಗಳಿದ್ದು ನಂತರ ಈಗ ಪ್ರಯೋಗದಲ್ಲಿರುವಂತೆ 72 ಮೇಳಕರ್ತರಾಗಗಳಾಗಿದೆ. ಇವುಗಳಿಂದ ಹುಟ್ಟಿದ ರಾಗಗಳಿಗೆ ಜನ್ಯ ರಾಗಗಳೆಂದು ಹೆಸರಿಲಾಗಿದೆ.
   ಉತ್ತರದಲ್ಲಿ ಮೊಗಲರ ಕಾಲಕ್ಕೆ ಹಿಂದೂಸ್ತಾನಿ ಸಂಗೀತ(ಉತ್ತರಾದಿ ಸಂಗೀತ) ಉಚ್ಛ್ರಾಯ ಸ್ಥಿತಿಗೆ ತಲುಪಿತು. ಅವರು ಪರ್ಷಿಯಾ, ಅಫಘಾನಿಸ್ತಾನ, ಟರ್ಕಿ, ಅರೇಬಿಯಾ ಮೊದಲಾದ ಕಡೆಯಿಂದ ಸಂಗೀತಗಾರರನ್ನು ಕರೆಸಿ ಅವರನ್ನು ಪೋಷಿಸಿದರು. ಅಲ್ಲದೆ ಮೊಗಲರು ಸುಖಪ್ರಿಯರು, ರಸಿಕರೂ ಆಗಿದ್ದು, ಸಂಗೀತ ಕಲೆಗೆ ಅಪಾರವಾದ ಉತ್ತೇಜನ, ಪೋಷಣೆಗಳನ್ನಿತ್ತರು. ಭಾರತೀಯರು ಹಿಂದಿನಿಂದಲೂ ಉದಾರಿಗಳೂ, ವಿನಯಶೀಲರಾಗಿದ್ದು, ಕಾಲಾನುಸಾರ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸ್ವಭಾವದವರಾಗಿದ್ದಾರೆ. ಹೀಗಾಗಿ ಪರಕೀಯರಿಂದ ಬಂದ ಅನೇಕ ರಾಗಗಳು ನಮ್ಮನ್ನು ಬಿಟ್ಟು ಹೋಗಲಾರದೆ ಅಥವಾ ನಾವು ಅವನ್ನು ಬಿಟ್ಟುಗೊಡದೆ ಅವುಗಳನ್ನು ನಮ್ಮದೆನ್ನುವ ಮುದ್ರೆಯೊತ್ತಿ ನಮ್ಮ ಪದ್ಧತಿಯ ರಾಗಗಳನ್ನಾಗಿ ಮಾಡಿದ್ದಾರೆ ಸಂಗೀತ ಶಾಸ್ತ್ರÀಜ್ಞರು.
  ಉತ್ತರಾದಿ ಸಂಗೀತದಲ್ಲಿ ಹಲವಾರು ಶೈಲಿಗಳಿವೆ. ಇವು ದ್ರುಪದ್, ಧಮಾರ್, ಖ್ಯಾಲ್, ಠುಮ್ರಿ, ಟಪ್ಪಾ, ದಾದ್ರಾ, ಗಜಲ್, ಖವ್ವಾಲಿ, ಭಜನ್ ಇತ್ಯಾದಿ. ಉತ್ತರದಲ್ಲಿ ಉತ್ತರಾದಿ ಸಂಗೀತವು ಗೋಪಾಲನಾಯಕ, ಬೃಂದಾವನ ಹರಿದಾಸ ಸ್ವಾಮಿ ಹಾಗೂ ಅಮೀರ್‍ಖುಸ್ರೋವಿನಂಥ ಸಂಗೀತ ಶಾಸ್ತ್ರಜ್ಞನರ ಮೂಲಕ ಹಸನಾಗಿ ಹರಳುಗಟ್ಟಿತು. 19ನೇ ಶತಮಾನದಲ್ಲಿ ಉತ್ತರದಲ್ಲಿ ಹೊಸಶಕೆಯೊಂದು ಆರಂಭವಾಯಿತು. ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿದ ವಿಷ್ಣು ನಾರಾಯಣ ಬಾತ್ಕಂಡೆಯವರು ಈಗ ಪ್ರಚಾರದಲ್ಲಿರುವ ಶಾಸ್ತ್ರೀಯರೂಪವನ್ನು ಮತ್ತು ಅಭ್ಯಾಸಕ್ರಮವನ್ನು ವ್ಯವಸ್ಥೆಗೊಳಿಸಿದರು.
  ಇತ್ತ ದಕ್ಷಿಣದಲ್ಲಿ ಕರ್ಣಾಟಕ ಸಂಗೀತವು (ದಕ್ಷಿಣಾದಿ ಸಂಗೀತ) ವಿಜಯನಗರ ಸ್ಥಾಪನಾಚಾರ್ಯ ಶ್ರೀ ವಿದ್ಯಾರಣ್ಯ ಸ್ವಾಮಿಗಳಿಂದ ಹೊಸ ಸ್ವರೂಪ ಗಳಿಸಿತು. ಮುಂದೆ ಕನ್ನಡಿಗರೇ ಆದ ಪುಂಡರೀಕ ವಿಠ್ಠಲ, ವೆಂಕಟಮುಖಿ ಮುಂತಾದ ಶಾಸ್ತ್ರಜ್ಞರಿಂದ ಮತ್ತಷ್ಟು ಹೊಸರೂಪ ಪಡೆದು ಶ್ರೀ ಪುರಂದರ ದಾಸರ ಪ್ರಯತ್ನ ಫಲವಾಗಿ ಈಗಿನ ಶೈಲಿಯನ್ನು ಪಡೆದುಕೊಂಡಿತು.
  ಮುಂದೆ 18ನೇ ಶತಮಾನದ ಕಾಲಕ್ಕೆ ಕರ್ಣಾಟಕ ಸಂಗೀತ ಉಚ್ಛ್ರಾಯ ಸ್ಥಿತಿಗೆ ತಲುಪಿತು. ಆ ಕಾಲವು ಕರ್ಣಾಟಕ ಸಂಗೀತದ ಇತಿಹಾಸದಲ್ಲಿ ಸುವರ್ಣಯುಗವೆಂದು ದಾಖಲಾಗಿದೆ. ಆ ಸಂದರ್ಭ ದಕ್ಷಿಣ ಭಾರತದಲ್ಲಿ ಮಹಾಮಹಿಮರಾದ ವಾಗ್ಗೇಯಕಾರರು ಜನಿಸಿ ಹೊಸಕ್ರಾಂತಿಯನ್ನೇ ಮಾಡಿದರು. ಇವರಲ್ಲಿ ತ್ರ್ರಿಮೂರ್ತಿಗಳೆಂದು ಪ್ರಸಿದ್ಧರಾದ ಶ್ರೀ ಶ್ಯಾಮಾಶಾಸ್ತ್ರಿಗಳು, ಶ್ರೀ ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರ ಪ್ರಯತ್ನ ಫಲವಾಗಿ ಕರ್ಣಾಟಕ ಸಂಗೀತವು ಹೊಸ ಆಯಾಮವನ್ನೇ ಪಡೆದುಕೊಂಡಿತು. ಇವರಿಂದ ರಚನೆಗೊಂಡ ಶಾಸ್ತ್ರೀಯವೂ, ಭಕ್ತಿರಸ ಪ್ರಧಾನವಾದ ಕೃತಿಗಳು ಇಂದಿಗೂ ಅಜರಾಮರ. ಮುಂದೆ ಸ್ವಾತಿ ತಿರುನಾಳ್ ಮಹಾರಾಜ್, ಮಹಾ ವೈದ್ಯನಾಥ ಅಯ್ಯರ್, ಪಟ್ಣಂ ಸುಬ್ರಹ್ಮಣ್ಯ ಅಯ್ಯರ್, ವೀಣಾ ಕುಪ್ಪಯ್ಯರ್, ಮೈಸೂರು ವಾಸುದೇವಾಚಾರ್, ವಾಜಲಾಪೇಟೆ ವೆಂಕಟರಮಣ ಭಾಗವತರು, ತಿರುವೊಟ್ಟಿಯರ್ ತ್ಯಾಗಯ್ಯ ಮುಂತಾದವರ ಪ್ರಯತ್ನ ಫಲವಾಗಿ ಕರ್ಣಾಟಕ ಸಂಗೀತ ಮತ್ತಷ್ಟು ವೃದ್ಧಿಗೊಂಡಿತು.
