Friday, 23 January 2015

"ಮಂದ್ರ"ಸಂಗೀತ - ಪಾತ್ರ ರಾಗ ಸಮನ್ವಯ ಸಂಗೀತ ಪ್ರಯೋಗ

‘ಮಂದ್ರ ಸಂಗೀತ’ - ಪಾತ್ರ ರಾಗ ಸಮನ್ವಯ ಸಂಗೀತ ಪ್ರಯೋಗ
  ಎರಡು ವರ್ಷದ ಹಿಂದೆ ಕನ್ನಡದ ಖ್ಯಾತ ಕಾದಂಬರಿಕಾರ ಶ್ರೀಮಾನ್ ಎಸ್ ಎಲ್ ಭೈರಪ್ಪನವರ ಮಂದ್ರ ಕಾದಂಬರಿಯು ಸಂಗೀತ ಕಛೇರಿಯಾಗಿ ಪ್ರಯೋಗಗೊಂಡಿತು. ಕನ್ನಡ ಕಾದಂಬರಿಯ ದೃಷ್ಟಿಯಲ್ಲಿ ನೋಡಿದರೆ ಇದೊಂದು ಮೈಲಿಗಲ್ಲೇ ಸರಿ. ಆ ಸಂದರ್ಭದಲ್ಲಿ ನಾನು ಬರೆದ ಲೇಖನ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಈಗ ನನ್ನ ಬ್ಲಾಗ್ ಪುನ್ನಾಗವರಾಳಿಗೆ ಅಪ್ಲೋಡ್ ಮಾಡುತ್ತಿದ್ದೇನೆ.


    ಕನ್ನಡದಲ್ಲಿ ಸಂಗೀತವನ್ನೇ ಹಿನ್ನಲೆಯಾಗಿಟ್ಟುಕೊಂಡಂಹ ಕಾದಂಬರಿಗಳು ಅದೆಷ್ಟೋ ಬಂದಿದೆ. ಭೈರಪ್ಪನವರು ಮಂದ್ರ ಕಾದಂಬರಿಯಲ್ಲಿ ಸಂಗೀತವನ್ನು ಬಳಸಿಕೊಂಡಂತಹ ರೀತಿ ಅನನ್ಯ. ಹಾಗಾಗಿ ಮಂದ್ರ ಕಾದಂಬರಿಯನ್ನು ಓದುತ್ತಾ ಹೋದಂತೆ ಒಂದು ದೀರ್ಘಾವಧಿ ಸಂಗೀತ ಕಛೇರಿಯನ್ನು ಆಲಿಸಿದಾಗ ದೊರಕುವ ತನ್ಮಯತೆ, ತೃಪ್ತಿ, ಹೃದ್ಯ ಅನುಭವವು ಸಹೃದಯ ಓದುಗರಿಗೆ ದೊರಕುತ್ತದೆ.
    ಮಂದ್ರ ಕಾದಂಬರಿಯಲ್ಲಿ ರಾಗಗಳನ್ನು ಬಳಸಿಕೊಂಡ ರೀತಿಯೇ ಒಂದು ವೈಶಿಷ್ಟ್ಯ. ಇಲ್ಲಿ ಆಯಾ ರಾಗಗಳ ಭಾವ, ಲಕ್ಷಣ, ಹಾಡುವ ಸಮಯ, ಕಾಲ, ಸನ್ನಿವೇಶ, ಸಂದರ್ಭ ಇತ್ಯಾದಿಗಳನ್ನು ಆಯಾ ಪಾತ್ರಗೊಂದಿಗೆ ತುಲನಾತ್ಮಕವಾಗಿ ಹೊಂದಿ ಸಿಕೊಂಡದ್ದು ಕಾದಂಬರಿಕಾರನ ಜಾಣ್ಮೆ. ಮಂದ್ರದಲ್ಲಿ ಒಂದೊಂದು