Sunday, 30 November 2014

ದೀಕ್ಷಿತರ ದೇವಿ ಕೃತಿಗಳಲ್ಲಿ ಭಕ್ತಿ ಮತ್ತು ಸೌಂದರ್ಯ




ದೀಕ್ಷಿತರ ದೇವೀ ಕೃತಿಗಳಲ್ಲಿ ಭಕ್ತಿ ಮತ್ತು ಸೌಂದರ್ಯ
     
ಈ ಅಂಕಣವು ಸುರಹೊನ್ನೆ.ಕಾಮ್ ನಲ್ಲಿ ಪ್ರಕಟವಾಗಿದೆ  
             ಶ್ರೀ ಮುತ್ತುಸ್ವಾಮಿ ದೀಕ್ಷಿತರು
ದೀಪಾವಳಿ ಹಬ್ಬವೆಂದರೆ ಕರ್ನಾಟಕ ಸಂಗೀತ ವಲಯದಲ್ಲಿ ಒಂದು ವಿಶೇಷ ದಿನ. ಏಕೆಂದರೆ ಈದಿನವನ್ನು ವಿಶೇಷ ವಾಗಿ ದೀಕ್ಷಿತರ ದಿನವನ್ನಾಗಿ ಆಚರಿಸಲಾಗುತ್ತದೆ. ದೀಕ್ಷಿತರು 1835ನೇ ಇಸವಿ ಅಶ್ವಯುಜ ಮಾಸದ ದೀಪಾವಳಿಯ ಮೊದಲ ದಿನವಾದ ನರಕ ಚತುರ್ದಶಿಯಂದು ದೇವಿಯ ದಿವ್ಯ ಸಾನಿಧ್ಯವನ್ನು ಸೇರಿದರು. 
    ಅಂದು ದೀಕ್ಷಿತರು ಸ್ನಾನ ಮುಗಿಸಿ ದೇವಿಗೆ ನವಾವರಣ ಪೂಜೆ ಸಲ್ಲಿಸಿ ಪುನ್ನಾಗವರಾಳಿ ರಾಗದಲ್ಲಿ ಏಹಿ ಅನ್ನಪೂರ್ಣೆ ಎಂಬ ಕೊನೆಯ ಕೃತಿಯನ್ನು ರಚಿಸಿ ಎಂದಿನಂತೆ ವೀಣೆಯಲ್ಲಿ ನುಡಿಸಿ ಹಾಡಿದರು. ಈ ಸಂದರ್ಭದಲ್ಲಿ ದೀಕ್ಷಿತರಿಗೆ ಕಾಶಿಯ ಅನ್ನಪೂರ್ಣೆಶ್ವರಿಯ ಸ್ವರೂಪ ಗೋಚರವಾದಂತಾಯಿತಂತೆ. ಆಗ ಅವರಿಗೆ ತಮ್ಮ ಅಂತ್ಯ ಸಮೀಪವಾಯಿತು ಎಂದು ಭಾಸವಾಯಿತಂತೆ. ತಕ್ಷಣ ದೀಕ್ಷಿತರು ತಮ್ಮೆಲ್ಲಾ ಶಿಷ್ಯರನ್ನೆಲ್ಲಾ ಕರೆದು ಇಂದು ಚತುರ್ದಶಿ ದೇವಿಯನ್ನು ಕುರಿತು ಹಾಡಿ ಎಂದಾಗ, ದೀಕ್ಷಿತರು ಈ ಹಿಂದೆಯೇ ರಚಿಸಿದ ಮಧುರೆಯ ಮೀನಾಕ್ಷಿಅಮ್ಮನವರ ಕುರಿತ ರಚನೆ ಮೀನಾಕ್ಷಿ ಮೇ ಮುದಂ ದೇಹಿ (ಪೂರ್ವಿಕಲ್ಯಾಣಿ ರಾಗ ದೀಕ್ಷಿತರ ಸಂಪ್ರದಾಯದ ಪ್ರಕಾರ ಗಮಕಕ್ರಿಯ ರಾಗ ಎಂದಿನಿಸುತ್ತದೆ.) ಹಾಡಲು ಆರಂಭಿಸಿದರಂತೆ. ಕೃತಿಯನ್ನು ಹಾಡುತ್ತಾ ಅನುಪಲ್ಲವಿಯ ಮೀನಲೋಚನಿ ಪಾಶಮೋಚನಿ ಎಂಬಲ್ಲಿಗೆ ಬಂದಾಗ ಅದನ್ನೇ ಪುನಃ ಪುನಃ ವೀಣೆಯಲ್ಲಿ ನುಡಿಸಿ ಶಿಷ್ಯರಿಗೂ ಆ ಸಾಹಿತ್ಯ ಭಾಗವನ್ನೇ ಮೇಲಿಂದ ಮೇಲೆ ಹಾಡುವಂತೆ ಹೇಳಿ ಕೊನೆಗೆ ಶಿವೇಪಾಹಿ... ಶಿವೇಪಾಹಿ... ಶಿವೇಪಾಹಿ... ಎಂದು ಮೂರು ಬಾರಿ ಉಚ್ಚರಿಸಿ ದೇವಿ ಸನ್ನಿಧಾನವನ್ನು ಸೇರಿದರು.
    ದೀಕ್ಷಿತರಿಗೆ ದೇವಿ ಮೇಲೆ ಅವಿಚ್ಛಿನ್ನ ಭಕ್ತಿ. ಹಾಗಾಗಿಯೇ ಅವರ ದೇವಿ ಕೃತಿಗಳಲ್ಲಿ ವಿಶೇಷವಾಗಿ ಕಾಣುವ ಭಕ್ತಿ ಹಾಗೂ ಸೌಂದರ್ಯ ಇನ್ನಾವ ವಾಗ್ಗೇಯಕಾರರಲ್ಲಿ ಕಾಣಲು ಸಾಧ್ಯವಿಲ್ಲ. ಅವರ ದೈವ ಭಕ್ತಿಯೂ ಅನನ್ಯವಾದುದು. ಅದು ಅವರ ಕೃತಿಗಳಲ್ಲಿ ಕಂಡುಬರುತ್ತದೆ. ದೀಕ್ಷಿತರ ಕೃತಿಗಳು ದೇವಾನುದೇವತೆಯರ ನಾಮರೂಪ-ಸ್ತೋತ್ರರೂಪವಾಗಿ ಇರುವಂತೆ ಭಾಸವಾಗುತ್ತದೆ. ಇದಕ್ಕೆ ಕಾರಣ ದೀಕ್ಷಿತರಿಗೆ ದೇವ ದೇವಿಯರ ಸ್ತೋತ್ರರೂಪಗಳಾದ ಲಲಿತಾಸಹಸ್ರನಾಮ, ಲಲಿತಾ ತ್ರಿಶತಿ, ಸೌಂದರ್ಯಲಹರಿ, ಆನಂದಲಹರೀ, ದೇವಿ ಖಡ್ಗಮಾಲಾ ಸ್ತೋತ್ರ ಮುಂತಾದ ಸಂಸ್ಕøತ ರಚನೆಗಳು ಕಂಠಪಾಠಸ್ಥವಾಗಿದ್ದವು ಎಂದೆನಿಸುತ್ತದೆ. ಇವುಗಳ ಪ್ರಭಾವ ಅವರ ಕೃತಿಗಳಲ್ಲಿ ಎದ್ದು ಕಾಣುತಿತ್ತು. ವಿಶೇಷವೆಂದರೆ ಇಂಥಹ ನಾಮರೂಪಗಳನ್ನು ತಮ್ಮ ಕೃತಿಯಲ್ಲಿ ಜೋಡಣೆ ಮಾಡುವಾಗೆಲ್ಲ ಎಲ್ಲೂ ಅರ್ಥ ವ್ಯತ್ಯಯವಾಗದಂತೆ, ಪ್ರಾಸಬದ್ದವಾಗಿ ಜೋಡಿಸುವುದು ದೀಕ್ಷಿತರ ನೈಪುಣ್ಯತೆಗೆ ಸಾಕ್ಷಿ. ಮತ್ತೊಂದು ವಿಶೇಷವೆಂದರೆ ದೀಕ್ಷಿತರು ಇಂಥಹ ನಾಮರೂಪಗಳನ್ನು ಪ್ರಯತ್ನಪೂರಕವಾಗಿ ಬೇಕಂತಲೇ ಹೇರಿಸಿದಂತೆ ಕಾಣುವುದೇ ಇಲ್ಲ. ಹಾಗಾಗಿಯೇ ಸಹಜವಾಗಿ ಇಂಥಹ ವಿಶೇಷಣಗಳು ಅವರ ಕೃತಿಗಳ ಸೌಂದರ್ಯವನ್ನು ಇಮ್ಮಡಿ ಗೊಳಿಸಿವೆ.