   ಭಾರತೀಯರಲ್ಲಿ ಸಂಪ್ರದಾಯ, ಮಡಿವಂತಿಕೆಯನ್ನು ಚಾಚೂ ತಪ್ಪದೆ ಪಾಲಿಸುವ ಮನಸ್ಥಿತಿಯಿದೆ. ಆದರೆ ಇದರ ನಡುವೆಯೂ ಇತರರಿಂದ ಉತ್ಕøಷ್ಟತೆಯೇನಾದರು ದೊರಕಿದರೆ ಅದನ್ನು ಅಷ್ಟೇ ಉದಾರ ಮನೋಭಾವದಿಂದ ಸ್ವೀಕರಿಸುವ ಮನೋಭಾವವೂ ಇದೆ. ಭಾರತವು ದೀರ್ಘಕಾಲ ಆಂಗ್ಲರ ಅಧಿಕಾರ ಮುಷ್ಟಿಯಲ್ಲಿ ಪರಭಾರೆಯಾಗಿದ್ದು ಈಗ ಇತಿಹಾಸ. ಆಗ ಭಾರತೀಯ ಸಂಗೀತವು ಪಾಶ್ಚಾತ್ಯರ ಪ್ರಭಾವಕ್ಕೊಳಗಾಗಿ ಪಾಶ್ಚಾತ್ಯ ಸಂಗೀತವನ್ನು ಅನುಕರಿಸಿ, ಅನುಸರಿಸಿ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತಾರಗೊಳಿಸಿತು. ಈ ಕಾರಣದಿಂದಲೇ ಇಂದು ಭಾರತದ ಸಂಗೀತ ಕಚೇರಿಗಳಲ್ಲಿ ಪಾಶ್ಚಾತ್ಯ ವಾದ್ಯಗಳ ಪ್ರಯೋಗ ಕಂಡು ಬರುತ್ತದೆ. ಕ್ಲ್ಯಾರಿಯೊನೆಟ್, ಸಾಕ್ಸೋಫೋನ್, ಹಾರ್ಮೋನಿಯಂ ಪ್ರಮುಖ ವಾದ್ಯಗಳಾಗಿ ಬಳಸಲ್ಪಡುತ್ತಿವೆ. ಹದಿನೆಂಟನೇ ಶತಮಾನದಲ್ಲಿ ಬಾಲುಸ್ವಾಮಿ ದೀಕ್ಷಿತರು ಪಾಶ್ಚಾತ್ಯ ವಾದ್ಯವಾದ ಪಿಟೀಲನ್ನು ಹಾಡಿಕೆಗೆ ಪಕ್ಕವಾದ್ಯವಾಗಿ ನುಡಿಸುವ ಪ್ರಯೋಗ ಮಾಡಿದರು. ಈ ಪ್ರಯತ್ನ ಫಲವಾಗಿ ಹಾರ್ಮೋನಿಯಂ, ಪಿಟೀಲು, ಕ್ಲ್ಯಾರಿಯೊನೆಟ್, ಸಾಕ್ಸೋಫೋನ್ ಮುಂತಾದ ವಾದ್ಯಗಳು ಯಾವುದೇ ಮಡಿವಂತಿಕೆಯ ಹಂಗಿಲ್ಲದೆ ಭಾರತೀಯ ಸಂಗೀತ ಕಚೇರಿಗಳಲ್ಲಿ ಶುದ್ಧ ಭಾರತೀಯ ವಾದ್ಯಗಳೇ ಆಗಿ ಬಳಕೆಯಲ್ಲಿವೆ.
   ಕರ್ಣಾಟಕ ಸಂಗೀತದ ತ್ರಿಮೂರ್ತಿಗಳ ಕಾಲಕ್ಕೆ ಪಾಶ್ಚಾತ್ಯ ಸಂಗೀತದ ಪ್ರಯೋಗ ದಕ್ಷಿಣಾದಿ ಸಂಗೀತದಲ್ಲಿ ನಡೆದಿದೆ. ಮುತ್ತುಸ್ವಾಮಿ ದೀಕ್ಷಿತರು ಕರ್ನಲ್ ಬ್ರೌನ್ ಎಂಬ ಆಂಗ್ಲ ಅಧಿಕಾರಿಯ ಸಲಹೆಯಂತೆ ಇಂಗ್ಲಿಷ್ ನೋಟ್ ಸ್ವರ ಎಂಬ ಹೆಸರಿನಲ್ಲಿ ಪಾಶ್ಚಾತ್ಯ ಧಾಟಿಯಲ್ಲಿ ಹಲವಾರು ದೇವಿ, ಸುಬ್ರಹ್ಮಣ್ಯ, ರಾಮ ಪರ ಕೃತಿಗಳನ್ನೂ ರಚಿಸಿದ್ದಾರೆ. ವಿಶೇಷವೆಂದರೆ ದೀಕ್ಷಿತರ ಎಲ್ಲಾ ಪಾಶ್ಚಾತ್ಯ ಮಟ್ಟುವಿನ ಕೃತಿಗಳು ಶಂಕರಾಭರಣ ರಾಗದಲ್ಲಿದೆ. ಕಾರಣ ಶಂಕರಾಭರಣ ಪಾಶ್ಚಾತ್ಯರ ಮೇಜೆರ್ ಸ್ಕೇಲ್‍ಗೆ ಹತ್ತಿರದ ರಾಗವಾಗಿರುವುದೇ ಆಗಿರಬಹುದು. ತ್ಯಾಗರಾಜರೂ ಅನೇಕ ಅಪೂರ್ವ ರಾಗಗಳನ್ನು ಆವಿಷ್ಕರಿಸಿ ಪಾಶ್ಚಾತ್ಯ ಮಟ್ಟುಗಳನ್ನೂ ಜೋಡಿಸಿ ಕೃತಿ ರಚಿಸಿದ್ದಾರೆ. (ಉದಾ: ಸುಪೋಷಿಣಿ ರಾಗದ  ರಮಿಂಚುವಾರೆವರುರಾ). ಪಟ್ಣಂ ಸುಬ್ರಹ್ಮಣ್ಯಂ ಅಯ್ಯರ್‍ರವರ ಕಥನಕುತೂಹಲ ರಾಗದ ರಘುವಂಶ ಸುಧಾಂಬುಧಿ ಕೃತಿಯಲ್ಲಿ ಪಾಶ್ಚಾತ್ಯ ಪ್ರಭಾವ ದಟ್ಟವಾಗಿ ಕಾಣುತ್ತದೆ. ಸ್ವಾತಿ ತಿರುನಾಳ್ ಮಹಾರಾಜರು, ಮೈಸೂರು ವಾಸುದೇವಾಚಾರ್ಯರು ಇಂಥಹ ಪ್ರಯೋಗಗಳನ್ನು ಮಾಡಿದ್ದಾರೆ. ಹೀಗೆ ಪಾಶ್ಚಾತ್ಯ ಸಂಗೀತದ ಅನುಕರಣೆ ಕರ್ಣಾಟಕ ಸಂಗೀತದಲ್ಲಿ ಹೇರಳವಾಗಿ ಕಾಣಸಿಗುತ್ತದೆ.
   ಇಪ್ಪತ್ತೊಂದನೆ ಶತಮಾನದ ಈ ಕಾಲಘಟ್ಟದಲ್ಲಿಯೂ ಭಾರತೀಯ ಸಂಗೀತದಲ್ಲಿ ಹೊಸಹೊಸ ಪ್ರಯೋಗಗಳು ನಡೆಯುತ್ತಲೇ ಇದೆ. ನಂತರ ಬಂದ ಉತ್ತರ ಮತ್ತು ದಕ್ಷಿಣ ಭಾರತದÀ ಹಲವಾರು ಗಾಯಕರ ಕೊಡುಗೆ ಅಪಾರ. ಉತ್ತರದಲ್ಲಿ ಕರೀಂ ಖಾನ್, ಬಡೇ ಗುಲಾಂ ಆಲಿ ಖಾನ್, ಪಂಡಿತ್ ರವಿಶಂಕರ್, ಹರಿ ಪ್ರಸಾದ್ ಚೌರಾಸಿಯಾ, ಗಿರಿಜಾ ದೇವಿ, ಅಲಿ ಅಕ್ಬರ್ ಖಾನ್, ಭೀಮ್ ಸೇನ್ ಜೋಶಿ, ಮಲ್ಲಿಕಾರ್ಜುನ್ ಮನ್ಸೂರ್, ಗಂಗೂಬಾಯಿ ಹಾನಗಲ್ ಮುಂತಾದ ಹಲವಾರು ಗಾಯಕರ, ವಾದಕರ ಕೊಡುಗೆ ಅಪಾರ. ಇತ್ತ ಕಡೆ ದಕ್ಷಿಣದಲ್ಲಿ ಜಿ ಎನ್ ಬಾಲಸುಬ್ರಹ್ಮಣ್ಯಂ, ಅರಿಯಾಕ್ಕುಡಿ ರಾಮಾನುಜ ಅಯ್ಯಂಗಾರ್, ಶೆಮ್ಮಗುಂಡಿ ಶ್ರೀನಿವಾಸ ಅಯ್ಯರ್, ಎಂ.ಎಸ್. ಸುಬ್ಬುಲಕ್ಷ್ಮಿ, ಎಂ. ಎಲ್. ವಸಂತ ಕುಮಾರಿ, ಎಂ. ಬಾಲಮುರಳಿ ಕೃಷ್ಣ ಮುಂತಾದವರು ಸಂಗೀತದಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡಿ ಭಾರತೀಯ ಸಂಗೀತವು ದೇಶ, ಭಾಷೆ, ಕಾಲವನ್ನು ಮೀರಿ ನಡೆಯುವಂತೆ ಮಾಡಿದ್ದಾರೆ.