ರಾಗಗಳು ಒಂದೊಂದು ಹೆ±್ಝ್ವ ಪಾತ್ರಗಳನ್ನು ಹೋಲುತ್ತವೆ ಕಾದಂಬರಿಯ ಪ್ರಮುಖ ಪಾತ್ರ ಮೋಹನಲಾಲ್‍ಗೆ ಸಂಗೀತದಷ್ಟೇ ಹೆಣ್ಣಿನ ಸಂಗದಲ್ಲಿಯೂ ಪ್ರಭುತ್ವ. ಇಲ್ಲಿ ತನ್ನ ಜೀವನದಲ್ಲಿ ಹಾದುಹೋದ ಹೆಂಗಸರನ್ನು ಅವನು ಸಂಗೀತದ ಪರಿಭಾಷೆಯಲ್ಲಿ ವರ್ಣಿಸುತ್ತಾನೆ. ಒಬ್ಬಳನ್ನು ಮತ್ತೊಬ್ಬಳ ಬಾಹ್ಯ ಸೌಂದರ್ಯದೊಂದಿಗೆ ಅಳೆದು ತೂಗುತ್ತಾನೆ. ಅವರ ಗುಣ ಸ್ವಭಾವಕ್ಕೆ ತಕ್ಕಂತೆ ಅವರಿಗೆ ಒಂದೊಂದು ರಾಗದ ಹೆಸರು ಕೊಡುತ್ತಾನೆ. ರಾಗದ ಭಾವ-ಸ್ವಭಾವಗಳಿಗೆ ಅವಳನ್ನು ಹೋಲಿಸುತ್ತಾನೆ.


    ಮಂದ್ರ ಕಾದಂಬರಿಯ ರಾಗ ಹಾಗೂ ಪಾತ್ರ ಭಾವಗಳನ್ನು ಸಮೀಕರಿಸಿ ಆ ಮೂಲಕ ರಾಗ ರೂಪು-ರೇಷೆಗಳನ್ನು ಕಛೇರಿಯಾಗಿಸಿದ ವಿಶಿಷ್ಟ ಸಾಧ್ಯತೆಯೇ ಮಂದ್ರ ಸಂಗೀತ. ನಾಲ್ಕಾರು ಇಂತಹ ಪ್ರಯೋಗವಾದ ನಂತರ ಮಂಗಳೂರಿನಲ್ಲಾದ ಪ್ರಯೋಗದಲ್ಲಿ ರಸಿಕರಿಗೆ ದೊರಕಿದ ಅನುಭವದ ಸಮೀಕ್ಷೆ ಮುಂದಿದೆ.
    ಮೊದಲಿಗೆ ಯಮನ್ ರಾಗದ ಭಜನ್‍ನೊಂದಿಗೆ ಆರಂಭವಾದ ಕಛೇರಿ, ಅನಂತರ ಕಾದಂಬರಿಯಲ್ಲಿ ಪ್ರಸ್ತಾಪಿಸಲಾದ ಅಪೂರ್ವವಾದ ಪೂರಿಯಾ ರಾಗದೊಂದಿಗೆ ಮುಂದುವರಿಯುತ್ತದೆ. ಸಾಯಂಕಾಲದ ಅಥವಾ ಸಂಧ್ಯಾರಾಗವೆಂದೇ ಪ್ರಸಿದ್ಧಿ ಹೊಂದಿರುವ ಈ ರಾಗವು ಗಾಯಕ ಉಸ್ತಾದ್ ಫಯಾಜ್‍ಖಾನರ ತುಂಬು ಕಂಠದಲ್ಲಿ ವಿಶಿಷ್ಟವಾಗಿ ಶೋಭಿಸಿತು. ಈ ರಾಗದಲ್ಲಿ ಕಾಣುವ ವಿಷಾದ ಭಾವವು ಕಾದಂಬರಿಯ ನಾಯಕ ಮೋಹನ್‍ಲಾಲ್‍ನ ಗುರು ರಾಜಾಸಾಹೇಬ ಠಾಕೂರರ ವಿಷಾದ ಜೀವನವನ್ನು ಪ್ರತಿನಿಧಿಸುತ್ತದೆ.
