Sunday, 11 October 2015

ಶ್ರೀ ಮುತ್ತುಸ್ವಾಮಿ ದೀಕ್ಷಿತರು ಕಂಡ ಕೈಲಾಸನಾಥ ಪರಮೇಶ್ವರ

    ಶ್ರೀ ಮುತ್ತುಸ್ವಾಮಿ ದೀಕ್ಷಿತರು ಕಂಡ ಕೈಲಾಸನಾಥ ಪರಮೇಶ್ವರ 
                ಸಂಗೀತವೆನ್ನುವುದು ಕೇವಲ ಮನೋರಂಜನೆಗಾಗಿ, ದೈಹಿಕ ಅಥವಾ ಮಾನಸಿಕ ಶಾಂತಿ, ತೃಪ್ತಿಗಾಗಿ ಮಾತ್ರ ಇರುವಂತಹದು ಎನ್ನುವುದು ತಪ್ಪು ಕಲ್ಪನೆ. ಭಗವಂತನ ಸಾಕ್ಷಾತ್ಕಾರಕ್ಕೆ ಪೂಜೆ, ಜಪ, ತಪಸ್ಸು, ಧ್ಯಾನದಂತೆ ಸಂಗೀತವೂ ಒಂದು ಸಾಧನ. ಈ ರೀತಿ ನಾದಸಾಧನೆಯ ಮೂಲಕ ಭಗವಂತನ ನಾಮಸಂಕೀರ್ತನೆಯನ್ನು ಮಾಡಬಹುದೆಂಬ ಮಾರ್ಗೋಪಾಯವನ್ನು ಈ ಹಿಂದೆ ಬದುಕಿ ಬಾಳಿದ ಈಗ ಕೀರ್ತಿಶೇಷರಾಗಿರುವ ಹಲವಾರು ನಾದೋಪಾಸಕರು ತಮ್ಮ ಕೃತಿಗಳ ಮೂಲಕ ಶ್ರುತಪಡಿಸಿದ್ದಾರೆ.
                ಅಂಥಹ ನಾದೋಪಾಸಕರಲ್ಲಿ ಸುಮಾರು ಹದಿನೆಂಟನೇ ಶತಮಾನದಲ್ಲಿ ಬಾಳಿ ಬದುಕಿದ ಕರ್ನಾಟಕ ಸಂಗೀತ ತ್ರಿಮೂರ್ತಿಗಳೊಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರೂ ಒಬ್ಬರು. ಮಹಾನ್ ವಿರಕ್ತರೂ, ಎಂದೂ ನರಮನುಷ್ಯರನ್ನು ಸ್ತುತಿಮಾಡದವರಾದ ದೀಕ್ಷಿತರು ಭಗವದ್ಭಕ್ತಿಯಲ್ಲಿಯೇ ಸಾಯುಜ್ಯ ಕಂಡವರು. ದೀಕ್ಷಿತರು ತಮ್ಮ ನಿತ್ಯಪೂಜೆಗೆ ಉಪಯೋಗಿ ಸುತ್ತಿದ್ದುದು ಸೋಮಾಸ್ಕಂದಪಾರ್ವತೀ ಮೂರ್ತಿಯನ್ನು ಅಂದರೆ ಈಶ್ವರ-ಸುಬ್ರಹ್ಮಣ್ಯನ ಸಮೇತ ಪಾರ್ವತೀ ವಿಗ್ರಹವನ್ನು ಹಾಗೆಯೇ ಇವರ ಇಷ್ಟದೈವ ಸುಬ್ರಹ್ಮಣ್ಯಸ್ವಾಮಿ. ಆದರೂ  ಯಾವೂದೇ ಬೇಧ-ಭಾವವಿಲ್ಲದೇ ಎಲ್ಲಾ ದೇವಾನುದೇವತೆಯರ ಕುರಿತು ಕೃತಿ ರಚಿಸಿದ್ದಾರೆ. ಸಂಖ್ಯೆಯ ಲೆಕ್ಕ ದಲ್ಲಿ ನೋಡಿದರೆ ಅತೀ ಹೆಚ್ಚು ಕೃತಿ ರಚಿಸಿದ್ದು ಶಿವ-ಶಕ್ತಿಯರ ಕುರಿತು. ಜಗದ ಆದಿದಂಪತಿಗಳು, ಜಗನ್ಮಾತಾ-ಪಿತರೂ ಆಗಿರುವ ಪಾರ್ವತೀ ಪರಮೇಶ್ವರರನ್ನು ಸಾಂಕೇತಿಕವಾಗಿ ಪಕೃತಿ-ಪುರುಷ ರೂಪದಲ್ಲಿ ನೋಡುವ ದೃಷ್ಟಿಕೋನ ನಮ್ಮಲ್ಲಿ ಚಾಲ್ತಿಯಲ್ಲಿದೆ. ದೀಕ್ಷಿತರ ಶಿವ-ಶಕ್ತಿಯರ ಕುರಿತ ಕೃತಿಗಳ ಲೆಕ್ಕಾಚಾರವನ್ನು ನೋಡಿದರೆ ಪ್ರಕೃತಿ ಪುರುಷರ ಸಮ್ಮಿಲನ ವಾದಂತೆ ಕಾಣುತ್ತದೆ. ಪ್ರಕೃತಿಗೆ ಮೊದಲಸ್ಥಾನ(ತಾಯಿಗೆ ಮೊದಲ ಪ್ರಾಶಸ್ತ್ಯ) ದೀಕ್ಷಿತರು ರಚಿಸಿದ ದೇವಿಕೃತಿಗಳು ಸುಮಾರು 169. ಪುರುಷನಿಗೆ ನಂತರದ ಸ್ಥಾನ(ತಂದೆಯ ಸ್ಥಾನ ನಂತರದ್ದು) ದೀಕ್ಷಿತರ ಶಿವಪರ ಕೃತಿಗಳು ಸುಮಾರು 130.