                           






Thursday, 8 March 2018

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 1


 ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ

      18ನೇ ಶತಮಾನ ದಕ್ಷಿಣಾದಿ ಸಂಗೀತದ ಸುವರ್ಣಯುಗವೆಂದೇ ಜನಜನಿತ. ಈ ಶತಮಾನದಲ್ಲಿ ಬಾಳಿ ಬದುಕಿದ ಹಲವಾರು ವಾಗ್ಗೇಯಕಾರರು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಂಥವರಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರೂ ಒಬ್ಬರು. ಶ್ರೀ ವಿದ್ಯಾ ಪಾರಂಗತರೂ ಶ್ರೀ ಚಕ್ರ ಉಪಾಸಕರೂ ಆಗಿರುವ ದೀಕ್ಷಿತರಿಗೆ ದೇವಿಯ ಮೇಲೆ ಅವಿಚ್ಛಿನ್ನ ಭಕ್ತಿ. ಹಾಗಾಗಿಯೇ ಏನೋ ದೇವಿಪರ ಕೃತಿ ರಚನೆಯಲ್ಲಿ ದೀಕ್ಷಿತರಿಗೆ ಮಿಕ್ಕ ಯಾವ ವಾಗ್ಗೇಯಕಾರರು ಸಾಟಿಯಾಗಲಾರರು. ಇದು ಅವರ ಗುರುಗಳಾದ ಚಿದಂಬರ ಯೋಗಿಗಳಿಂದ ಕಲಿತ ಶ್ರೀವಿದ್ಯಾದೀಕ್ಷೆಯ  ಫಲವೆಂದರೆ ತಪ್ಪಲ್ಲ ವೆಂದೆನಿಸುತ್ತದೆ. 
     ದೀಕ್ಷಿತರ ದೇವಿಪರ ಕೃತಿಗಳಿಗೆ ಮುಕುಟಮಣಿ ಭೂಷಣವಾದುದು ನವಾವರಣ ಕೃತಿಗಳೆಂದೇ ಪ್ರಸಿದ್ಧವಾದ ‘ಶ್ರೀಕಮಲಾಂಬಾ ನವಾವರಣ’ ಕೃತಿಗಳು. ಈ ಕೃತಿಯು ದೀಕ್ಷಿತರ ಹುಟ್ಟೂರಾದ ತಂಜಾವೂರು ಜಿಲ್ಲೆಯ ತಿರುವಾರೂರು ದೇವಾಲಯದ ಅಧಿದೇವನಾದ ಶ್ರೀತ್ಯಾಗರಾಜ ಸ್ವಾಮಿಯ (ಶಿವ) ಮಡದಿಯಾದ ಶ್ರೀ ಕಮಲಾಂಬಾ ದೇವಿ (ಪಾರ್ವತಿ)ಯ ಕುರಿತ ಸ್ತುತಿಗೀತೆ ಯಾಗಿದೆ. ಈ ಕೃತಿಗಳಲ್ಲಿ ಕಂಡುಬರುವ ಆಧ್ಯಾತ್ಮಿಕತೆ, ಭಕ್ತಿಪರವಶತೆ, ತಂತ್ರ-ಮಂತ್ರಗಳ ಜ್ಞಾನ ಪ್ರಖರತೆ ಹಾಗೂ ರಾಗ-ತಾಳಗಳ ವೈಭವತೆ ದೀಕ್ಷಿತರ ಇತರ ಕೃತಿಗಳಿಗಿಂತ ಮೇಲ್ಮಟ್ಟದಲ್ಲಿವೆ ಎಂದರೆ ಅತಿಶಯೋಕ್ತಿಯಲ್ಲ. ಹಾಗಾಗಿಯೇ ಇಲ್ಲಿ ಭಕ್ತಿಯು ನಾದವಾಹಿನಿಯಾಗಿ ಪ್ರವಾಹಿಸುವ ಗಂಗೆಯಂತೆ ತುಂಬು ಗಾಂಭೀರ್ಯದಿಂದ ಹರಿದು ಕೃತಿಯ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವಂತೆ ಮಾಡಿದೆ.
     ಈ ಕೃತಿಯ ಮೂಲಕ ಮುತ್ತುಸ್ವಾಮಿ ದೀಕ್ಷಿತರು ಕಮಲಾಂಬಾ ದೇವಿಯನ್ನು ಶ್ರೀಮಹಾ ತ್ರಿಪುರಸುಂದರೀ ರೂಪದಲ್ಲಿ ಶ್ರೀಚಕ್ರ ಪೀಠದ ಮೇಲೆ ವಿರಾಜಮಾನಳಾಗಿ ಕುಳ್ಳಿರಿಸಿ ಸ್ತುತಿಗೈದಿದ್ದಾರೆ ಶ್ರೀ ಚಕ್ರದ ಪೂಜಾವಿಧಿಗಳನ್ನು ದೀಕ್ಷಿತರು ನವಾವರಣ ದ ಒಂಭತ್ತು  ಕೃತಿಗಳಲ್ಲಿ ಮಂತ್ರ ಮತ್ತು ತಂತ್ರಗಳಿಗನುಸಾರವಾಗಿ ವಿವರಿಸಿದ್ದಾರೆ. ಮೊದಲು ಶ್ರೀಚಕ್ರದ ಸ್ಥೂಲ ಪರಿಚಯ ಮಾಡಿಕೊಳ್ಳೋಣ.
ಶ್ರೀಚಕ್ರದ ಸಂಕ್ಷಿಪ್ತ ವಿವರ:
     ಮೇಲಿರುವ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಇದನ್ನು ಶ್ರೀಚಕ್ರವೆಂದು ಕರೆಯುತ್ತಾರೆ. ಇದುವೇ ಶ್ರೀಚಕ್ರ ಸ್ವಾಮಿನಿ ಯಾದ ಶ್ರೀಮಹಾ ತ್ರಿಪುರಸುಂದರಿಯ ಆವಾಸಸ್ಥಾನ. ಶ್ರೀಚಕ್ರವು ಚೌಕದಿಂದ ಆರಂಭವಾಗಿ ಮಧ್ಯದ ಕೇಂದ್ರಬಿಂದುವಿನ ತನಕ ಒಂಭತ್ತು ಆವರಣಗಳನ್ನು ಒಳಗೊಂಡಿದೆ. ಈ ಒಂಭತ್ತು ಆವರಣಗಳಿಗೆ ಪ್ರತ್ಯೇಕ ಹೆಸರುಗಳಿವೆ. ಈ ಒಂಭತ್ತು ಆವರಣ ಗಳಿಗೂ ಒಂಭತ್ತು ಚಕ್ರಗಳಿದ್ದು ಒಂದೊಂದು ಚಕ್ರಕ್ಕೂ ಒಂದೊಂದು ಹೆಸರಿದೆ. ಆ ಒಂಭತ್ತು ಚಕ್ರಕ್ಕೂ ಒಂಭತ್ತು ಚಕ್ರೇಶ್ವರಿ ಯರಿದ್ದಾರೆ. ಅದೇ ರೀತಿ ಒಂಭತ್ತು ಆವರಣಗಳಿಗೆ ಒಂಭತ್ತು ಯೋಗಿನಿಯರಿದ್ದಾರೆ. ಹೀಗೆ ಒಂದೊಂದು ಆವರಣವನ್ನು , ಆವರಣದಲ್ಲಿರುವ ಚಕ್ರದ ಅಧಿದೇವತೆಯರನ್ನು ಆರಾಧಿಸುತ್ತಾ ಮುಂದೆ ಹೋದರೆ ಪ್ರಧಾನ ಶಕ್ತಿಯಾದ ಜಗನ್ಮಾತೆಯ ದರ್ಶನಭಾಗ್ಯ ಲಭಿಸುತ್ತದೆ.  ಶ್ರೀಚಕ್ರದ ಆವರಣಗಳ ಸ್ಥೂಲ ವಿವರ:



ಆವರಣದ ಹೆಸರು   ಆವರಣದ ವಿವರ

1 ಭೂಪುರ (ಭೂಗ್ರಹ)
ಹೊರಗಿರುವ ಚೌಕರೂಪ
2 ಷೋಡಶದಳ ಪದ್ಮ
16 ಕಮಲಗಳಿಂದ ಕೂಡಿದೆ
3 ಅಷ್ಟದಳ ಪದ್ಮ
8 ಕಮಲಗಳಿಂದ ಕೂಡಿದೆ
4 ಚತುರ್ದಶಾರ
14 ತ್ರಿಕೋಣಗಳಿಂದ ಕೂಡಿದೆ
5 ಬಹಿರ್ದಶಾರ
10 ತ್ರಿಕೋಣಗಳಿಂದ ಕೂಡಿದೆ
6 ಅಂತರ್ದಶಾರ
10 ತ್ರಿಕೋನಗಳಿಂದ ಕೂಡಿದೆ.
7 ಅಷ್ಟಕೋಣ
8  ತ್ರಿಕೋಣಗಳಿಂದ ಕೂಡಿದೆ.
8 ತ್ರಿಕೋಣ
1  ತ್ರಿಕೋಣ
9 ಬಿಂದು
ಮಧ್ಯದ ಕೇಂದ್ರ ಬಿಂದು



ಹಾಗೆಯೇ 9 ಚಕ್ರ, 9 ಚಕ್ರೇಶ್ವರಿ ಹಾಗೂ 9 ಯೋಗಿನಿಯರ ವಿವರ ಇಂತಿವೆ:
  ಚಕ್ರದ ಹೆಸರು
ಚಕ್ರೇಶ್ವರಿಯರ ಹೆಸರು
ಯೋಗಿನಿಯರ ಹೆಸರು
ತ್ರೈಲೋಕ್ಯ ಮೋಹನ ಚಕ್ರ
ತ್ರಿಪುರಾ
ಪ್ರಕಟ ಯೋಗಿನಿ
ಸರ್ವಾರ್ಥ ಸಾಧಕ ಚಕ್ರ
ತ್ರಿಪುರೇಶಿ
ಗುಪ್ತ ಯೋಗಿನಿ
ಸರ್ವ ಸಂಕ್ಷೋಭಣ ಚಕ್ರ
ತ್ರಿಪುರ ಸುಂದರಿ
ಗುಪ್ತತರ ಯೋಗಿನಿ
ಸರ್ವ ಸೌಭಾಗ್ಯದಾಯಕ
 ಚಕ್ರ ತ್ರಿಪುರವಾಸಿನಿ
ಸಂಪ್ರದಾಯ ಯೋಗಿನಿ
ಸರ್ವಾರ್ಥ ಸಾಧಕ ಚಕ್ರ
ತ್ರಿಪುರಾಶ್ರೀ
ಕುಲೋತ್ತೀರ್ಣ ಯೋಗಿನಿ
ಸರ್ವರಕ್ಷಾಕರ ಚಕ್ರ
ತ್ರಿಪುರಮಾಲಿನಿ
ನಿಗರ್ಭ ಯೋಗಿನಿ
ಸರ್ವರೋಗಹರ ಚಕ್ರ
ತ್ರಿಪುರ ಸಿದ್ಧ
ರಹಸ್ಯ ಯೋಗಿನಿ
¸ಸರ್ವಸಿದ್ಧಿಪ್ರದ ಚಕ್ರ
ತ್ರಿಪುರಾಂಬಾ
ಅತಿರಹಸ್ಯ ಯೋಗಿನಿ
ಸರ್ವಾನಂದಮಯ ಚಕ್ರ
ಮಹಾತ್ರಿಪುರ ಸುಂದರಿ
ಪರಾಪರ ರಹಸ್ಯ ಯೋಗಿನಿ
    