    ರಾಜಾಸಾಹೇಬ್ ಠಾಕೂರರ ಬಳಿ ಕಲಿಯುತ್ತಿರುವ ಸಂದರ್ಭದಲ್ಲಿ ಉತ್ಕಟ ಕಾಮ ವಾಂಛೆಗೆ ಸಿಲುಕಿಕೊಳ್ಳುವ ಮೋಹನ ಲಾಲ್ ತನ್ನ ಕಾಮೋಪಶಾಂತಿಯನ್ನು ಹಳ್ಳಿಯ ಮುಗ್ಧ ಹುಡುಗಿ ಚುನ್ನಿಬಾಯಿಯಲ್ಲಿ ಪಡೆಯುತ್ತಾನೆ. ಆ ಸಂದರ್ಭದಲ್ಲಿ ಮೇಘ್ ರಾಗದ ಪ್ರಸ್ತಾಪ ಬರುತ್ತದೆ. ಈ ಮೇಘ್ ರಾಗವು ಕಛೇರಿಯಲ್ಲಿ ವರ್ಷಋತುವಿನ ಮೊದಲ ಮಳೆಯು ಬಿಸಿಲಿನ ಬೇಗೆಗೆ ಬಳಲಿ ಬೆಂಡಾದ ಭೂಮಿಯನ್ನು ತಣಿಸುವಂತೆ ಕೇಳುಗರ ಸಂಗೀತದ ದಾಹವನ್ನು ತಣಿಸಿತು.
    ಆ ನಂತರ ಪ್ರಸ್ತುತಿಗೊಂಡ ಮಾರೂಬಿಹಾಗ್ ರಾಗ ತನ್ನ ಸುಕುಮಾರ ಕೋಮಲ ರೂಪು-ವಯ್ಯಾರದ ಮಾಧುರ್ಯ ದೊಂದಿಗೆ ಕೇಳುಗರನ್ನು ಹೇಳಲಾಗದಂಥಹ ಅವ್ಯಕ್ತ ಆನಂದದಲ್ಲಿ ಮುಳುಗಿಸಿತು. ಈ ರಾಗವು ರಾಜಸ್ತಾನೀ ಮೂಲದವಳಾದ ಜವಹಾರ್‍ಬಾಯಿ ಎಂಬ ಪಾತ್ರವನ್ನು ಪ್ರತಿನಿಧಿಸುತ್ತದೆ. ರಾಜಸ್ತಾನಿ ಜನಪದ ಶೈಲಿಯಲ್ಲಿರುವ ಮಾರೂಬಿಹಾಗ್ ರಾಗದ ಬೆಡಗಿನ ಸಂಚಾರವು ಕಛೇರಿಯಲ್ಲಿ ಉಸ್ತಾದ್ ಫಯಾಜ್‍ಖಾನ್‍ರ ಕಂಠದಲ್ಲಿ ಅದ್ಭುತವಾಗಿ ಮೂಡಿ ಬಂತು. ಇಲ್ಲಿ ಪಂಡಿತ್ ಗುರುಮೂರ್ತಿಯವರ ತಬಲ ಸಾಥಿಯ ಜೊತೆಗಾರಿಕೆಯೂ ಅನನ್ಯ.

    ಅನಂತರದ ಕೋಮಲ್ ರಿಷಭ್ ಅಸಾವರಿ ರಾಗದ ಓಂಕಾರ ಪ್ರಸ್ತುತಿ ಮತ್ತು ರಾಗದ ಪ್ರಸ್ತುತಿಯಲ್ಲಿ ತೊ ತುಮ್ಹರೋ ದಾ ಸಜನು ಮಜನುಮರೆ ಎಂಬ ಕೃತಿ ಕೇಳುಗರಲ್ಲಿ ಕರುಣರಸವನ್ನು ತುಂಬಿಕೊಂಡು ಅವರಲ್ಲಿ ಸಾಕ್ಷಿಪ್ರಜ್ಞೆಯನ್ನು ಮೂಡಿಸಿತು. ಇದು ಕಾದಂಬರಿಯ ಪ್ರಮುಖ ಸ್ತ್ರೀಪಾತ್ರ ಮಧುಮಿತಾ ತನ್ನ ಆತ್ಮವಿಮರ್ಶೆ ಮಾಡುವ ಭಾವಕ್ಕೆ ಪೂರಕವಾದದ್ದು. ನಂತರದ ಆಲಾಪಿಸಿದಷ್ಟೂ ಹರವಾದ ವಿಸ್ತಾರವನ್ನು ನೀಡುವ ದುರ್ಗಾ ರಾಗದ ದೇವಿ ಭಜೋ ದುರುಗಾ ಭವಾನಿ ಕೇಳುಗರನ್ನು ಭಕ್ತಿಪರವಶತೆಯ ಆಳದಲ್ಲಿ ಮುಳುಗಿಸಿತು.