                   ಶ್ರೀ ತಿರುವಣ್ಣಾಮಲೈ ಅರುಣಾಚಲನಾಥಂ ಲಿಂಗಂ


                ಇರಲಿ ಈಗ ನಾವು ದೀಕ್ಷಿತರ ಶಿವಪರ ಕೃತಿಗಳನ್ನು ನೋಡಿದರೆ, ಸಾಕ್ಷಾತ್ ಮಹಾದೇವನೇ ಅವರ ಕೃತಿಗಳ ಮೂಲಕ ತಾಂಡವವಾಡುತ್ತಿದ್ದಾನೆಯೋ ಎಂಬಂತೆ ಭಾಸವಾಗುತ್ತದೆ. ಇಲ್ಲಿ ಭಕ್ತಿಯು ತುಂಬು ನಾದವಾಹಿನಿ ಯಾಗಿ ದೀಕ್ಷಿತರ ಕೃತಿಗಳ ಮೂಲಕ ಹರಿಯುವ ಕಲ್ಪನೆ ಮೂಡುತ್ತದೆ. ಒಂದೊಂದು ಕೃತಿಗಳಲ್ಲಿಯೂ ಲಿಂಗಸ್ವರೂಪಿಯಾದ ಮಹಾದೇವನ ವಿವಿಧ ಚಿತ್ರಣಗಳನ್ನು ಕೊಡುತ್ತಾರೆ. ತದೇಕಚಿತ್ತದಿಂದ ದೀಕ್ಷಿತರ ಶಿವಪರ ಕೃತಿಯನ್ನು ಆಲಿಸಿದರೆ ನಮ್ಮನ್ನು ನಾವು ಮರೆತು ಧ್ಯಾನಸ್ಥಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಯಾವ ಅನುಮಾನವೂ ಇಲ್ಲ.
                ದೀಕ್ಷಿತರ ಶಿವಪರ ಕೃತಿಗಳಲ್ಲಿ ವಿಶೇಷವೆನಿಸಿದವು ಶ್ರೀತ್ಯಾಗರಾಜ ವಿಭಕ್ತಿ ಕೃತಿಗಳು, ಪಂಚಭೂತ ಲಿಂಗ ಕೃತಿಗಳು, ತಿರುವಾರೂರು ಪಂಚಲಿಂಗ ಕೃತಿಗಳು ಪ್ರಮುಖವಾದವು.
1 ಶ್ರೀ ತ್ಯಾಗರಾಜ ವಿಭಕ್ತಿ ಕೃತಿಗಳು :
       ಈ ಕೃತಿಗುಚ್ಛವನ್ನು ಶಿವನವಾವರಣ ಕೃತಿಗಳೆಂದೂ ಕರೆಯುತ್ತಾರೆ. ತಿರೂವಾರೂರಿನ ತ್ಯಾಗರಾಜಸ್ವಾಮಿ(ಶಿವ)ಯನ್ನು ಕುರಿತ ಸ್ತುತಿಗೀತಗಳೇ ತ್ಯಾಗರಾಜ ವಿಭಕ್ತಿ ಕೃತಿಗಳು. ದೀಕ್ಷಿತರು ಈ ಕೃತಿಗಳನ್ನು ವಿಭಕ್ತಿಕೃತಿಗಳೆಂದು ಹೆಸರಿಸಿ ಸಮುದಾಯ ಕೃತಿ(ಗುಂಪು ಕೃತಿ)ಯಾಗಿಸಿ ರಚಿಸಿದ್ದಾರೆ.  ಸಂಸ್ಕøತ ಭೂಯಿಷ್ಟವಾದ ಶ್ರೀತ್ಯಾಗರಾಜ ವಿಭಕ್ತಿ ಕೃತಿಗಳು ದೀಕ್ಷಿತರ ಇತರ ಶಿವಪರ ಕೃತಿಗಳಿಗಿಂತ ಕ್ಲಿಷ್ಟಶೈಲಿಯಲ್ಲಿವೆ. ಆದರೂ ಇಲ್ಲಿಯ ಅಲಂಕಾರ, ಆದಿ-ಅಂತ್ಯ ಪ್ರಾಸಗಳು, ಉತ್ಕøಷ್ಟವಾದ ಪದಪುಂಜಗಳನ್ನು ಬಳಸಿ ರಚಿಸಿದ ರಚನಾ ಕೌಶಲ್ಯ ಹಾಗೂ ಅತೀ ಮುಖ್ಯವಾಗಿ ಪರಮೇಶ್ವರನ ಗಂಭೀರ ಭಾವಕ್ಕೆ ಸರಿಯಾಗಿ ಇಲ್ಲಿಯ ಕೃತಿಗಳಲ್ಲಿ ಮಡುಗಟ್ಟಿದಂತಿರುವ ಘನಗಂಭೀರ ಛಾಯೆ, ಸಾಹಿತ್ಯದ ಬಿಗಿ, ಸಂಗೀತದ ನಿಕಟತೆ, ಭಕ್ತಿಯ ಗಾಢಭಾವ ವಂತೂ ವಿದ್ವದ್‍ರಸಿಕರ ಮನಮುಟ್ಟುವಂತಿದೆ. ಆದರೂ ಈ ಕೃತಿಗಳು ಕಛೇರಿಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿ ಇಲ್ಲ ಎನ್ನುವುದೇ ವಿಷಾದನೀಯ. ಶ್ರೀತ್ಯಾಗರಾಜ ವಿಭಕ್ತಿ ಕೃತಿಗಳ ವಿವರ ಇಂತಿವೆ.