ಇವುಗಳಿಗೆ ಕೆಲವೊಂದು ನಿದರ್ಶನ;                                                                        
ಲಲಿತಾ ಸಹಸ್ರನಾಮದ ಒಂದನೇ ಶ್ಲೋಕ:
 ||ಶ್ರೀಮಾತಾ ಶ್ರೀಮಹಾರಾಜ್ಞಿ ಶ್ರೀಮತ್ಸಿಂಹಾಸನೇಶ್ವರೀ||
||ಚಿದಗ್ನಿಕುಂಡಸಂಭೂತಾ ದೇವಕಾರ್ಯ ಸಮುದ್ಯತಾ||
ದೀಕ್ಷಿತರು ಈ ಲಲಿತಾಸಹಸ್ರನಾಮದ ಮೊದಲ ಸ್ತೋತ್ರದಿಂದ ಚಿದಗ್ನಿಕುಂಡ ಸಂಭೂತಾ ಎಂಬ ಪದವನ್ನು ಆಯ್ಕೆ ಮಾಡಿ ಶಿವಕಾಮೇಶ್ವರಿ ಚಿಂತಯೇಹಂ ಎಂಬ ತಮ್ಮ ಕೃತಿಯ ಚರಣದಲ್ಲಿ ಜೋಡಿಸಿದ್ದಾರೆ.
ಶಿವಕಾಮೇಶ್ವರಿ ಚಿಂತಯೇಹಂ ಕೃತಿಯ ಚರಣದ ಸಾಲು.
ಶಾಂತಕಲ್ಯಾಣ ಗುಣಶಾಲಿನೀಂ ಶಾಂತ್ಯಾತೀತ ಕಲಾಸ್ವರೂಪಿಣೀಂ |
ಮಾಧುರ್ಯ ಗಾನಾಮೃತ ಮೋದಿನೀಂ ಮದಾಲಸ ಹಂಸೋಲ್ಲಾಸಿನೀಂ |
ಚಿದಂಬರ ಪುರೀಶ್ವರೀಂ ಚಿದಗ್ನಿಕುಂಡ ಸಂಭೂತ ಸಕಲೇಶ್ವರೀಂ ||                  
ಇನ್ನೂ ಹಲವು ಕೃತಿಗಳ ಉದಾಹರಣೆ:                                                        
1 ಚಿದಗ್ನಿಕುಂಡಸಂಭೂತ  - ಲಲಿತಾಸಹಸ್ರನಾಮದ 1ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.
 ದೀಕ್ಷಿತರ ಕೃತಿ: ಶಿವಕಾಮೇಶ್ವರೀಂ ಚಿಂತಯೇಹಂ (ರಾಗ:ಕಲ್ಯಾಣಿ ; ತಾಳ:ಆದಿತಾಳ) ಎಂಬ ಕೃತಿಯ ಚರಣದ ಕೊನೆಯ ಸಾಲಿನಲ್ಲಿ ಈ ಲಲಿತಾ ಸಹಸ್ರನಾಮದ ನಾಮರೂಪವನ್ನು ಅಳವಡಿಸಿಕೊಂಡಿದ್ದಾರೆ.

2 ಸದಾಚಾರ ಪ್ರವರ್ತಿಕಾಯೈ - ಲಲಿತಾಸಹಸ್ರನಾಮದ 78ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.    ದೀಕ್ಷಿತರಕೃತಿ: ಕಾದಂಬರೀ ಪ್ರಿಯಾಯೈ ಕದಂಬಕಾನನಾಯೈ (ರಾಗ:ಮೋಹನ ; ತಾಳ:ಮಿಶ್ರಛಾಪುತಾಳ) ಎಂಬ ಕೃತಿಯ ಚರಣದ ಮೊದಲಿಗೆ ಈ ಲಲಿತಾಸಹಸ್ರನಾಮದ ನಾಮರೂಪವನ್ನು ಜೋಡಿಸಿಕೊಂಡಿದ್ದಾರೆ.