     ಮಂದ್ರ ಕಾದಂಬರಿಯ ನಾಯಕಿ ಮಧುಮಿತಾಳ ಲಾಲಿತ್ಯ, ರೂಪ, ಲಾವಣ್ಯ, ಹೆಣ್ತನಗಳನ್ನು ಮೋಹನ್‍ಲಾಲ್ ಸಂಪೂರ್ಣ ರಾಗ ಶುದ್ಧಕಲ್ಯಾಣ್‍ಗೆ ಹೋಲಿಸುತ್ತಾನೆ. ಶುದ್ಧಕಲ್ಯಾಣ್ ರಾಗ ಕಛೇರಿಯ ಸಂದರ್ಭದಲ್ಲಿ ತನ್ನ ಮಾಧುರ್ಯ, ಗಾಂಭಿರ್ಯ, ಲಜ್ಜಾಭಾವಗಳಿಂದ ಅಪೂರ್ವವಾಗಿ ಮೂಡಿಬಂತು. ಗಾಯಕ ಫಯಾಜ್‍ಖಾನ್‍ರ ಕಂಠದಲ್ಲಿ ಶುದ್ಧಕಲ್ಯಾಣ್ ರಾಗ ಶೃಂಗಾರಗೊಂಡು ಲಜ್ಜೆಯಿಂದ ಹೆಜ್ಜೆಯ ಮೇಲೆ ಹೆಜ್ಜೆಯಿರಿಸಿ ಬಂದ ನವವಧುವಿನಂತೆ, ರೂಪ ಲಾವಣ್ಯದ ಸೊಗಸಿನೊಂದಿಗೆ ಕೇಳುಗರ ಹೃದಯವನ್ನು ಆವರಿಸಿತು. ಮೊಂದರ್ ಬಾಜೋ ಎಂಬ ಕೃತಿಯ ಮೂಲಕ ಪ್ರಶಾಂತವಾಗಿ ಹರಿಯುವ ನದಿಯಂತೆ ನಿಸ್ಸೀಮ ಶಾಂತದೊಂದಿಗೆ ಶುದ್ಧಕಲ್ಯಾಣ್ ರಾಗವು ಕಳೆಗಟ್ಟಿತು.
     ಮಂದ್ರದ ಮತ್ತೊಂದು ಪ್ರಮುಖ ಸ್ತ್ರೀಪಾತ್ರ ಅಪೂರ್ವಸುಂದರಿ, ನೃತ್ಯಲಲನೆ ಮನೋಹರಿದಾಸಳನ್ನು ಹೋಲುವ ರಾಗ ಬಾಗೇಶ್ರೀ. ಕಛೇರಿಯಲ್ಲಿ ಫಯಾಜ್ ಖಾನರು ಪ್ರಸ್ತುತ ಪಡಿಸಿದ ಬಾಗೇಶ್ರೀ ರಾಗದ ಗುಂದಲ್ ರೇ ಮಾಲನಿಯಾ ನೃತ್ಯೋಚಿತವಾದ ಕೃತಿ ಹಾಗೂ ತನ್ನ ಬಾಗು ಬಳುಕು ಒನಪು ಒಯ್ಯಾರದ ಲಯಕಾರಿ ನಡೆಯಿಂದ ಚಂಚಲ ಮನಸ್ಸಿನ ಮನೋಹರಿದಾಸಳ ಪ್ರತೀಕದಂತಿತ್ತು. ಇಲ್ಲಿ ರವೀಂದ್ರ ಕಾಟೋಟಿಯವರ ಹಾರ್ಮೊನಿಯಂ ಮತ್ತು ಪಂಡಿತ್ ಗುರುಮೂರ್ತಿ ವೈದ್ಯರ ತಬ್ಲಾ ಸಾಥಿ ಅಪೂರ್ವವಾಗಿತ್ತು.