ಮುತ್ತುಸ್ವಾಮಿ ದೀಕ್ಷಿತರು ಶ್ರೀಚಕ್ರದ ಒಂದೊಂದು ಆವರಣಕ್ಕೂ ಸಮಾನವಾಗುವಂತೆ ಒಂದೊಂದು ಕೃತಿಯನ್ನು ರಚಿಸಿದ್ದಾರೆ. ಶ್ರೀಚಕ್ರದ ಒಂಭತ್ತು ಆವರಣಗಳ ಸಂಪೂರ್ಣ ವಿವರಗಳು ಬರುವ ಹಾಗೆ ಶ್ರೀ ಕಮಲಾಂಬ ನವಾವರಣ ಕೃತಿಯನ್ನು ರಚಿಸಿದ್ದಾರೆ. ಈ ಹಿಂದೆಯೇ ತಿಳಿಸಿದಂತೆ ಶ್ರೀಚಕ್ರದ ಒಂಭತ್ತು ಆವರಣಕ್ಕೂ ಒಂದೊಂದು ಚಕ್ರವಿದೆ, ಒಬ್ಬೊಬ್ಬ ಚಕ್ರೇಶ್ವರಿಯರಿದ್ದಾರೆ, ಒಬ್ಬೊಬ್ಬ ಯೋಗಿನಿಯರಿದ್ದಾರೆ. ದೇವಿ ಖಡ್ಗಮಾಲಾ ಸ್ತೋತ್ರದಲ್ಲಿ ಬರುವ ಈ ಎಲ್ಲಾ ವಿವರಗಳನ್ನು ದೀಕ್ಷಿತರು ಶ್ರೀಕಮಲಾಂಬಾ ನವಾವರಣ ಕೃತಿಯಲ್ಲಿ ಕ್ರಮವಾಗಿಯೂ , ಅರ್ಥಪೂರ್ಣವಾಗಿಯೂ ಬರುವಂತೆ ರಚಿಸಿದ್ದು ಅವರ ಫ್ರೌಢಿಮೆಗೆ ಮತ್ತು ರಚನಾ ಕೌಶಲಕ್ಕೆ ಸಾಕ್ಷಿ. ಈ ಕೃತಿಗಳನ್ನು ನವರಾತ್ರಿ ಸಂದರ್ಭ ಹಾಡುವ ಪರಿಪಾಠವಿದೆ. ಈ ಕೃತಿಗುಚ್ಛದಲ್ಲಿ ಒಟ್ಟು ಹದಿಮೂರು ಕೃತಿಗಳಿವೆ. ಗಣಪತಿಯ ಮತ್ತು ಸುಬ್ರಹಣ್ಯನ ಮೊದಲ ಎರಡು ಧ್ಯಾನಕೃತಿಗಳನ್ನು ನವರಾತ್ರಿಯ ಹಿಂದಿನ ದಿನ ಅಂದರೆ ಮಹಾಲಯ ಅಮವಾಸ್ಯೆಯಂದು ಹಾಡಲಾಗುವುದು. ಪಾಡ್ಯದಂದು ಅಂದರೆ ನವರಾತ್ರಾರಂಭದ ದಿನ ತೋಡಿ ರಾಗದ ಧ್ಯಾನ ಕೃತಿಯನ್ನು ಹಾಡಿ ಪ್ರಥಮ ಆವರಣವಾದ ಆನಂದ ಭೈರವಿ ರಾಗದ ಕೃತಿಯಿಂದ ಆರಂಭ ಮಾಡಿ ನಂತರದ ದಿನಗಳಲ್ಲಿ ದಿನಕ್ಕೊಂದು ಕೃತಿಯಂತೆ ಕ್ರಮವಾಗಿ ವಿಜಯದಶಮಿಗೆ ಶ್ರೀರಾಗ ಮಂಗಳ ಕೃತಿಯನ್ನು ಹಾಡಿಮುಗಿಸುವುದು ಸಂಪ್ರದಾಯ.  
ಶ್ರೀ ಕಮಲಾಂಬಾ ನವಾವರಣ ಕೃತಿಯ ಮೊದಲ ಮೂರು ಧ್ಯಾನ ಕೃತಿಗಳು, ಕೊನೆಯ ಒಂದು ಮಂಗಳ ಕೃತಿಯನ್ನೊಳ ಗೊಂಡ ಒಂಭತ್ತು ಆವರಣ ಕೃತಿಗಳ ವಿವರ ಇಂತಿವೆ.


        ಕೃತಿ             
 ರಾಗ
  ತಾಳ
1  ಶ್ರೀ ಮಹಾಗಣಪತಿ ರವತು ಮಾಂ  (ಧ್ಯಾನ ಕೃತಿ)      
ಗೌಳ
 ಮಿಶ್ರಛಾಪುತಾಳ
2  ಬಾಲ ಸುಬ್ರಹ್ಮಣ್ಯಂ ಭಜೇಹಂ      (ಧ್ಯಾನ ಕೃತಿ)     
 ಸುರಟಿ
 ಆದಿತಾಳ
3  ಶ್ರೀ ಕಮಲಾಂಬಿಕೇ             (ಧ್ಯಾನ ಕೃತಿ)    
 ತೋಡಿ
ರೂಪಕ ತಾಳ
4  ಕಮಲಾಂಬಾ ಸಂರಕ್ಷತುಮಾಂ      (ಪ್ರಥಮ ಆವರಣ)  
 ಆನಂದಭೈರವಿ 
ಮಿಶ್ರಛಾಪುತಾಳ
5  ಕಮಲಾಂಬಾಂ ಭಜರೇ          (ದ್ವಿತೀಯ ಆವರಣ)     
 ಕಲ್ಯಾಣಿ
ಆದಿತಾಳ
6  ಶ್ರೀ ಕಮಲಾಂಬಿಕಯಾ          (ತೃತೀಯ ಆವರಣ)     
 ಶಂಕರಾಭರಣ
ರೂಪಕತಾಳ
7  ಕಮಲಾಂಬಿಕಾಯೈ             (ಚತುರ್ಥ ಆವರಣ)       
ಕಾಂಭೋಜಿ
ಅಟ್ಟತಾಳ
8  ಶ್ರೀ ಕಮಲಾಂಬಾಯಾಃ          (ಪಂಚಮ ಆವರಣ)     
 ಭೈರವಿ
ಮಿಶ್ರಝಂಪೆ ತಾಳ
9  ಕಮಲಾಂಬಿಕಯಾಃ            (ಷಷ್ಠಮ ಆವರಣ)
 ಪುನ್ನಾಗವರಾಳಿ   
ರೂಪಕ ತಾಳ
10  ಶ್ರೀ ಕಮಲಾಂಬಿಕಯಾಂ         (ಸಪ್ತಮಿ ಆವರಣ)       
 ಶಹನ
 ತ್ರಿಪುಟ ತಾಳ
11  ಶ್ರೀ ಕಮಲಾಂಬಿಕೆ             (ಅಷ್ಟಮಿ ಆವರಣ)       
 ಘಂಟಾ
 ಆದಿತಾಳ
12  ಶ್ರೀ ಕಮಲಾಂಬಾ ಜಯತಿ       (ನವಮಾವರಣ)       
 ಆಹಿರಿ
ತಿಶ್ರಜಾತಿ ಏಕತಾಳ
13  ಶ್ರೀ ಕಮಲಾಂಬಿಕೆ ಶಿವೇ        (ಮಂಗಳ ಕೃತಿ)     
 ಶ್ರೀ
 ಖಂಡ ಏಕತಾಳ


ಶ್ರೀ ಮಹಾಗಣಪತಿರವತುಮಾಂ        ರಾಗ: ಗೌಳ,   ತಾಳ: ಮಿಶ್ರಛಾಪು


ಶ್ರೀ ಮಹಾಗಣಪತಿಂ ರವತುಮಾಂ  |  ಸಿದ್ಧಿವಿನಾಯಕೋ ಮಾತಂಗ ಮುಖ||   || ಪಲ್ಲವಿ ||

ಕಾಮಜನಕ ವಿಧೀಂದ್ರ ಸನ್ನುತ  |  ಕಮಲಾಲಯ ತಟನಿವಾಸೋ  |
ಕೋಮಲಕರ ಪಲ್ಲವಪದಕರ  |  ಗುರುಗುಹಾಗ್ರಜ ಶಿವಾತ್ಮಜ  ||     || ಅನುಪಲ್ಲವಿ ||

ಸುವರ್ಣಾಕರ್ಷಣ ವಿಘ್ನರಾಜೋ | ಪಾದಾಂಬುಜೋ ಗೌರÀವರ್ಣ ವಸನಧರೋ | ಫಾಲಚಂದ್ರೋ |
ನರಾದಿವಿನುತ ಲಂಬೋದರೋ | ಕುವಲಯ ಸ್ವವಿಷಾಣ ಪಾಶಾಂಕುಶ ಮೋದಕೋ |
ಪ್ರಕಾಶಕರೋ ಭವಜಲಧಿ ನಾವೋ | ಮೂಲ ಪ್ರಕೃತಿ ಸ್ವಭಾವ ಸುಖಕರೋ ||         || ಶ್ರೀ ಮಹಾಗಣಪತಿ|| 

ರವಿಸಹಸ್ರಭ ಸನ್ನಿಭ ದೇಹೋ | ಕವಿಜನನುತ ಮೂಷಿಕವಾಹೋ |
ಅವನತ ದೇವತಾ ಸಮೂಹೋ | ಅವಿನಾಶ ಕೈವಲ್ಯ ದೇಹೋ ||     || ಶ್ರೀ ಮಹಾಗಣಪತಿ||