3 ಓಡ್ಯಾಣ ಪೀಠಸ್ಥಿತಾ - ಲಲಿತಾಸಹಸ್ರನಾಮದ 83ನೇ ಶ್ಲೋಕದ ಪದವನನ್ನು ಹೋಲುತ್ತದೆ.
ದೀಕ್ಷಿತರ ಕೃತಿ: ಶ್ರೀಮಧುರಾಪುರಿ ವಿಹಾರಿಣೀ (ರಾಗ:ಬಿಲಹರಿ ; ತಾಳ:ರೂಪಕತಾಳ) ಎಂಬ ಕೃತಿಯ ಚರಣದ ಎರಡನೇ ಸಾಲಿನಲ್ಲಿ ಈ ನಾಮರೂಪವನ್ನು ಜೋಡಿಸಿಕೊಂಡಿದ್ದಾರೆ.
4 ಪಶುಪಾಶ ವಿಮೋಚಿತೇ - ಲಲಿತಾಸಹಸ್ರನಾಮದ 78ನೇ ಶ್ಲೋಕದ ಪದವನ್ನು ಹೋಲುತ್ತದೆ.
 ದೀಕ್ಷಿತರ ಕೃತಿ: ಸರಸಿಜನಾಭ ಸೋದರಿ ಶಂಕರಿ ಪಾಹಿಮಾಂ (ರಾಗ:ನಾಗಗಾಂಧಾರಿ ; ತಾಳ:ರೂಪಕತಾಳ) ಎಂಬ ಕೃತಿಯ ಚರಣದ ಮೊದಲನೇ ಸಾಲಿನಲ್ಲಿ ಈ ಪದವನ್ನು ಜೋಡಿಸಿಕೊಂಡಿದ್ದಾರೆ.
5 ಕಾದಂಬರಿ ಪ್ರಿಯಾ - ಲಲಿತಾಸಹಸ್ರನಾಮದ 74ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.
 ದೀಕ್ಷಿತರ ಕೃತಿ: ಕಾದಂಬರಿ ಪ್ರಿಯಾಯೈ ಕದಂಬಕಾನನಾಯೈ (ರಾಗ:ಮೋಹನ ; ತಾಳ:ಮಿಶ್ರಛಾಪುತಾಳ) ಎಂಬ ಕೃತಿಯ ಪಲ್ಲವಿ ಶುರುವಾಗುವುದೇ ಈ ಪದದಿಂದ
6 ಪಂಚಾಶತ್ಪೀಠ ರೂಪಿಣೀ - ಲಲಿತಾಸಹಸ್ರನಾಮದ 156ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.
 ದೀಕ್ಷಿತರ ಕೃತಿ: ಪಂಚಾಶತ್ಪೀಠ ರೂಪಿಣೀ ಮಾಂಪಾಹಿ (ರಾಗ:ದೇವಗಾಂಧಾರ ; ತಾಳ ಆದಿತಾಳ) ಎಂಬ ಕೃತಿಯ ಪಲ್ಲವಿ ಆರಂಭಗೊಳ್ಳುವುದೇ ಈ ಪದದಿಂದ.
7 ಜ್ಞಾನಜ್ಞೇಯ ಸ್ವರೂಪಿಣೀ - ಲಲಿತಾಸಹಸ್ರನಾಮದ 179ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.
 ದೀಕ್ಷಿತರ ಕೃತಿ: ಜ್ಞಾನಾಂಬಿಕೇ ಪಾಲಯಮಾಂಶ್ರೀ ಜ್ಞಾತೃ ಜ್ಞಾನಜ್ಞೇಯ ಸ್ವರೂಪಿಣೀ (ರಾಗ:ಸೇನಾಗ್ರಣಿ ; ತಾಳ:ತ್ರಿಶ್ಯಏಕ) ಎಂಬ ಕೃತಿಯ ಪಲ್ಲವಿಯ ಕೊನೆಗೆ ಈ ಪದವನ್ನು ಜೋಡಿಸಿದ್ದಾರೆ.
 8 ಕದಂಬ ವನವಾಸಿನಿ - ಲಲಿತಾಸಹಸ್ರನಾಮದ 23ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.
ದೀಕ್ಷಿತರ ಕೃತಿ: ಮಧುರಾಂಬಿಕಾಯಾಂ ಸದಾ ಭಕ್ತಿಂ ಕರೋಮಿ ಶ್ರೀ – (ರಾಗ:ದೇಶೀಸಿಂಹಾರವ ; ತಾಳ:ರೂಪಕತಾಳ) ಎಂಬ ಕೃತಿಯ ಅನುಪಲ್ಲವಿಯಲ್ಲಿ ಜೋಡಿಸಿದ್ದಾರೆ.
 ದೀಕ್ಷಿತರ ಕೃತಿ: ಮೀನಾಕ್ಷಿ ಮೇಮುದಂ ದೇಹಿ - (ರಾಗ:ಗಮಕಕ್ರಿಯೆ ; ತಾಳ:ಆದಿತಾಳ) ಎಂಬ ಕೃತಿಯ ಅನುಪಲ್ಲವಿಯಲ್ಲಿ ಈ ಪದವನ್ನು ಜೋಡಣೆಮಾಡಲಾಗಿದೆ.
9 ನಾಮರೂಪ ವಿವರ್ಜಿತಾ - ಲಲಿತಾಸಹಸ್ರನಾಮದ 70ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.
ದೀಕ್ಷಿತರ ಕೃತಿ: ಶ್ರೀಮಧುರಾಂಬಿಕಯಾ ರಕ್ಷಿತೋಹಂ – (ರಾಗ:ಅಠಾಣ ; ತಾಳ:ಛಾಪುತಾಳ) ಎಂಬ ಕೃತಿಯ ಚರಣದ ಮೊದಲಿಗೆ ಈ ಪದವನ್ನು ಬಳಸಿಕೊಳ್ಳಲಾಗಿದೆ.
10 ರಣತ್ಕಿಂಕಿಣಿ ಮೇಖಲಾ - ಲಲಿತಾಸಹಸ್ರನಾಮದ 71ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.
 ದೀಕ್ಷಿತರ ಕೃತಿ:  ಮಾತಂಗಿ ಶ್ರೀ ರಾಜರಾಜೇಶ್ವರಿ ಮಾಮವ – (ರಾಗ:ರಮಾಮನೋಹರಿ – ತಾಳ:ರೂಪಕತಾಳ) ಎಂಬ ಕೃತಿಯ ಚರಣದಲ್ಲಿ ಈ ನಾಮರೂಪವನ್ನು ಬಳಸಿಕೊಳ್ಳಲಾಗಿದೆ.
 11 ಕುಲೋತ್ತೀರ್ಣ - ಲಲಿತಾಸಹಸ್ರನಾಮದ 139ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.
ದೀಕ್ಷಿತರ ಕೃತಿ: ಕಾಮಾಕ್ಷೀಂ ಕಲ್ಯಾಣೀಂ ಭಜೇಹಂ – (ರಾಗ:ಕಲ್ಯಾಣಿ ; ತಾಳ:ರೂಪಕತಾಳ) ಎಂಬ ಕೃತಿಯ ಚರಣದಲ್ಲಿ ಬಳಸಿಕೊಳ್ಳಲಾಗಿದೆ.
ದೀಕ್ಷಿತರ ಕೃತಿ:  ಪಾಹಿಮಾಂ ಪಾರ್ವತಿ ಪರಮೇಶ್ವರಿ – (ರಾಗ:ಮೋಹನ ; ತಾಳ:ರೂಪಕತಾಳ) ಎಂಬ ಕೃತಿಯ ಚರಣದ ಕೊನೆಯ ಸಾಲಿನಲ್ಲಿ ಈ ನಾಮರೂಪವನ್ನು ಬಳಸಿಕೊಳ್ಳಲಾಗಿದೆ.
 12 ಕರ್ಪೂರ ವೀಟಿಕಾಯೈ - ಲಲಿತಾಸಹಸ್ರನಾಮದ 10ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.
ದೀಕ್ಷಿತರ ಕೃತಿ: ಕಮಲಾಂಬಿಕಾಯೈ ಕನಕಾಂಶುಕಾಯೈ ಕರ್ಪೂರವೀಟಿಕಾಯೈ ನಮಸ್ತೇ – (ರಾಗ:ಕಾಂಭೋಜಿ ; ತಾಳ:ಅಟ್ಟ) ಎಂಬ ಕೃತಿಯ ಪಲ್ಲವಿಯಲ್ಲಿ ಈ ನಾಮರೂಪವನ್ನು ಬಳಸಿಕೊಳ್ಳಲಾಗಿದೆ.
13 ಕರಾಂಗುಲಿ ನಖೋತ್ಪನ್ನ ನಾರಾಯಣ ದಶಾಕೃತಿ - ಲಲಿತಾಸಹಸ್ರನಾಮದ 32ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.
ದೀಕ್ಷಿತರು ಈ ಪದವನ್ನು ಕೃತಿಗೆ ಬೇಕಾಗಿ ಅರ್ಥವ್ಯತ್ಯಾಸವಾಗದಂತೆ ಕರಾಂಗುಲಿ ನಖೋದಯ ವಿಷ್ಣುದಶಾವತಾರೇ ಎಂದು ಬದಲಾಯಿಸಿಕೊಂಡಿದ್ದಾರೆ.
ದೀಕ್ಷಿತರ ಕೃತಿ: ಶ್ರೀ ಕಮಲಾಂಬಿಕೇ ಆವಾವ ಶಿವೇ – (ರಾಗ:ಘಂಟಾ ; ತಾಳ:ಆದಿತಾಳ) ಎಂಬ ಕೃತಿಯ ಚರಣದಲ್ಲಿ ಈ ನಾಮರೂಪವನ್ನು ಬಳಸಿಕೊಳ್ಳಲಾಗಿದೆ.
 ಇದೇ ರೀತಿ ಇನ್ನೂ ಹಲವಾರು ಲಲಿತಾಸಹಸ್ರನಾಮದ ಪದಗಳನ್ನು ತಮ್ಮ ಕೃತಿಗಳಲ್ಲಿ ಬಳಸಿಕೊಂಡಿದ್ದಾರೆ.
 14 ಕಲ್ಯಾಣ ಗುಣಶಾಲಿನೀ - ಲಲಿತಾತ್ರಿಶತೀಸ್ತೋತ್ರದ 1ನೇ ಶ್ಲೋಕದಿಂದ ಅಯ್ದುಕೊಂಡಿದ್ದಾರೆ.
 ದೀಕ್ಷಿತರ ಕೃತಿ: ಕಾಮಾಕ್ಷಿ ಕಾಮಕೋಟಿ ಪೀಠವಾಸಿನಿ ಮಾಮವ – (ರಾಗ:ಸುಮದ್ಯುತಿ(ಸಿಂಹೇಂದ್ರಮಧ್ಯಮ) ; ತಾಳ:ರೂಪಕ) ಎಂಬ ಕೃತಿಯ ಚರಣದ ಕೊನೆಯ ಪದವಾಗಿ ಬಳಸಿಕೊಂಡಿದ್ದಾರೆ.
 15 ಕಂದರ್ಪಜನಕಾಪಾಂಗ ವೀಕ್ಷಣಾ - ಲಲಿತಾತ್ರಿಶತೀಸ್ತೋತ್ರದ 3ನೇ ಶ್ಲೋಕದಿಂದ ಆಯ್ದು ಕೊಳ್ಳಲಾಗಿದೆ.
ದೀಕ್ಷಿತರ ಕೃತಿ: ಪರ್ವತ ರಾಜಕುಮಾರಿ ಶ್ರೀ ಪಾರ್ವತಿ ಪಾಹಿಮಾಂ – (ರಾಗ:ಶ್ರೀರಂಜನಿ ; ತಾಳ:ಆದಿತಾಳ) ಎಂಬ ಕೃತಿಯ ಚರಣದಲ್ಲಿ ಈ ಪದವನ್ನು ಬಳಸಿಕೊಳ್ಳಲಾಗಿದೆ.
 16 ಲಕ್ಷಕೋಟ್ಯಂಡ ನಾಯಿಕಾ - ಲಲಿತಾತ್ರಿಶತೀಸ್ತೋತ್ರದ 15ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.
ದೀಕ್ಷಿತರ ಕೃತಿ: ಲಲಿತಾಂಬಿಕಾಯೈ ಲಕ್ಷಕೋಟ್ಯಂಡ ನಾಯಿಕಾಯೈ – (ರಾಗ:ಭೈರವಿ ; ತಾಳ:ಛಾಪುತಾಳ) ಎಂಬ ಕೃತಿಯ ಪಲ್ಲವಿಯಲ್ಲಿ ಈ ನಾಮರೂಪವನ್ನು ಬಳಸಿಕೊಳ್ಳಲಾಗಿದೆ.
 ಇದೇ ರೀತಿ ಸೌಂದರ್ಯಲಹರೀ ಸ್ತೋತ್ರದ ಪದಗಳನ್ನು ನೋಡೋಣ.
17 ಪ್ರಣತಜನಸೌಭಾಗ್ಯಜನನೀ - ಸೌಂದರ್ಯಲಹರೀ ಸ್ತೋತ್ರದ 5ನೇ ಸ್ತೋತ್ರದ ಪದ (ದೀಕ್ಷಿತರು ಪ್ರಣತಜನ ಸೌಭಾಗ್ಯದಾಯಿನೀಂ ಎಂದು ಬದಲಾಯಿಸಿಕೊಂಡಿದ್ದಾರೆ)
ದೀಕ್ಷಿತರ ಕೃತಿ: ಮಹಿಷಾಸುರ ಮರ್ದಿನೀಂ ನಮಾಮಿ – (ರಾಗ:ನಾರಾಯಣಿ ; ತಾಳ:ಛಾಪುತಾಳ) ಎಂಬ ಕೃತಿಯ ಅನುಪಲ್ಲವಿಯಲ್ಲಿ ಬಳಸಿಕೊಂಡಿದ್ದಾರೆ.
 18 ಸುಧಾಸಿಂಧೋರ್ಮಧ್ಯೇ - ಸೌಂದರ್ಯಲಹರೀ ಸ್ತೋತ್ರದ 8ನೇ ಸ್ತೋತ್ರದ ಪದ (ದೀಕ್ಷಿತರು ಸುಧಾಸಿಂಧುಮಧ್ಯೇ ಎಂದು ಬದಲಾಯಿಸಿದ್ದಾರೆ)
 ದೀಕ್ಷಿತರ ಕೃತಿ: ಗೌರೀ ಗಿರಿರಾಜಕುಮಾರಿ – (ರಾಗ:ಗೌರಿ ; ತಾಳ:ರೂಪಕತಾಳ) ಎಂಬ ಕೃತಿಯ ಚರಣದಲ್ಲಿ ಈ ಪದವನ್ನು ಬಳಸಿಕೊಂಡಿದ್ದಾರೆ.
 19 ಶಿವಾಕಾರ ಮಂಚೇ - ಸೌಂದರ್ಯಲಹರೀಸ್ತೋತ್ರದ 8ನೇ ಶ್ಲೋಕದಿಂದ ಆಯ್ದುಕೊಳ್ಳಲಾಗಿದೆ.
ದೀಕ್ಷಿತರ ಕೃತಿ: ಗೌರಿ ಗಿರಿರಾಜಕುಮಾರಿ – (ರಾಗ:ಗೌರಿ ; ತಾಳ:ರೂಪಕತಾಳ) ಎಂಬ ಕೃತಿಯ ಚರಣದಲ್ಲಿ ಈ ನಾಮರೂಪವನ್ನು ಬಳಸಿಕೊಳ್ಳಲಾಗಿದೆ.
ದೀಕ್ಷಿತರ ಕೃತಿ: ಈಶಾನಾದಿ ಶಿವಾಕಾರ ಮಂಚೇ – (ರಾಗ:ಶಹನ : ತಾಳ:ರೂಪಕತಾಳ) ಎಂಬ ಕೃತಿಯ ಪಲ್ಲವಿಯಲ್ಲಿ ಈ ಪದವನ್ನು ಬಳಸಿಕೊಂಡಿದ್ದಾರೆ.
ದೀಕ್ಷಿತರ ಕೃತಿ: ಶ್ರೀ ಕಮಲಾಂಬಾ ಜಯತೀ – (ರಾಗ:ಆಹಿರಿ ; ತಾಳ: ತ್ರಿಶ್ಯ ಏಕತಾಳ) ಎಂಬ ಕೃತಿಯ ಪಲ್ಲವಿಯಲ್ಲಿ ಈ ಪದವನ್ನು ಬಳಸಿಕೊಳ್ಳಲಾಗಿದೆ.
20 ಜಟಾಜೂಟಮುಕುಟಾಂ - ಸೌಂದರ್ಯಲಹರೀಸ್ತೋತ್ರದ 15ನೇ ಶ್ಲೋಕದಿಂದ ಬಳಸಿಕೊಂಡಿದ್ದಾರೆ.
ದೀಕ್ಷಿತರ ಕೃತಿ: ವೀಣಾಪುಸ್ತಕ ಧಾರಿಣೀಮಾಶ್ರಯೇ – (ರಾಗ:ವೇಗವಾಹಿನಿ(ಚಕ್ರವಾಕ) ; ತಾಳ:ಖಂಡಜಾತಿಏಕತಾಳ) ಎಂಬ ಕೃತಿಯ ಅನುಪಲ್ಲವಿಯಲ್ಲಿ ಈ ನಾಮರೂಪವನ್ನು ಬಳಸಿಕೊಂಡಿದ್ದಾರೆ. ಇನ್ನೂ ಹಲವಾರು ಇಂಥದೇ ಸ್ತೋತ್ರದ ನಾಮರೂಪಗಳನ್ನು ಕೃತಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಇಲ್ಲಿ ಕೇವಲ 20 ಪದಗಳನ್ನು ಮಾತ್ರ ಪರಿಗಣಿಸಿಕೊಳ್ಳಲಾಗಿದೆ.
       