      ರಂಗ್ ರಲಿಯಾ ಎಂಬ ಕೃತಿಯೊಂದಿಗೆ ಪ್ರಸ್ತುತಗೊಂಡ ಮಾಲ್‍ಕೌಂಸ್ ರಾಗಭಾವವು ನಿರೂಪಕ ಆರ್. ಗಣೇಶರವರ ಪ್ರಕಾರ ಲೋಲಕದ ಓಲಾಟದಂತೆ, ಉಯ್ಯಾಲೆಯಲ್ಲಿ ಜೀಕುವಂತೆ. ಈ ಮಾತಿನ ಮೂರ್ತರೂಪದಂತೆ ಕೇಳುಗರು ಮಾಲ್ ಕೌಂಸ್ ರಾಗದ ತುಯ್ದಾಟ, ಹೊಯ್ದಾಟಗಳಿಗೆ ತೂಗಿ ತೊನೆದಾಡಿದರು.
      ವಿರಹಕ್ಕೆ, ಗಾಂಭಿರ್ಯಕ್ಕೆ, ಹೃದಯ ವೇದನೆಗೆ ಹೆಸರಾದ ಘನಗಾಂಭೀರ್ಯದ ಗಂಡುದನಿಗೆ ಹೇಳಿಮಾಡಿಸಿದಂಥ ದರ್ಬಾರಿ ರಾಗವು ಮುಂದೆ ಪ್ರಸ್ತುತಗೊಂಡಿತು. ಬಳಿಕ ಮಂದ್ರ ಕಾದಂಬರಿಯ ಮತ್ತೊಂದು ಪ್ರಮುಖ ಸ್ತ್ರೀಪಾತ್ರ ಲಾರೆನ್ ಸ್ಮಿತ್ ಎಂಬ ವಿದೇಶಿ ಮಹಿಳೆಯ ಪ್ರತಿರೂಪದಂತಿರುವ ರಾಗ ಭೂಪಾಲಿ ಪ್ರಸ್ತುತಗೊಂಡಿತು. ಭೋರ್ಗರೆಯು ಸಮುದ್ರ ದಂತಿರುವ ಭೂಪಾಲಿಯ ನಾದಮಾಧುರ್ಯ, ಸ್ವರಗಳ ಸುಖಮಯ ಸಂಚಾರ ಉಸ್ತಾದ್ ಫಯಾಜ್ ಖಾನರ ಕಂಚಿನ ಕಂಠ ದಲ್ಲಿ ಬಲು ಸೊಗಸಾಗಿ ಶೋಭೆಗೊಂಡಿತು.
       ಕಛೇರಿಯ ಮಂಗಳ ರೂಪವಾಗಿ ಮೂಡಿ ಬಂದ ಕೃತಿ ಭೈರವಿಯನ್ನು ಭೈರಪ್ಪನವರು ಮೋಹನಲಾಲನ ಮಡದಿ, ಸಂಗೀತ ಜ್ಞಾನವೇ ಇಲ್ಲದ ಹಳ್ಳಿ ಹೆಂಗಸು ರಾಮ್‍ಕುಮಾರಿಗೆ ಹೋಲಿಸುತ್ತಾರೆ. ಕಛೇರಿಯಲ್ಲಿ ಜೋಗಿ ಮತ್ ಜಾ ಎಂಬ ಮೀರಾ ಭಜನ್ ಅತ್ಯದ್ಭುತವಾಗಿ ಮೂಡಿಬಂತು. ಇಲ್ಲಿ ಬರುವ ರಾಧೆಯ ಉತ್ಕಟ ಪ್ರೇಮ ವಿಲಾಪದ ಸರ್ವ ಸಮರ್ಪಣಾ ಭಾವವಂತೂ ಅನನ್ಯ. ಫಯಾಜ್‍ಖಾನರ ಕಂಠದಲ್ಲಿ ಭೈರವಿಯ ಕರುಣೆ, ವಿರಹ, ಆರ್ತತೆ, ಭಕ್ತಿ, ಸಮರ್ಪಣೆಗಳ ಭಾವ ಶೋತೃಗಳನ್ನು ನಿಧಾನವಾಗಿ ಆವರಿಸಿ ಕೊನೆಗೆ ಆಲಾಪ ತಾನಗಳ ಭಾವ ತೀವ್ರತೆಯಿಂದ ಮುಳುಗಿಸಿಬಿಟ್ಟಿತು.