    ಯಾವುದೇ ಕಾರ್ಯ ಮಾಡುವಾಗಲೂ ಆದಿವಂದ್ಯನಾದ ಮಹಾಗಣಪತಿಗೆ ಮೊದಲ ಪೂಜೆ ಸಲ್ಲಬೇಕು. ಈ ಕಾರಣದಿಂದಲೇ ದೀಕ್ಷಿತರು ವಿಘ್ನ ನಿವಾರಕನಾದ ವಿಘ್ನೇಶ್ವರನ ಆರಾಧನೆಯಿಂದಲೇ ನವಾವರಣ ಕೃತಿರಚನೆಗೆ ತೊಡಗಿದ್ದಾರೆ. ಈ ಕೃತಿಗೆ ಗಣಪತಿಯ ಗಂಭೀರ ಭಾವಕ್ಕೆ ತಕ್ಕುದಾದ ಘನ ಗಂಭೀರ ರಾಗವಾದÀ ಗೌಳವನ್ನು ಆಯ್ಕೆ ಮಾಡಿದ್ದಾರೆ.  
   ಪಲ್ಲವಿ: ಮಹಾಗಣಪತಿಯೇ, ಸಿದ್ಧಿವಿನಾಯಕನೇ, ಆನೆ ಮುಖದವನೇ ನನ್ನನ್ನು ರಕ್ಷಿಸು ಎಂದಿದ್ದಾರೆ. ಶ್ರೀ ಎಂಬ ಪದದಿಂದ ಕೃತಿಯ ಶುಭಾರಂಭ.
   ಅನುಪಲ್ಲವಿ: ಈ ಹಿಂದೆಯೇ ಹೇಳಿದಂತೆ ಈ ಕೃತಿಯು ತಿರುವಾರೂರು ಕ್ಷೇತ್ರ ದೇವತೆ ಕಮಲಾಂಬಿಕಾ ಅಮ್ಮನವರ ಸ್ತುತಿಗೀತೆ. ಈ ಕ್ಷೇತ್ರದಲ್ಲಿ ಕಮಲಾಲಂiÀÉುಂಬ ಎಂಬ ಕಲ್ಯಾಣಿ ಇದೆ. ಅಲ್ಲಿ ವಿಘ್ನೇಶ್ವರನು ವಾಸವಾಗಿದ್ದನೆ. ಆ ಗಣಪತಿಯನ್ನು ನಾನು ಭಕ್ತಿಯಿಂದ ಸ್ತುತಿಗೈಯ್ಯುತ್ತಿರುವೆ ಎಂದು ದೀಕ್ಷಿತರು ಅನುಪಲ್ಲವಿಯಲ್ಲಿ ತುಂಬಾ ಸೊಗಸಾಗಿ ಹೇಳಿದ್ದಾರೆ.
   ಚರಣ: ಚರಣ ಸಾಹಿತ್ಯದ ಮೊಲಿಗೆ ಸುವರ್ಣಾಕರ್ಷೊ ವಿಘ್ನರಾಜೋ ಎಂದಿದ್ದಾರೆ. ಕ್ಷೇತ್ರಪುರಾಣದ ಪ್ರಕಾರ ಪ್ರಚಲಿತದಲ್ಲಿರುವ ಕಥೆಯ ಬಗ್ಗೆ ದೀಕ್ಷಿತರು ಇಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ಈ ಕಥೆ ಹೀಗಿದೆ. ಹಿಂದೆ ತಿರುವಾರೂರಿನಲ್ಲಿ ಸುಂದರಮೂರ್ತೀ ಎಂಬ ಶಿವಭಕ್ತರೊಬ್ಬರು ಇದ್ರು. ಅವರ ಪತ್ನಿಗೆ ಬಂಗಾರದ ಒಡವೆಗಳಿಂದ ತಮ್ಮನ್ನು ಸಿಂಗರಿಸಬೇಕೆಂದು ಆಸೆಯಾಗಿ ಪತಿಗೆ ತಿಳಿಸಿದ್ದರಂತೆ. ಆಗ ಅವರು ತಿರುವಾರೂರಿನ ಅಧಿದೇವ ತ್ಯಾಗರಾಜನನ್ನು ಭಕ್ತಿಯಿಂದ ಬೇಡುತ್ತಾರೆ. ಭಕ್ತಿಗೆ ಮೆಚ್ಚಿದ ತ್ಯಾಗರಾಜ ಪ್ರತ್ಯಕ್ಷನಾಗಿ ಕೆಲವು ಚಿನ್ನದ ಗಟ್ಟಿಗಳನ್ನು ಸುಂದರ ಮೂರ್ತಿಗೆ ಕೊಡುತ್ತಾನೆ. ಈ ಚಿನ್ನದ ಗಟ್ಟಿಗಳನ್ನು ಸ್ಥಳೀಯ ಅಕ್ಕಸಾಲಿಯಲ್ಲಿ ಒಡವೆ ಮಾಡಲು ಕೊಟ್ಟಾಗ ಆತ ಪರೀಕ್ಷಿಸಿ ಇದು ಶುದ್ಧ ಚಿನ್ನವಲ್ಲ ಎಂದನು. ಈ ವಿಚಾರವನ್ನು ಸುಂದರಮೂರ್ತಿ ತ್ಯಾಗರಾಜನಲ್ಲಿ ತಿಳಿಸಿದಾಗ. ಆತ ತನ್ನ ಮಗ ವಿಘ್ನೇಶ್ವgನÀನ್ನು ಅಕ್ಕಸಾಲಿಗನ ರೂಪದಲ್ಲಿ ಕಳುಹಿಸಿದನಂತೆ. ವಿಘ್ನೇಶ್ವರನು ಚಿನ್ನದ ಗಟ್ಟಿಯನ್ನು ಒರೆಗೆ ಹಚ್ಚಿ ಶುದ್ಧಚಿನ್ನವೆಂದು ನಿರೂಪಿಸಿದನೆಂದು ಪ್ರತೀತಿ.
 ಮುಂದೆ ಗೌರವರ್ಣ ಎಂಬಲ್ಲಿ ಗೌರ-[ಗೌಳ] ಎಂಬ ಪದವನ್ನು ರಾಗಮುದ್ರೆಯಾಗಿ ದೀಕ್ಷ್ಷಿತರು ಜಾಣ್ಮೆಯಿಂದ ಬಳಸಿಕೊಂಡಿದ್ದಾರೆ. ಹೀಗೆ ದೀಕ್ಷಿತರು ನವಾವರಣ ಕೃತಿ ರಚಿಸುವ ಸಂದರ್ಭ ಯಾವುದೇ ವಿಘ್ನ ಬರದಂತೆ ಅನುಗ್ರಹಿಸು ಎಂದು ಮಹಾಗಣಪತಿಯನ್ನು ಪರಿಪರಿಯಾಗಿ ಸ್ತುತಿಸಿದ್ದಾರೆ ಎಂಬರ್ಥದಲ್ಲಿ ಗುಚ್ಚದ ಮೊದಲ ಕೃತಿಯಾಗಿ ಮೂಡಿಬಂದಿದೆ.