    ದೀಕ್ಷಿತರು ತಮ್ಮ ತಂದೆ ತಾಯಿ ಕಾಲವಾದಾಗ ಮನಃಶಾಂತಿಗೋಸ್ಕರ ತೀರ್ಥಯಾತ್ರೆ ಹೊರಟರು. ಆ ಸಂದರ್ಭದಲ್ಲಿ ಅವರು ಹಲವಾರು ದೇವಾಲಯಗಳನ್ನು ಸಂದರ್ಶಿಸಿ ಅಲ್ಲಿಯ ದೇವ ದೇವಿಯರ ಕುರಿತು ಕೃತಿ ರಚಿಸಿದ್ದಾರೆ. ಅವರು ಯಾವ ಕ್ಷೇತ್ರಕ್ಕೇ ಹೋಗಲಿ ಅಲ್ಲಿಯ ಸ್ಥಳ ಮಹಿಮೆ ಅರಿತು ಅಲ್ಲಿಯ ದೇವತೆಯರ ಮೇಲೆ ಕೃತಿ ರಚಿಸುವುದು ಅವರ ಪರಿಪಾಠ ವೆಂದು ಕಾಣಿಸುತ್ತದೆ. ಏನೇ ಆಗಲಿ ದೀಕ್ಷಿತರಿಗೆ ಸರಸ್ವತಿಯ ಸಂಪೂರ್ಣ ಅನುಗ್ರಹ ಆಗಿದ್ದಿರಲೇಬೇಕು, ಏಕೆಂದರೆ ದೇವರ ನ್ನು ಕಂಡ ತಕ್ಷಣ ಕೃತಿ ರಚನೆಯಾಗಬೇಕೆಂದರೆ ಸುಲಭ ಸಾಧ್ಯವೇ? ಕೃತಿಯಲ್ಲಿನ ಭಕ್ತಿ, ಸೌಂದರ್ಯ, ಧ್ಯಾನ, ವೈರಾಗ್ಯ, ದೈನ್ಯತೆ, ಸಂತಸ, ಆತ್ಮತೃಪ್ತಿ ಇವುಗಳನ್ನೆಲ್ಲಾ ಕಂಡಾಗ ಅವರ ದೈವಿಕಪ್ರೀತಿ ಎಂಥದ್ದಿರಬಹುದು ಎಂಬ ಅರಿವಾಗುತ್ತದೆ. ಇವಿಷ್ಟೇ ಅಲ್ಲದೆ ಕೃತಿಯಲ್ಲಿ ಮೈದುಂಬಿ ಹರಿಯುವ ರಾಗವನ್ನು ಕಂಡಾಗ ಸಾಕ್ಷಾತ್ ರಾಗದೇವತೆಯೇ ನಾಟ್ಯವಾಡುತ್ತಿದ್ದಾಳೆ ಎಂದೆನಿಸುತ್ತದೆ.
ದೀಕ್ಷಿತರ ಕ್ಷೇತ್ರಕೃತಿಗಳಲ್ಲಿ ದೇವೀಕೃತಿಗಳು ಹೀಗಿವೆ:

1
ಜಂಬುಕೇಶ್ವರಂನ ಅಖಿಲಾಂಡೇಶ್ವರಿ ದೇವಿ ಕುರಿತು
  2 ಕೃತಿಗಳು
2
ನಾಗಪಟ್ಟಣದ ನೀಲಯತಾಕ್ಷಿ ಅಮ್ಮನವರನ್ನು ಕುರಿತು
   1 ಕೃತಿ
3
ಮಾಯಾವರಂನ ಅಭಯಾಂಬ ದೇವಿಯನ್ನು ಕುರಿತು
 11 ಕೃತಿಗಳು
4
ವೈದೀಶ್ವರನ್ ಕೋಯಿಲ್‍ನ ಬಾಲಾಂಬಿಕಾ ದೇವಿಯನ್ನು ಕುರಿತು
 5 ಕೃತಿಗಳು
5
ತಂಜಾವೂರಿನ ಬೃಹದೀಶ್ವರೀ ದೇವಿಯನ್ನು ಕುರಿತು
  8 ಕೃತಿಗಳು
6
ತಿರುವೈಯಾರು ಧರ್ಮಸಂವರ್ಧನೀ ಅಮ್ಮನವರನ್ನು ಕುರಿತು
  2 ಕೃತಿಗಳು
7
ಕಾಂಚೀಪುರಂನ ಏಕಾಮ್ರೇಶ್ವರೀ ಅಮ್ಮನವರನ್ನು(ಕಾಮಾಕ್ಷಿ) ಕುರಿತು
 12 ಕೃತಿಗಳು
8
ಕಾಶಿ ವಿಶಾಲಾಕ್ಷಿ ಅಮ್ಮನವರನ್ನು ಕುರಿತು
  4 ಕೃತಿಗಳು
9
ತಿರುವಾರೂರಿನ ಕಮಲಾಂಬಾ ದೇವಿಯನ್ನು ಕುರಿತು
 12 ಕೃತಿಗಳು
10
ತಿರುವಾರೂರಿನ ನೀಲೋತ್ಪಲಾಂಬಾ ದೇವಿಯನ್ನು ಕುರಿತು
  9 ಕೃತಿಗಳು
11
ಮಧುರೆಯ ಮೀನಾಕ್ಷಿ ಅಮ್ಮನವರನ್ನು ಕುರಿತು
 17 ಕೃತಿಗಳು
12
ಮಧ್ಯಾರ್ಜುನದ ಬೃಹತ್ಕುಚಾಂಬಾ ದೇವಿಯನ್ನು ಕುರಿತು
  1 ಕೃತಿ
13
ವಿಜಯಪುರಂನ ರೇಣುಕಾದೇವಿಯ ಕುರಿತು
  1 ಕೃತಿ
14
ಶಂಕರನಾರಾಯಣ ಕೋಯಿಲ್‍ನ ಶೈಲರಾಜಕುಮಾರಿ ದೇವಿಯನ್ನು ಕುರಿತು
  1 ಕೃತಿ

15
ಚಿದಂಬರಂನ ಶಿವಕಾಮೇಶ್ವರಿ ಅಮ್ಮನವರನ್ನು ಕುರಿತು
  2 ಕೃತಿಗಳು
16
ತಿರುನಲ್‍ವೇಲಿ ಪಾರ್ವತಿ ದೇವಿಯನ್ನು ಕುರಿತು
  3 ಕೃತಿಗಳು
17
ಕುಂಭಕೋಣಂನ ಮಂಗಳಾಂಬಿಕಾ ದೇವಿಯನ್ನು ಕುರಿತು
  4 ಕೃತಿಗಳು
18
ಮನ್ನಾರ್‍ಗುಡಿಯ ರಾಜರಾಜೇಶ್ವರಿ ಅಮ್ಮನವರನ್ನು ಕುರಿತು
  2 ಕೃತಿಗಳು
19
ಶ್ರೀರಂಗಂನ ರಂಗಧಾಮೇಶ್ವರಿ(ಲಕ್ಷ್ಮಿ) ಅಮ್ಮನವರನ್ನು ಕುರಿತು
  1 ಕೃತಿ
    
ಇವಿಷ್ಟೇ ಅಲ್ಲದೆ ಲಲಿತಾಂಬಿಕಾದೇವಿಯ ಕುರಿತು 3ಕೃತಿಗಳು, ಗಾಯತ್ರಿದೇವಿಯ ಕುರಿತು 1ಕೃತಿ, ಶ್ರೀಮಹಾ ತ್ರಿಪುರ ಸುಂದರಿ ದೇವಿಯ ಕುರಿತು 4ಕೃತಿಗಳು, ಮಹಿಷಾಸುರಮರ್ದಿನಿಯ ಕುರಿತು 2ಕೃತಿಗಳು, ಲಕ್ಷ್ಮಿದೇವಿಯ ಕುರಿತು 9ಕೃತಿಗಳು, ಸರಸ್ವತಿ ದೇವಿಯ ಕುರಿತು 9ಕೃತಿಗಳು, ಗಂಗಾದೇವಿಯ ಕುರಿತು 1ಕೃತಿ ಹೀಗೆ ದೀಕ್ಷಿತರು ದೇವಿಯ ಕುರಿತು ರಚಿಸಿದ ಕೃತಿಗಳು 160ಕ್ಕೂ ಮಿಗಿಲಾಗಿ ಇದೆ.
    ದೀಕ್ಷಿತರು ಸಮುದಾಯ ಕೃತಿಗಳನ್ನು ರಚಿಸುವುದರಲ್ಲಿಯೂ ನಿಪುಣರು. (ಸಮುದಾಯ ಕೃತಿಗಳು ಅಂದರೆ ವಾಗ್ಗೇಯ ಕಾರರು ತಮ್ಮ ಕ್ಷೇತ್ರ ಯಾತ್ರೆಯ ಸಂದರ್ಭ ಹಲವು ಆರಾಧ್ಯ ದೇವರನ್ನು ಕುರಿತು ಎರಡು ಅಥವಾ ಮೂರಕ್ಕಿಂತ ಹೆಚ್ಚು ಕೃತಿಗಳನ್ನು ಅಂದರೆ ಸುಮಾರು ಎಂಟು, ಒಂಭತ್ತು ಅಥವಾ ಅದಕ್ಕಿಂತ ಹೆಚ್ಚು ಕೃತಿಗಳನ್ನು ಒಂದೇ ದೇವರ ಕುರಿತು ರಚಿಸಿದರೆ ಅಂಥಹ ಗುಚ್ಚವು ಸಮುದಾಯ ಕೃತಿಗಳು ಎನಿಸುತ್ತದೆ.) ದೀಕ್ಷಿತರು ಈ ರೀತಿ ನಾಲ್ಕು ದೇವಿ ಕೃತಿಗಳನ್ನು ರಚಿಸಿದ್ದಾರೆ. ಅವು ಇಂತಿವೆ.
ಕಮಲಾಂಬಾ ನವಾವರಣ ಕೃತಿಗಳು  - ಒಟ್ಟು 11 ಕೃತಿಗಳು
ಅಭಯಾಂಬಾ ನವಾವರಣ ಕೃತಿಗಳು – ಒಟ್ಟು 9 ಕೃತಿಗಳು
ನೀಲೋತ್ಪಲಾಂಬಾ ವಿಭಕ್ತಿ ಕೃತಿಗಳು – ಒಟ್ಟು 8 ಕೃತಿಗಳು
ಮಧುರಾಂಬಾ ವಿಭಕ್ತಿ ಕೃತಿಗಳು    - ಒಟ್ಟು 9 ಕೃತಿಗಳು
     