       ಪೂರಿಯಾದ ವಿಷಾದ, ಮಾರೂಬಿಹಾಗ್ ರಾಗದ ಸುಕುಮಾರ್ಯ ಕೋಮಲತೆ, ಕೋಮಲ್ ರಿಷಭ್ ಅಸಾವರಿಯ ಆತ್ಮಶೋಧನೆ, ದುರ್ಗಾರಾಗದ ಭಕ್ತಿ ಪರವಶತೆ, ಶುದ್ಧಕಲ್ಯಾಣ್ ರಾಗದ ಲಜ್ಜಾಭಾವ, ಬಾಗೇಶ್ರೀಯ ಲಯಲಾಸ್ಯ, ಮಾಲ್ ಕೌಂಸ್‍ನ ಮೃದುಮಾಧುರ್ಯ, ಭೈರವಿಯ ಆರ್ತತೆ, ವಿರಹ ಹೇಗೆ ಹಲವು ರಾಗಗಳ ಭಾವ ಸಾರಗಳನ್ನು ಉಸ್ತಾದ್ ಫಯಾಜ್ ಖಾನರು ಕಛೇರಿಯಲ್ಲಿ ಅದ್ಭುತವಾಗಿ ಪ್ರಸ್ತುತಪಡಿಸಿದರು. ನಿರೂಪಣೆಯಲ್ಲಿ ಶತಾವಧಾನಿ ಆರ. ಗಣೇಶ್‍ರವರ ವಿದ್ವತ್ಪೂರ್ಣ ಮಾತುಗಾರಿಕೆ ಸಂಗೀತ ರಸಿಕರ ಗಮನ ಸೆಳೆಯಿತು. ಸಂಸ್ಕøತ ಭೂಯಿಷ್ಟವಾದ ಶೃತಿ-ಲಯಬದ್ಧವಾದ ಅವರ ಮಾತು ಮತ್ತೆ ಮತ್ತೆ ಕೇಳುವಂತಿತ್ತು. ಮಂದ್ರ ಕಾದಂಬರಿಯನ್ನು ಅವರು ಆಳವಾಗಿ ಅಧ್ಯಯನ ಮಾಡಿದ ಕುರುಹು ಕಛೇರಿ ನಿರೂಪಣೆಯ ಸಂದರ್ಭದಲ್ಲಿ ಶ್ರುತಗೊಂಡಿತು. ಹಾರ್ಮೋನಿಯಂನಲ್ಲಿ ರವೀಂದ್ರ ಕಾಟೋಟಿ ಮತ್ತು ತಬ್ಲಾದಲ್ಲಿ ಪಂಡಿತ್ ಗುರುಮೂರ್ತಿ ವೈದ್ಯರ ಜೊತೆ ಸಾಥೀದಾರಿಕೆ ಸಖ-ಸಖಿ ಸಂಚಾರಿ ಭಾವದಂತಿತ್ತು. ಇಂಥಹ ಪ್ರಯೋಗವು ಕಾದಂಬರಿ ಓದದವರಿಗೆ ಓದುವಂತೆ ಪ್ರೇರೇಪಿಸಿದರೆ, ಕಾದಂಬರಿ ಓದಿದವರಿಗೆ ಪುನರ್ಮನನ ಮಾಡಿಕೊಳ್ಳಲು ಸಹಾಯವಾಯಿತು.

ಚಿತ್ರಕೃಪೆ  :  ಶ್ರೀ ಅರವಿಂದ ಕುಡ್ಲ