ಬಾಲಸುಬ್ರಹ್ಮಣ್ಯಂ ಭಜೇಹಂ             ರಾಗ: ಸುರಟಿ      ತಾಳ: ಆದಿತಾಳ 



ಬಾಲಸುಬ್ರಹ್ಮಣ್ಯಂ ಭಜೇಹಂ | ಭಕ್ತ ಕಲ್ಪ ಭೂರುಹಂ ಶ್ರೀ ||

ನೀಲಕಂಠ ಹೃದಾನಂದಕರಂ | ನಿತ್ಯ ಶುದ್ಧ ಬುದ್ಧ ಮುಕ್ತಾಂಬರಂ ||

ವೇಲಾಯುಧ ಧರಂ ಸುಂದರಂ | ವ್ಭೆದಾಂತಾರ್ಥ ಬೋಧ ಚತುರಂ ||
ಫಾಲಾಕ್ಷ ಗುರುಗುಹಾವತಾರಂ | ಪರಾಶಕ್ತಿ ಕುಮಾರಂ ಧೀರಂ ||
ಪಾಲಿತ ಗೀರ್ವಾಣಾದಿ ಸಮೂಹಂ | ಪಂಚಭೂತಮಯಂ ಮಾಯಾಮೋಹಂ ||
ನೀಲಕಂಠ ವಾಹಂ ಸುದೇಹಂ | ನಿರತಿಶಯಾನಂದ ಪ್ರವಾಹಂ ||                                             
   ದೀಕ್ಷಿತರು ಕೃತಿಯ ಮೊದಲಿಗೆ ಬಾಲಸುಬ್ರಹ್ಮಣ್ಯನು ಕೇಳಿದ್ದನ್ನು ಕೊಡುವ ಕಲ್ಪವೃಕ್ಷದಂತೆ ಎಂದು ಹಾಡಿ ಹೊಗಳಿದ್ದಾರೆ. ತಂದೆಯಾದ ನೀಲಕಂಠನಿಗೆ ಆನಂದವನ್ನುಂಟು ಮಾಡುವವನು, ವೇಲಾಯುಧವನ್ನು ಧರಿಸಿದವನು, ಉಪನಿಷತ್ತಿನ ಅರ್ಥವನ್ನು ಬೋಧಿಸುವಲ್ಲಿ ನಿಷ್ಣಾತನು. ಪರಾಶಕ್ತಿಯ ಸುಕುಮಾರನು, ತಾನೇ ರಕ್ಷಿಸಿದ ದೇವತೆಗಳ ಸಮೂಹದೊಂದಿಗೆ ಇರುವವನು, ಪಂಚಭೂತ ಮಯವಾದ ಮಾಯಾ ಮೋಹವನ್ನು ಹೊಂದಿರುವವನು. ಮಯೂರ ವಾಹನನು. ಸುಂದರ ಶರೀರನು, ಆನಂದ ಸಾಗರದಲ್ಲಿ ಮುಳುಗಿರುವವನಾದ ಬಾಲಸುಬ್ರಹ್ಮಣ್ಯನನ್ನು ಭಜಿಸುತ್ತೇನೆ.                                                               
    ದೀಕ್ಷಿತರು ಅದ್ವೈತಿಗಳು. ಯಾವುದೇ ಬೇಧ-ಭಾವವಿಲ್ಲದೆ ಎಲ್ಲಾ ದೇವ-ದೇವತೆಗಳ ಕುರಿತು ಕೃತಿ ರಚಿಸಿದ್ದಾರೆ. ಆದರೆ ಅವರ ಆರಾಧ್ಯ ದೈವ ತಿರುತ್ತಣಿಯ ಮುರುಗ. ಹಾಗಾಗಿ ಈ ಗುಚ್ಚ ಕೃತಿಯ ಎರಡನೇ ರಚನೆಯಾಗಿ ಬಾಲಸುಬ್ರಹ್ಮಣ್ಯಂ ಭಜೇಹಂ ಮೂಡಿಬಂದಿದೆ. ಇಲ್ಲಿ ಕಮಲಾಂಬಾ ನವಾವರಣ ಕೃತಿಯನ್ನು ರಚಿಸುವ ಶಕ್ತಿಯನ್ನು ದಯಪಾಲಿಸು ತಂದೆ ಎಂಬರ್ಥದಲ್ಲಿ ಕೃತಿ ರಚನೆಗೊಂಡಿದೆ.


ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 11

  ಶ್ರೀ ಕಮಲಾಂಬಿಕೇ ಶಿವೇ ಪಾಹಿಮಾಂ
  ರಾಗ: ಶ್ರೀ                          ತಾಳ: ಖಂಡ ಏಕತಾಳ


ಮಂಗಳ  ಕೃತಿ

ಶ್ರೀ ಕವiಲಾಂಬಿಕೇ ಶಿವೇ ಪಾಹಿಮಾಂ ಲಲಿತೇ |
ಶ್ರೀಪತಿ ವಿನುತೆ ಸಿತಾಸಿತೆ ಶಿವ ಸಹಿತೇ ||

ರಾಕಾ ಚಂದ್ರಮುಖೀ ರಕ್ಷಿತ ಕೋಲ ಮುಖೀ |
ರಮಾವಾಣೀ ಸಖೀ ರಾಜ ಯೋಗ ಸುಖೀ  ||


ಶಾಕಂಬರಿ ಶಾತೋದರಿ ಚಂದ್ರಕಲಾಧರಿ
ಶಂಕರಿ ಶಂಕರ ಗುರುಗುಹ ಭಕ್ತವಶಂಕರಿ
ಏಕಾಕ್ಷರಿ ಭುವನೇಶ್ವರಿ ಈಶಪ್ರಿಯಕರಿ
ಶ್ರೀಕರಿ ಸುಖಕರಿ ಶ್ರೀಮಹಾತ್ರಿಪುರಸುಂದರಿ
ಶ್ರೀಕರಿ ಶುಭಕರಿ ಶ್ರೀಮಹಾತ್ರಿಪುರಸುಂದರಿ ||


  ಶ್ರೀರಾಗದ ಈ ಕೃತಿಯು ಕಮಲಾಂಬಾ ನವಾವರಣ ಕೃತಿಗುಚ್ಛದ ಮಂಗಳಕೃತಿಯಾಗಿದೆ. ದೀಕ್ಷಿತರು ಮಂಗಳಕೃತಿಗೆ ಮಂಗಳರಾಗವಾದ ಶ್ರೀರಾಗವನ್ನೇ ಆಯ್ಕೆ ಮಾಡಿದ್ದಾರೆ.
   ಪಲ್ಲವಿಯಲ್ಲಿ ಕಮಲಾಂಬಿಕೇ ಲಲಿತೇ ಶಿವೇ ಸದಾ ನನ್ನನ್ನು ರಕ್ಷಿಸು ಎಂದಿದ್ದಾರೆ.
   ಸಮಷ್ಟಿ ಚರಣವಾದ ಈ ಕೃತಿಯಲ್ಲಿ ದೇವಿ ಕಮಲಾಂಬಿಕೆ ನಿನ್ನ ಮುಖ ಪೂರ್ಣಚಂದ್ರನಂತೆ ಕೊಂಗೊಳಿಸುತ್ತಿದೆ. ಲಕ್ಷ್ಮೀ-ಸರಸ್ವತಿಯರಿಗೆ ಸಖಿಯಾಗಿ, ರಾಜಯೋಗದಿಂದ ಸುಖಿಸುವವಳು ಎಂದಿದ್ದಾರೆ.
  ಶಾಕಾಂಬರಿ, ಶಾತೋದರಿ, ಚಂದ್ರನನ್ನು ಶಿರದಲ್ಲಿ ಧರಿಸಿದವಳು. ಶಂಕರ, ಷಣ್ಮುಖರ ಭಕ್ತರಿಗೆ ವಶಳಾದ ಶಂಕರಿಯೂ, ಏಕಾಕ್ಷರಿಯೂ, ಈಶಪ್ರ್ರಿಯಕರಿಯೂ, ಲಕ್ಷ್ಮೀಕರಳೂ, ಅಲ್ಲದೆ ಸುಖವನ್ನೂ, ಶುಭವನ್ನೂ ಅನುಗ್ರಹಿಸುವ ಶ್ರೀಮಹಾತ್ರಿಪುರಸುಂದರಿಯೇ ಸದಾ ರಕ್ಷಿಸು ಎಂದಿದ್ದಾರೆ.




ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 10

                                          ಶ್ರೀ ಕಮಲಾಂಬಾ ಜಯತಿ ಅಂಬಾ

                               ರಾಗ: ಆಹಿರಿ                    ತಾಳ: ತ್ರಿಶ್ರ ಏಕತಾಳ



ನವಮ ಆವರಣ ಕೃತಿ
ಶ್ರೀ ಕಮಲಾಂಬಾ ಜಯತಿ ಅಂಬಾ  |  ಶ್ರೀ ಕಮಲಾಂಬಾ ಜಯತಿ ಜಗದಂಬಾ
ಶ್ರೀ ಕಮಲಾಂಬಾ ಜಯತಿ ಶೃಂಗಾರ ರಸ ಕದಂಬಾ ಮದಾಂಬಾ  |
ಶ್ರೀ ಕಮಲಾಂಬಾ ಜಯತಿ ಚಿತ್‍ಬಿಂಬಾ ಪ್ರತಿಬಿಂಬೇಂದು ಬಿಂಬಾಶ್ರೀ ಕಮಲಾಂಬಾ ಜಯತಿ  ||

ಶ್ರೀಪುರಬಿಂದು ಮಧ್ಯಸ್ಥ ಚಿಂತಾಮಣಿ ಮಂದಿರಸ್ಥ  |  ಶಿವಾಕಾರ ಮಂಚಸ್ಥಿತ ಶಿವಕಾಮೇಶಾಂಕಸ್ಥ  ||

ಸೂಕರನಾನದ್ಯರ್ಚಿತ ಮಹಾತ್ರಿಪುರಸುಂದರೀಂ ರಾಜೇಶ್ವರೀಂ |
ಶ್ರೀಕರ ಸರ್ವಾನಂದಮಯ ಚಕ್ರವಾಸಿನೀಂ ಸುವಾಸಿನೀಂ ಚಿಂತಯೇ ಹಂ  ||
ದಿವಾಕರ ಶೀತ ಕಿರಣ ಪಾವಕಾದಿ ವಿಕಾಸ ಕರಯಾ  |  ಭೀಕರ ತಾಪತ್ರಯಾದಿ ಭೇದನ ಧುರೀಣ ತರಯಾ |
ಪಾಕರಿಪು ಪ್ರಮುಖಾದಿ ಪ್ರಾರ್ಥಿತ ಸುಕಳೇಬರಯಾ  | ಪ್ರಾಕಟ್ಯ ಪರಾಪರಯಾ ಪಾಲಿತೋದಯಾಕರಯಾ ||

ಶ್ರೀಮಾತ್ರೇ ನಮಸ್ತೇ ಚಿನ್ಮಾತ್ರೇ ಸೇವಿತ ರಮಾಹರಿಕಾ ವಿಧಾತ್ರೇ  | ವಾಮಾದಿ ಶಕ್ತಿ ಪೂಜಿತ ಪರದೇವತಾಯಾ ಸಕಲ ಜಾತಂ |
ವಾಮಾದಿ ದ್ವಾದಶಭಿರುಪಾಸಿತ  | ಕಾದಿ ಹಾದಿ ಸಾದಿ ಮಂತ್ರ ರೂಪಿಣ್ಯಃ  |
ಪ್ರೇಮಾಸ್ಪದ ಶಿವಗುರುಗುಹ ಜನನ್ಯಾಂ  | ಪ್ರೀತಿಯುಕ್ತ ಮಚ್ಚಿತ್ತಂ ವಿಲಯತುಂ  |
ಬ್ರಹ್ಮಮಯ ಪ್ರಕಾಶಿನೀ ನಾಮರೂಪ ವಿಮರ್ಶಿನೀ  | ಕಾಮಕಲಾ ಪ್ರದರ್ಶಿನೀ ಸಾಮರಸ್ಯ ನಿದರ್ಶಿನೀ  ||



   ಶ್ರೀ ಕಮಲಾಂಬಾ ಜಯತಿ ಕೃತಿಯು ಸಂಬೋಧನಾ ವಿಭಕ್ತಿ ಬಿಟ್ಟು ಬೇರೆ ಎಲ್ಲಾ ವಿಭಕ್ತಿಗಳಲ್ಲೂ ಇವೆ. ಈ ಒಂಬತ್ತನೇ ಆವರಣದ ಬಿಂದುವಿನ ಹೆಸರು ಸರ್ವಾನಂದಮಯ ಚಕ್ರ. ಚಕ್ರೇಶ್ವರಿಯ ಹೆಸರು ಮಹಾತ್ರಿಪುರ ಸುಂದರಿ. ಯೋಗಿನಿಯ ಹೆಸರು ಪರಾಪರ ರಹಸ್ಯಯೋಗಿನಿ.
  ದೀಕ್ಷಿತರು ಈ ಕೃತಿಯ ಪಲ್ಲವಿಯಲ್ಲಿ ಶ್ರೀ ಕಮಲಾಂಬಾ ಜಯತಿ ಎಂದು ಐದು ಸಲ ಬಳಸಿದ್ದಾರೆ. ಕಮಲಾಂಬೆಯ ಜಯವನ್ನು ಆನಂದಿಂದ ಹೇಳುತ್ತಾ ಶೃಂಗಾರ ರಸಸಂಪೂರ್ಣಳಾದ ಚಂದ್ರಬಿಂಬದಲ್ಲಿಯೂ, ಪ್ರತಿಬಿಂಬದಲ್ಲಿಯೂ ವಾಸವಾಗಿರುವ ದೇವಿಯನ್ನು ಸ್ತುತಿಸುತ್ತಾ, ಶ್ರೀಚಕ್ರದ ಬಿಂದು ಮಧ್ಯದಲ್ಲಿರುವ ಚಿಂತಾಮಣಿಗ್ರಹದಲ್ಲಿ ವಾಸಿಸುವ, ಶಿವರೂಪದ ಮಂಚದಲ್ಲಿರುವ ಶಿವಕಾಮೇಶ್ವರನ ತೊಡೆಯ ಮೇಲೆ ಕುಳಿತಿರುವ ದೇವಿಯು ಜಯಶೀಲೆ ಎಂದಿದ್ದಾರೆ.
  ಅನುಪಲ್ಲವಿಯಲ್ಲಿ ವರಾಹಸ್ವರೂಪಿ ಮಹಾವಿಷ್ಣುವಿನಿಂದ ಅರ್ಚಿತಳಾದ ಮಹಾತ್ರಿಪುರಸುಂದರಿಯಾದ ರಾeರಾಜೇಶ್ವರಿ, ಸೂರ್ಯ, ಚಂದ್ರ, ಅಗ್ನಿ ಮೊದಲಾದ ತೇಜೋರೂಪಿಗಳಿಗೂ ಪ್ರಕಾಶ ನೀಡುª,À ಭಯಂಕರ ತಾಪತ್ರಯಗಳನ್ನು ನಿವಾರಿಸುವ, ಇಂದ್ರಾದಿ ದೇವತೆಗಳಿಗಳಿಂದ ಪ್ರಾರ್ಥಿಸಲ್ಪಡುವ, ಸುಂದರ ಶರೀರವುಳ್ಳ, ಪರಾಪÀರಗಳನ್ನು ಪ್ರಕಟಿಸುವ, ದಯಾಸುಧಾಸಾಗರಳಾದ ಕಮಲಾಂಬಿಕೆಯಿಂದ ಪಾಲಿಸಲ್ಪಟ್ಟಿದ್ದೇನೆ.
  ಚರಣದಲ್ಲಿ ರಮಾಹರಿಕಾ ಎಂದು ರಾಗದ ಹೆಸರು ಆಹಿರಿಯನ್ನು ಅತಿ ಜಾಣ್ಮೆಯಿಂದ ಜೋಡಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ವಾಮಾಚಾರ ಪೂಜಾ ಸಂಕೇತ. ದೀಕ್ಷಿತರು ಶ್ರೀ ಮಹಾತ್ರಿಪುರ ಸುಂದರಿ ದೇವಿಯು ವಾಮಾಚಾರ ಪೂಜಾ ಪದ್ಧತಿಯಲ್ಲೂ ಪೂಜಿಸಲ್ಪಡುವವಳು ಎಂದಿದ್ದಾರೆ. ಶ್ರೀ ಕಮಲಾಂಬಿಕೆಯು ದ್ವಾದಶಭಿರುಪಾಸಿತೆ ಎಂಬಲ್ಲಿ ಮನ್ಮಥನಿಂದೊಡಗೂಡಿ ಹನ್ನೆರಡು ಮಂದಿ ಶ್ರೀವಿದ್ಯಾ ಉಪಾಸಕರಿಂದ ಪೂಜಿಸಲ್ಪಡುವವಳು ಎಂದಿದ್ದಾರೆ. ಅಲ್ಲದೆ ಕಾದಿ-ಹಾದಿ-ಸಾದಿ ಮಂತ್ರಸ್ವರೂಪಳಾದ ಜಗದಂಬೆಯ ಪ್ರೇಮಕ್ಕೆ ಪಾತ್ರನಾದ ಷಣ್ಮುಖನ ಜನನಿಯಲ್ಲಿ ನನ್ನ ಮನಸ್ಸು ನೆಲೆಗೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.