    ಇವುಗಳಲ್ಲಿ ಬಹಳ ಪ್ರಸಿದ್ಧಿ ಹೊಂದಿದವು ಕಮಲಾಂಬಾ ನವಾವರಣ ಕೃತಿಗಳು. ಇಲ್ಲಿಯ ರಾಗಭಾವ, ಸಾಹಿತ್ಯ, ರಚನಾ ಕೌಶಲ, ತಾಳ, ಭಕ್ತಿಯ ಪರಾಕಾಷ್ಠೆ ಮುಂತಾದವುಗಳಿಂದ ದೀಕ್ಷಿತರ ಉತ್ತಮ ರಚನೆಗಳಲ್ಲಿಯೇ ಅಗ್ರಪಂಕ್ತಿಯಲ್ಲಿರುವ ಕೃತಿಗಳೆಂದೆನಿಸಿವೆ. ದೀಕ್ಷಿತರು ಶ್ರೀವಿದ್ಯಾ ಉಪಾಸಕರೂ ಹಾಗೂ ಶ್ರೀಚಕ್ರ ಆರಾಧಕರೂ ಆಗಿದ್ದರು. ಅದರ ಪ್ರಭಾವ ಈ ಕೃತಿ ಯಲ್ಲಿ ಕಂಡುಬರುತ್ತದೆ. ಇಲ್ಲಿ ತಿರುವಾರೂರಿನ ತ್ಯಾಗರಾಜ ಸ್ವಾಮಿಯ(ಈಶ್ವರ) ಪತ್ನಿ ಕಮಲಾಂಬಿಕಾ ದೇವಿಯನ್ನು(ಪಾರ್ವತಿ) ಶ್ರೀಚಕ್ರ ಸ್ವಾಮಿನಿಯಾದ ಶ್ರೀಲಲಿತಾಮಹಾತ್ರಿಪುರಸುಂದರಿಯ ರೂಪದಲ್ಲಿ ಸ್ತುತಿಸಿದ್ದಾರೆ. ಶ್ರೀಚಕ್ರದಲ್ಲಿ ನವಾವರಣ ಚಕ್ರಗಳೆಂಬ ಒಂಭತ್ತು ಚಕ್ರಗಳಿದ್ದು, ಪ್ರಧಾನ ಶಕ್ತಿಯಾದ ಮಧ್ಯದ ಬಿಂದುವಿನಲ್ಲಿ ನೆಲೆಸಿರುವ ಜಗನ್ಮಾತೆಯ ದರ್ಶನ ಭಾಗ್ಯ ಲಭಿಸಬೇ ಕಾದರೆ ಉಳಿದ ಎಂಟು ಚಕ್ರವನ್ನು ಆರಾಧಿಸಿಯೇ ಮುಂದೆ ಹೋಗಬೇಕಾಗುತ್ತದೆ. ಆ ಒಂದೊಂದು ಚಕ್ರಕ್ಕೂ ಒಂದೊಂದು ಹೆಸರಿದೆ, ಆ ಚಕ್ರಕ್ಕೂ ಒಬ್ಬೊಬ್ಬ ಅಧಿದೇವತೆಗಳಿದ್ದಾರೆ. ದೀಕ್ಷಿತರು ಈ ನವಾವರಣ ಚಕ್ರದ ಪೂಜಾವಿಧಿಯನ್ನು ಯಂತ್ರ ಮಂತ್ರ ತಂತ್ರಶಾಸ್ತ್ರಗಳಿಗನುಸಾರವಾಗಿ ಸೊಗಸಾಗಿ ಕೃತಿಯಲ್ಲಿ ವಿವರಿಸಿದ್ದಾರೆ.
     ರಚನೆಯಲ್ಲಿ ಇವು ಕಬ್ಬಿಣದ ಕಡಲೆಯೇ ಸರಿ. ಈ ಕೃತಿಗಳ ಕಲಿಕೆಗೆ ವಿಶೇಷ ಅಧ್ಯಯನವನ್ನೇ ಮಾಡಬೇಕಾಗುತ್ತದೆ. ಈ ಕೃತಿಗಳನ್ನು ನವರಾತ್ರಿಯ ಸಮಯದಲ್ಲಿ ಹಾಡುವ ಕ್ರಮವಿದೆ. ಈ ಕೃತಿಯಲ್ಲಿ ಗಣಪತಿ ಮತ್ತು ಸುಬ್ರಹ್ಮಣ್ಯನ ಕುರಿತು ಎರಡು ಕೃತಿಗಳು ಸೇರಿ ಒಟ್ಟು ಹದಿಮೂರು ಕೃತಿಗಳಿವೆ. ನವರಾತ್ರಿಯ ಪಾಡ್ಯದ ಹಿಂದಿನ ದಿನ ಅಂದರೆ ಮಹಾಲಯ ಅಮಾವಾಸ್ಯೆಯಂದು ಗಣಪತಿ ಮತ್ತು ಸುಬ್ರಹ್ಮಣ್ಯನ ಎರಡು ಕೃತಿಗಳನ್ನು ಹಾಡಬೇಕು. ಪಾಡ್ಯದಂದು ಅಂದರೆ ನವರಾತ್ರಾ ಆರಂಭದ ದಿನ ಕಮಲಾಂಬಾ ದೇವಿಯ ಒಂದು ಧ್ಯಾನ ಕೃತಿಯನ್ನು ಮತ್ತು ಒಂದನೇ ನವಾವರಣ ಕೃತಿಯನ್ನು ಹಾಡಬೇಕು. ಎರಡನೇ, ಮೂರನೇ ಹಾಗೂ ಉಳಿದ ನವಾವರಣ ಕೃತಿಗಳನ್ನು ನಂತರದ ದಿನಗಳಲ್ಲಿ ಆಯಾ ದಿನಗಳಿಗೆ ಸರಿಯಾಗಿ ಹಾಡುತ್ತಾ ಬಂದು. ಮಹಾನವಮಿಯಂದು ಒಂಭತ್ತನೇ ನವಾವರಣ ಕೃತಿಯನ್ನು ಹಾಡಿಮುಗಿಸಿದ ನಂತರ  ವಿಜಯ ದಶಮಿಯಂದು ಮಂಗಳ ಕೃತಿಯನ್ನು ಹಾಡುವುದು ಸಂಪ್ರದಾಯ.
    

      ದೀಕ್ಷಿತರ ದೇವಿಕೃತಿಗಳಲ್ಲಿ ಕಾಣುವ ಇನ್ನೊಂದು ವಿಶೇಷತೆಯೆಂದರೆ ವಾಮಾಚಾರ ಪೂಜಾ ಲಕ್ಷಣಗಳು. (ಉದಾ: ಅಮೃತವರ್ಷಿಣಿ ರಾಗದ ಹಿಮಗಿರಿ ಕುಮಾರಿ ಕೃತಿಯಲ್ಲಿ ಬರುವ ವಾಮಮಾರ್ಗ ಪ್ರಿಯಕರಿ; ಅಹಿರಿ ರಾಗಶ್ರೀ ಕಮಲಾಂಬಾ ಜಯತಿ ಕೃತಿಯ ವಾಮಾದಿ ಶಕ್ತಿ ಪೂಜಿತ ಇತ್ಯಾದಿ.) ಇವರ ಗಣಪತಿ ಮತ್ತು ದೇವಿ ಕೃತಿಗಳಲ್ಲಿ ಇಂಥಹ ಪ್ರಯೋಗಗಳು ಕಂಡು ಬರುತ್ತದೆ. ದಕ್ಷಿಣಾದಿ ದೇಶಗಳಲ್ಲಿ ಅವ್ಯಾಹತವಾಗಿ ಬಳಕೆಯಲ್ಲಿರುವ ವಾಮಾಚಾರ ಹಾಗೂ ದಕ್ಷಿಣಾಚಾರ ಪೂಜಾ ಪದ್ಧತಿ ದೀಕ್ಷಿತರ ಕೃತಿಗಳಲ್ಲಿ ಪ್ರಯೋಗಿಸಲ್ಪಟ್ಟದ್ದು ಆಶ್ಚರ್ಯವೆನಿಸದಿದ್ದರೂ, ಸ್ಮಾರ್ತಬ್ರಾಹ್ಮಣರೂ, ಯಾವ ಪ್ರಲೋಬನೆಗೂ – ಆಮಿಷಗಳಿಗೂ ಆಕಾಂಕ್ಷಿಗಳಾಗದ, ಮಹಾವಿರಕ್ತರಾದ, ಎಂದೂ ನರಸ್ತುತಿ ಮಾಡದೆ ಸದಾ ಭಗವಂತನನ್ನೇ ಕಾಯಾ ವಾಚಾ ಮನಸಾ ಸ್ತುತಿಸಿದ ದೀಕ್ಷಿತರಿಗೇಕೆ ಈ ತಾಮಸಾರಾಧನೆಯ ಮೇಲೆ ವಾಂಛೆ ಎಂದೆನಿಸುತ್ತದೆ. ಅದೇನೆ ಇದ್ದರೂ ಇವರ ಕೃತಿಗಳಲ್ಲಿರುವ ಆಪ್ಯಾಯಮಾನತೆ, ಗಾಢವಾದ ಭಕ್ತಿಯ ಪರಾಕಾಷ್ಠೆ ಮಾತ್ರ ಎಂಥಾ ನಾಸ್ತಿಕನಲ್ಲೂ ಭಕ್ತಿಯನ್ನು ಮೂಡಿಸಿ ಆಸ್ತಿಕನನ್ನಾಗಿಸುವ ಶಕ್ತಿಯಿದೆ. ಅವರು ಯಾವಾಗಲೂ ತಮಗಾಗಿ ಹಾಡಿದರು, ತಮ್ಮ ಮನಸ್ಸಿನ ಸಂತೋಷಕ್ಕಾಗಿ ಮಾತ್ರ ಕೃತಿ ರಚಿಸಿದರು. ಇನ್ನೊಬ್ಬರಿಗೆ ಉಪದೇಶ ಮಾಡುವಂಥ ಕೃತಿಯನ್ನು ಎಂದಿಗೂ ರಚಿಸಿಲ್ಲ. ಈ ಕಾರಣದಿಂದಾಗಿಯೇ ಏನೋ ಅವರ ಕೃತಿಗಳಲ್ಲಿ ಭಜರೇರೆ ಚಿತ್ತ ಮಾನಸ (ಎಲೈ ಮನಸ್ಸೇ ಭಜಿಸು), ಅನಿಶಂ ಚಿಂತಯಾಮ್ಯಹಂ (ಎಡೆಬಿಡದೆ ಚಿಂತಿಸು ತ್ತೇನೆ), ಸದಾ ಪಾಲಯಮಾಂ , ಮಾಮವ (ಸದಾ ನನ್ನನ್ನು ರಕ್ಷಿಸು), ಪಾಹಿಮಾಂ (ನನ್ನನ್ನು ಕಾಪಾಡು) ಮುಂತಾದ ಪದಗಳೇ ಸಿಗುತ್ತಿರುತ್ತವೆ.
ಮಹಾನ್ ವಾಗ್ಗೇಯಕಾರರೆನಿಸಿದ ಮುತ್ತುಸ್ವಾಮಿ ದೀಕ್ಷಿತರ ಉಪಲಬ್ಧವಿರುವ ಕೃತಿಗಳು ಸುಮಾರು 470ರಷ್ಟು ಇದ್ದರೂ ಇಂದು ಬೆರಳೆಣಿಕೆಯಷ್ಟು ಕೃತಿಗಳು ಕಛೇರಿಯಲ್ಲಿ ಬಳಕೆಯಲ್ಲಿವೆ. ಆದ್ದರಿಂದ ಇನ್ನಾದರೂ ಕರ್ನಾಟಕ ಸಂಗೀತದಲ್ಲಿ ಸಾಧನೆ ಮಾಡುತ್ತಿರುವ ಯುವಕಲಾವಿದರೆನಿಸಿದ ಗಾಯಕ ಗಾಯಕಿಯರು ದೀಕ್ಷಿತರ ಎಲೆಮರೆಯ ಕಾಯಿಯಂತಿರುವ ಸೊಗಸಾದ ಕೃತಿಗಳನ್ನು ಪ್ರಚುರ ಮಾಡುವಂಥಹ ಪ್ರಯತ್ನವನ್ನು ಮಾಡಬೇಕಾಗಿದೆ.

Sunday, 2 November 2014

ಕರ್ನಾಟಕ ಸಂಗೀತದ ವಾಗ್ಗೇಯಕಾರ ಶ್ರೀಮುತ್ತುಸ್ವಾಮಿ ದೀಕ್ಷಿತರ ಶ್ರೀ ಮಹಾಗಣಪತಿಯ ನಾದಾರಾಧನೆ.


ಕರ್ನಾಟಕ ಸಂಗೀತದ ವಾಗ್ಗೇಯಕಾರ ಶ್ರೀಮುತ್ತುಸ್ವಾಮಿ ದೀಕ್ಷಿತರ ಶ್ರೀ ಮಹಾಗಣಪತಿಯ ನಾದಾರಾಧನೆ.
                ಚಿದಾನಂದ ಸ್ವರೂಪಿಯಾದ ಶ್ರೀ ಮಹಾಗಣಪತಿಯ ಆರಾಧನ ರೂಪದಂತೆ ಕರ್ನಾಟಕ ಸಂಗೀತದ ಲ್ಲಿ  ಅವನ ಪ್ರಸಿದ್ಧಿಗೆ ತಕ್ಕಂತೆ ಹತ್ತು ಹಲವು ಕೃತಿಗಳಿವೆ. ಪುರಂದರದಾಸ, ಕನಕದಾಸರಾದಿಯಾಗಿ ಹೆಚ್ಚಿನ ಎಲ್ಲಾ ಹರಿದಾಸರು ಗಣಪತಿಯನ್ನು ಹಾಡಿ ಹೊಗಳಿ ಕೃತಿ ರಚಿಸಿದವನ್ಢ್ಜಿ. ಕರ್ನಾಟಕ ಸಂಗೀತದಲ್ಲಿ ಮೊದಲ ಪಾಠವಾಗಿ ಕಲಿಸುವುದು ‘ಶ್ರೀಗಣನಾಥ ಸಿಂಧೂರಾ ವರ್ಣ’ ( ರಾಗ: ಮಲಹರಿ ; ತಾಳ: ರೂಪಕತಾಳ) ಎಂಬ ಪುರಂದರದಾಸರ ಕೃತಿಯನ್ನು. ಇದಲ್ಲದೆ ದೇವರನಾಮವಾಗಿ ಹಂಸಧ್ವನಿ ರಾಗ‘ಗಜವದನಾ ಬೇಡುವೆ ಗೌರೀತನಯ’, ನಾಟರಾಗ‘ಶರಣು ಸಿದ್ಧಿವಿನಾಯಕ’, ‘ನಮ್ಮಮ್ಮ ಶಾರದೆ ಉಮಾಮಹೇಶ್ವರಿ’ ಮುಂತಾದ ಕೃತಿಗಳನ್ನು ಹಾಡುವ ಪರಿಪಾಠವಿದೆ.
                             ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದೇ ಪ್ರಸಿದ್ಧರಾದ ಶ್ಯಾಮಾಶಾಸ್ತ್ರಿಗಳು, ತ್ಯಾಗರಾಜರು, ಮತ್ತು ಮುತ್ತುಸ್ವಾಮಿ ದೀಕ್ಷಿತರಲ್ಲಿ, ಶ್ಯಾಮಾಶಾಸ್ತ್ರಿಗಳ ಯಾವುದೇ ಗಣಪತಿಪರ ಕೃತಿ ಲಭ್ಯವಾಗಿಲ್ಲ. ತ್ಯಾಗರಾಜರು ಸೌರಾಷ್ಟ್ರ ರಾಗದಲ್ಲಿ ‘ಶ್ರೀ ಗಣಪತಿನಿ ಸೇವಿಂಪರಾ’ ಹಾಗೂ ಬಂಗಾಳ ರಾಗದಲ್ಲಿ ‘ಗಿರಿರಾಜ ಸುತಾತನಯ’ ಎಂಬ ಅಪೂರ್ವವಾದ ಕೃತಿ ರಚನೆ ಮಾಡಿದ್ದಾರೆ.  ಈ ಕೃತಿಯ ಸೌಂದರ್ಯವನ್ನು ಕೇಳಿಯೇ ಆಸ್ವಾದಿಸಬೇಕು.
              ಇನ್ನುಳಿದವರಲ್ಲಿ ಮುತ್ತುಸ್ವಾಮಿ ದೀಕ್ಷಿತರು ಗಾಣಪತ್ಯ ಶಾಸ್ತ್ರದಲ್ಲಿ ನಿಸ್ಸೀಮರು. ಬಹುಶ: ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಮಹಾಗಣಪತಿಯ ಕುರಿತು ಇದುವರೆಗೆ ಯಾರೂ ಮಾಡದಷ್ಟು ಅಂದರೆ ಸುಮಾರು ಇಪ್ಪತ್ತೊಂಬತ್ತು ಕೃತಿ ರಚನೆ ಮಾಡಿದ್ದಾರೆ. ಇದಲ್ಲದೆ ಗಣಪತಿಯನ್ನು   ಕುರಿತು ಇಷ್ಟು ವಿಶಿಷ್ಟವಾಗಿ, ವಿಸ್ತಾರವಾಗಿ, ವಿಶೇಷವಾಗಿಯೂ ಯಾವ ವಾಗ್ಗೇಯಕಾರರು ಕೃತಿ ರಚಿಸಿಲ್ಲ. 
              ಸಾಮಾನ್ಯವಾಗಿ ದೀಕ್ಷಿತರ ಬಗ್ಗೆ ಯಾರಿಗೂ ಹೆಚ್ಚು ಗೊತ್ತಿರಲಿಕ್ಕಿಲ್ಲ. ಆದರೆ ಅವರ ರಚನೆಗಳಲ್ಲಿ ಜಗತ್ಪ್ರಸಿದ್ಧವಾದ ಹಂಸಧ್ವನಿ ರಾಗದ ‘ವಾತಾಪಿ ಗಣಪತಿಂ ಭಜೇಹಂ’ ಹಾಗೂ ನಾಟ ರಾಗದ ‘ಮಹಾಗಣಪತಿಂ ಮನಸಾ ಸ್ಮರಾಮಿ’ ಎಂಬ ಕೃತಿಗಳನ್ನು ಯಾರೂ ಕೇಳದೆ ಇರಲಿಕ್ಕಿಲ್ಲ.
               ಮುತ್ತುಸ್ವಾಮಿ ದೀಕ್ಷಿತರ ಗಣಪತಿಪರ ಕೃತಿಗಳನ್ನು ಸಾಹಿತ್ಯ ಮತ್ತು ಸಂಗೀತದ ದೃಷ್ಟಿಯಿಂದ ನೋಡಿದರೆ ಪ್ರಗಲ್ಭ ಪಾಂಡಿತ್ಯಪೂರ್ಣವಾಗಿ ರಚನೆಗೊಂಡಿದ್ದು. ಒಂದೊಂದು ಕೃತಿಯೂ ಒಂದೊಂದು ಅನುಭವವನ್ನು ಕೊಡುವಂಥಹ ಸಾಮಥ್ರ್ಯವುಳ್ಳದ್ದಾಗಿದೆ. ಅಪೂರ್ವವಾದ ಪದಪುಂಜಗಳು, ಗಣಪತಿಯ ಘನ ವಿಶೇಷತೆಗಳನ್ನು ಸಾರುವ ರಚನಾ ಕೌಶಲ್ಯ, ಸೂಕ್ತವಾದ ರಾಗಗಳ ಆಯ್ಕೆ ಮುಂತಾದವುಗಳಿಂದ ಮಿಕ್ಕ ವಾಗ್ಗೇಯಕಾರರ ಗಣಪತಿ ಕೃತಿಗಳಿಗಿಂತ ವಿಭಿನ್ನವಾಗಿ ದೀಕ್ಷಿತರ ರಚನೆಗಳಿಗೆ ಅವರ ರಚನೆಗಳೇ ಸಾಟಿ ಎಂಬಂತಿವೆ.
               ಮುತ್ತುಸ್ವಾಮಿ ದೀಕ್ಷಿತರ ಗಣಪತಿ ಪರಕೃತಿಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಷೋಡಶ ಗಣಪತಿ ಕೃತಿಗಳು. ಇವು ಹದಿನಾರು ಗಣಪತಿ ಕೃತಿಗಳ ಒಂದು ಗುಚ್ಛ. ಇದನ್ನು ಸಮುದಾಯ ಕೃತಿಗಳೆಂದೂ ಕರೆಯುತ್ತಾರೆ. ಇವು ತಿರುವಾರೂರಿನ ಶ್ರೀತ್ಯಾಗರಾಜ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿರುವ 16 ಗಣಪತಿ ಮೂರ್ತಿಗಳ ಕುರಿತ ರಚನೆ. ಆಗಮಗಳ ಪ್ರಕಾರ ಗಣಪತಿಯ ಸ್ವರೂಪ ಹದಿನಾರು. ಪ್ರತಿಯೊಂದಕ್ಕೂ ಪ್ರತ್ಯೇಕ ಹೆಸರು, ಪೂಜಾವಿಧಿಗಳು ಹಾಗೂ ಪ್ರತ್ಯೇಕವಾದ ಮಂತ್ರ ಮತ್ತು ತಂತ್ರಗಳಿವೆ. ಇದಲ್ಲದೆ ಉಳಿದ ಗಣಪತಿ ಕೃತಿಗಳು ಸೇರಿ ಇಪ್ಪತ್ತೊಂಬತ್ತರಷ್ಟು ಕೃತಿ ರಚಿಸಿದ್ದಾರೆ.

ಅವುಗಳ ವಿವರ ಹೀಗಿವೆ:

         ಕೃತಿ
ರಾಗ    
ತಾಳ
1
ವಾತಾಪಿ ಗಣಪತಿಂ ಭಜೇಹಂ
 ಹಂಸಧ್ವನಿ
 ಆದಿತಾಳ
2
ಮಹಾಗಣಪತೇ ಪಾಲಯಾಶುಮಾಂ
 ನಟನಾರಾಯಣಿ 
 ಆದಿತಾಳ
3
ಪಂಚಮಾತಂಗಮುಖ ಗಣಪತಿನಾ ಪರಿಪಾಲಿತೋ ಹಂ
 ಮಲಹರಿ
 ರೂಪಕತಾಳ
4
ಶ್ರೀ ಮೂಲಾಧಾರಚಕ್ರ ವಿನಾಯಕ
 ಶ್ರೀ
 ಆದಿತಾಳ
5
ಶಕ್ತಿಸಹಿತ ಗಣಪತಿಂ
  ಶಂಕರಾಭರಣ
  ತ್ರಿಶ್ಯ ಏಕತಾಳ
6
ಉಚ್ಛಿಷ್ಟ ಗಣಪತೌ ಭಕ್ತಿಂ
 ಕಾಶಿರಾಮಕ್ರಿಯೆ
 ಆದಿತಾಳ
7
ಗಣನಾಯಕಂ ಭಜೇಹಂ ಭಜೇ
 ಪೂರ್ಣಷಡ್ಜ
 ಆದಿತಾಳ
8
ಶ್ವೇತಗಣಪತಿಂ ವಂದೇ
 ಚೂಡಾಮಣಿ
 ತ್ರಿಪುಟತಾಳ
9
ರಕ್ತಗಣಪತಿಂ ಭಜೇಹಂ
ಮೋಹನ
 ಆದಿತಾಳ
10
ಗಣರಾಜೇನ ರಕ್ಷಿತೋಹಂ
 ಆರಭಿ
 ಮಿಶ್ರಛಾಪುತಾಳ
11
ಗಜಾನನಯುತಂ ಗಣೇಶ್ವರಂ
 ಚಕ್ರವಾಕ
 ಆದಿತಾಳ
12
ವಲ್ಲಭ ನಾಯಕಸ್ಯ ಭಕ್ತೋ ಭವಾಮಿ
 ಬೇಗಡೆ
 ರೂಪಕತಾಳ
13
ಲಂಬೋದರಾಯ ನಮಸ್ತೇ ಶ್ರೀ
 ವರಾಳಿ
 ಖಂಡಛಾಪುತಾಳ
14
ಶ್ರೀ ಗಣನಾಥಂ ಭಜರೇ ಚಿತ್ತ ಪರಾಶಕ್ತಿಯುತಂ
ಈಶ ಮನೋಹರಿ
 ರೂಪಕತಾಳ
15
ಹಸ್ತಿ ವದನಾಯ ನಮಸ್ತುಭ್ಯಂ
  ನವರೋಜ್
 ಮಿಶ್ರಛಾಪುತಾಳ
16
ಸಿದ್ಧಿವಿನಾಯಕಂ ಅನಿಶಂ ಚಿಂತಯಾಮ್ಯಹಂ
 ಷಣ್ಮುಖ ಪ್ರಿಯ
 ರೂಪಕತಾಳ
17
ಕರಿಕಳಭ ಮುಖಂ ಢುಂಡಿ ಗಣೇಶಂ
ಸಾವೇರಿ
 ರೂಪಕತಾಳ
18
ಗಣೇಶ ಕುಮಾರ ಪಾಹಿಮಾಂ ಗಜಮುಖ
ಜಂಜೂಟಿ
 ಏಕತಾಳ
19
ಶ್ರೀ ಮಹಾಗಣಪತಿಂ ರವತುಮಾಂ
 ಗೌಳ
 ಮಿಶ್ರಛಾಪುತಾಳ
20
ಏಕದಂತಂ ಭಜೇಹಂ ಏಕಾನೇಕ ಫಲಪ್ರದಂ
  ಬಿಲಹರಿ
 ಮಿಶ್ರಛಾಪುತಾಳ
21
ಶ್ರೀ ಗಣೇಶಾತ್ಪರಂ ಚಿತ್ತ ನಹಿರೇರೇ
ಆದ್ರ್ರದೇಶಿ
ರೂಪಕತಾಳ
22
ರುದ್ರಕೋಪಜಾತ
 ರುದ್ರಪ್ರಿಯ
    ?
23
ಮಹಾಗಣಪತಿ ವಂದೇ
 ತೋಡಿ
 ತ್ರಿಶ್ಯ ಏಕತಾಳ
24
ಮಹಾಗಣಪತಿ ಮನಸಾಸ್ಮರಾಮಿ
 ನಾಟ 
 ಏಕತಾಳ
25
ಹೇರಂಭಾಯ ನಮಸ್ತೇ
 ಅಠಾಣ
 ರೂಪಕತಾಳ
26
ವಿಘ್ನೇಶ್ವರಂ
 ಮಲಹರಿ
    ?
27
ವಿನಾಯಕಂ ವಿಘ್ನೇಶ್ವರಂ
 ಚಕ್ರವಾಕ 
 ರೂಪಕತಾಳ
28
ವಾಮಾಂಕಸ್ಥಿತಾಯಾ ವಲ್ಲಭಯಾಶ್ಲಿಷ್ಟಂ
  ಅಠಾಣ
 ಏಕತಾಳ
29
ಗಣಪತೇ ಮಹಾಮತೇ
 ಕಲ್ಯಾಣಿ
ರೂಪಕತಾಳ

             ದೀಕ್ಷಿತರ ಗಣಪತಿ ಕೃತಿಗಳಲ್ಲಿ ಅವನ ವಿವಿಧ ಸ್ವರೂಪಗಳ ದರ್ಶನವಾಗುತ್ತದೆ. ಮಹಾಗಣಪತಿಯು ತನ್ನ ಮಾತಾ-ಪಿತರಂತೆ ನಾಟ್ಯಪ್ರಿಯ. ಹಾಗಾಗಿಯೇ ಏನೋ ದೀಕ್ಷಿತರು ಗೌಳರಾಗದ ‘ಶ್ರೀ ಮಹಾಗಣಪತಿರವತುಮಾಂ’ಹಾಗೂ ಬೇಗಡೆ ರಾಗದ ‘ವಲ್ಲಭ ನಾಯಕಸ್ಯ’ ಎಂಬ ಕೃತಿಗಳನ್ನು ನರ್ತನ ಗಣಪತಿಗಾಗಿಯೇ ರಚಿಸಿದ್ದಾರೆ. ಅದರಲ್ಲೂ ಶ್ರೀಮಹಾಗಣ ಪತಿಂ ರವತುಮಾಂ ಕೃತಿಯಂತೂ ವಿಳಂಬ ಲಯದಲ್ಲಿದ್ದು ನರ್ತನೆಯ ಭಾವಕ್ಕೆ ಸರಿಯಾಗಿ ಜೋಡಿಸಿದ ಶೋಲ್ಕಟ್ಟು ಸ್ವರಗಳು ಅತಿವೇಗ ಗತಿಯಲ್ಲಿದ್ದು ಮೃದಂಗದ ಜತಿಗಳಾದ ತಝಂ ಕಿಟತೋಂ ಕುಕುಂದರಿ ಕಿಟತಝಂ ಮುಂತಾದ ವಿಶೇಷ ರಚನೆಗಳಿಂದ ಕೂಡಿ ಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ ಹಾಗೂ ನೃತ್ಯೋಚಿತವಾಗಿದೆ.
             ಷಣ್ಮಖಪ್ರಿಯ ರಾಗದ ‘ಸಿದ್ಧಿವಿನಾಯಕಂ ಅನಿಶಂ ಚಿಂತಯಾಮ್ಯಹಂ’ ಕೃತಿಯು ವಿಶೇಷವಾಗಿ ವರಸಿದ್ಧಿ ವಿನಾಯಕ ವೃತಕ್ಕೆ ಸಂಬಂಧಿಸಿದ್ದು. ಈ ವೃತವನ್ನು ಭಾದ್ರಪದ ಮಾಸದಲ್ಲಿ ಬರುವ ವಿನಾಯಕ ಚತುರ್ಥಿಯಂದು ಮಾಡತಕ್ಕದ್ದು ಹಾಗಾಗಿ ವಿನಾಯಕ ಚತುರ್ಥಿ ಯಾವಾಗ ಬರುತ್ತದೆ ಬಹಳ ಚಮತ್ಕಾರವಾಗಿ ಭಾದ್ರಪದಮಾಸ ಚತುಥ್ರ್ಯಾಂ ಎಂದು ಚರಣದ ಸಾಹಿತ್ಯದಲ್ಲಿ ನಮೂದಿಸಿದ್ದಾರೆ. ಹಾಗೆಯೇ ರಕ್ತಗಣಪತಿ ಹಾಗೂ ಶ್ವೇತಗಣಪತಿ ಕುರಿತು ಕೃತಿರಚಿಸಿದ್ದಾರೆ. ಶ್ರೀರಾಗದ  ‘ಶ್ರೀಮೂಲಾಧಾರಚಕ್ರ ವಿನಾಯಕ’ ಕೃತಿಯಲ್ಲಿ ಷಟ್ ಚಕ್ರದಲ್ಲಿ ಒಂದಾದ ಮೂಲಾಧಾರ ಚಕ್ರದಲ್ಲಿ ನೆಲೆಸಿರುವ ವಿನಾಯಕನ ಕುರಿತು ಕೃತಿ ರಚಿಸಿದ್ದಾರೆ.
            ಇದೆಲ್ಲಕ್ಕಿಂತಲೂ ವಿಶೇಷವಾಗಿ ದೀಕ್ಷಿತರು ಉಚ್ಛಿಷ್ಟ ಗಣಪತಿಯ ಮೇಲಿನ ಕೃತಿ. ಇಲ್ಲಿ ತಾಂತ್ರಿಕ ಪೂಜಾ ಪದ್ಧತಿಯ ಪ್ರಕಾರದ ವಾಮಾಚಾರ ಲಕ್ಷಣಗಳು ಕಾಣುತ್ತದೆ. ಕೆಲವೊಂದು ಆಧಾರಗಳ ಪ್ರಕಾರ ಬಹುಶ: ಆದಿಗುರು ಶ್ರೀಶಂಕರಾಚಾರ್ಯರಿಂದ ಭಾಗಶ:ವಾಗಿ ನಿರ್ಮೂಲ ಗೊಂಡ ತಾಮಸಿಕ ಉಪಾಸನಾ ಪದ್ಧತಿಯನ್ನು ಬ್ರಾಹ್ಮಣರೂ, ಮಹಾವಿರಕ್ತಿಗಳೂ  ಆದ ದೀಕ್ಷಿತರು ಯಾಕೆ ಕೈಬಿಡಲಿಲ್ಲವೋ ಗೊತ್ತಿಲ್ಲ. ಹಾಗಾಗಿ ಸಾತ್ವಿಕ ರೀತಿಯ ಪೂಜಾ ಪದ್ಧತಿಯೊಂದಿಗೆ ತಾಮಸಿಕ ರೀತಿಯ ಉಪಾಸನೆಯನ್ನೂ ದೀಕ್ಷಿತರು ಒಪ್ಪುತ್ತಿದ್ದರು ಎಂಬುವುದಕ್ಕೆ ದೀಕ್ಷಿತರ ಉಚ್ಛಿಷ್ಟ ಗಣಪತಿಯ ಕೃತಿ ಹಾಗೂ ಕೆಲವೊಂದು ದೇವಿಕೃತಿಗಳಲ್ಲಿ ಕಂಡುಬರುವ ವಾಮಾಚಾರ ಪೂಜಾಲಕ್ಷಣಗಳೇ ಸಾಕ್ಷಿ.
             ಅದೇನೇ ಇರಲಿ ನಾದವೇ ಪ್ರಧಾನವಾಗಿರುವ ದೀಕ್ಷಿತರ ಕೃತಿಗಳು ಕೇಳುಗರ ಹೃದಯದಲ್ಲಿ ಅವ್ಯಕ್ತವಾ ದ ಅನಂತ ಆನಂದವನ್ನುಂಟು ಮಾಡುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಹಾಗೆಯೇ ದೀಕ್ಷಿತರ ಕೃತಿಗಳು ಕೇಳಲು ಎಷ್ಟು ಸೊಗಸೋ ಹಾಡಲು ಅಷ್ಟೇ ಕ್ಲಿಷ್ಟ. ಸಂಗೀತಗಾರರಿಗೆ ಸವಾಲು ಹಾಕುವಂತಿವೆ. ಸಂಗೀತ ವಿದ್ವಾಂಸರ ಪ್ರಕಾರ ತ್ಯಾಗರಾಜರ ಕೃತಿಗಳು ದ್ರಾಕ್ಷಿಯನ್ನು ತಿಂದ ಹಾಗೆ. ಅದರ ಹೊರ ಮತ್ತು ಒಳಭಾಗ ಎರಡೂ ಸಿಹಿ ಹಾಗೂ ತಿನ್ನಲೂ ಸುಲಭ ಹಾಗಾಗಿ ದ್ರಾಕ್ಷಾ ಪಾಕಕ್ಕೆ ಹೋಲಿಸಿದರೆ. ದೀಕ್ಷಿತರ ಕೃತಿಗಳು ಸಿಹಿನೀರುಳ್ಳ ತೆಂಗಿನಕಾಯಿಯ ಚಿಪ್ಪನ್ನು ಒಡೆದೇ ಅದರ ಸವಿಯನ್ನು ಸವಿಯುವಷ್ಟೇ ಕಷ್ಟ ಅಂದರೆ ನಾರಿಕೇಳಪಾಕಕ್ಕೆ ಹೋಲಿಸಿದ್ದಾರೆ. ತ್ಯಾಗರಾಜರ ಕೃತಿಗಳು ಮಧ್ಯಮಕಾಲದಲ್ಲಿದ್ದು ಹಾಡಲು ಸುಲಭ. ದೀಕ್ಷಿತರದ್ದು ವಿಲಂಬಲಯದಲ್ಲಿದ್ದು ಸ್ಪಷ್ಟ ಉಚ್ಛಾರ, ಶುದ್ಧ ಶಾರೀರ ಹಾಗೂ ಶ್ವಾಸಸಿದ್ಧಿಯುಳ್ಳವರು ಮಾತ್ರ ಹಾಡಲು ಶಕ್ತರು ಎಂಬುವುದು ವಿದ್ವಾಂಸರ ಅಭಿಪ್ರಾಯ.
             ದೀಕ್ಷಿತರು ಗಣಪತಿಯ ಕುರಿತು ಎರಡು ಮೂರು ಕಚೇರಿಗಾಗುವಷ್ಟು ಕೃತಿ ರಚಿಸಿದ್ದರೂ ಇಂದು ನಾವು ಕೇವಲ ಬೆರಳೆಣಿಕೆಯಷ್ಟು ಕೃತಿಗಳನ್ನು ಮಾತ್ರ ಕಚೇರಿಗಳಲ್ಲಿ ಕೇಳುತ್ತಿದ್ದೇವೆ. ಈ ಕಾರಣದಿಂದಾಗಿ ಮುಂದಾದರೂ ಯುವಕಲಾವಿದರು ದೀಕ್ಷಿತರ ಉಳಿದ ಕೃತಿಗಳ ಕಡೆಗೆ ಗಮನಹರಿಸಿ ಕಚೇರಿಗಳಲ್ಲಿ ಪ್ರಸ್ತುತ ಪಡಿಸಿದರೆ ಆ ನಾದಯೋಗಿಯ ನಾದಸಾಧನೆಗೆ ಫಲದೊರಕಿದಂತೆ.

ಆಧಾರ ಗ್ರಂಥಗಳು
ಗಾನಕಲೆ     -  ರಾಳಪಲ್ಲಿ ಅನಂತ ಕೃಷ್ಣ ಶರ್ಮಾ
ಮುತ್ತುಸ್ವಾಮಿ ದೀಕ್ಷಿತರ ಸಾಹಿತ್ಯ ಮಂಜರಿ  - ವಿದ್ವಾನ್ ಮಿತ್ತೂರು ಶಂಕರ ಮೂರ್ತಿ
ಈಸಬೇಕು ಇದ್ದು ಜಯಿಸಬೇಕು  -  ವಿದ್ವಾನ್ ನಂಜುಂಡ ಸ್ವಾಮಿ
ಶ್ರೀಸಾಮಾನ್ಯರಿಗೆ ಶ್ರೀಚಕ್ರ ದರ್ಶನ  - ವಿದ್ವಾನ್ ವಿ. ನಂಜುಂಡ ಸ್ವಾಮಿ                                              
ತಾರೀಕು 29 ಆಗಸ್ಟ್ 2014ರ ವಿನಾಯಕ ಚತುರ್ಥಿಯಂದು ಉದಯವಾಣಿಯಲ್ಲಿ ಪ್ರಕಟಗೊಂಡ ಲೇಖನ