ಪ್ರಥಮ ವಿಭಕ್ತಿ ಕೃತಿ
ತ್ಯಾಗರಾಜೋ ವಿರಾಜತೇ
ಅಠಾಣ
ರೂಪಕ ತಾಳ 
ದ್ವಿತೀಯ ವಿಭಕ್ತಿ ಕೃತಿ
ತ್ಯಾಗರಾಜಂ ಭಜರೇರೇ ಚಿತ್ತ
ಯದುಕುಲ ಕಾಂಭೋಜಿ
ಛಾಪು ತಾಳ
ತೃತೀಯ ವಿಭಕ್ತಿ ಕೃತಿ
ತ್ಯಾಗರಾಜೇನ ಸಂರಕ್ಷಿತೋಹಂ
ಸಾಳಗ ಭೈರವಿ
ಆದಿತಾಳ
ಚತುರ್ಥ ವಿಭಕ್ತಿ ಕೃತಿ
ತ್ಯಾಗರಾಜಾಯ ನಮಸ್ತೇ ನಮಸ್ತೇ
ಬೇಗಡೆ
ರೂಪಕ ತಾಳ 
ಪಂಚಮಿ ವಿಭಕ್ತಿ ಕೃತಿ
ತ್ಯಾಗರಾಜಾದನ್ಯಂ ನಜಾನೇ
ದರ್ಬಾರ್
ಆದಿತಾಳ
ಷಷ್ಠಿ ವಿಭಕ್ತಿ ಕೃತಿ
ತ್ಯಾಗರಾಜಸ್ಯ ಭಕ್ತೋಭವಾಮಿ
ರುದ್ರಪ್ರಿಯ
ಛಾಪು ತಾಳ
ಸಪ್ತಮಿ ವಿಭಕ್ತಿ ಕೃತಿ
ತ್ಯಾಗರಾಜೇ ಕೃತ್ಯಾಕೃತ್ಯಮರ್ಪಯಾಮಿ
ಸಾರಂಗ
ಝಂಪೆ ತಾಳ
ಸಂಭೋದನಾ ವಿಭಕ್ತಿ ಕೃತಿ
ವೀರವಸಂತ ತ್ಯಾಗರಾಜ
ವೀರವಸಂತ
ಆದಿತಾಳ


                ಶ್ರೀ ಚಿದಂಬರಪುರಂ ಚಿದಂಬರಪುರೀಶ್ವರಂ(ನಟರಾಜ) ಲಿಂಗಂ s


ಈ ಮೇಲಿನ ಕೃತಿಗಳಲ್ಲದೆ ಶ್ರೀತ್ಯಾಗರಾಜ ಸ್ವಾಮಿಯನ್ನು ಕುರಿತು ಶ್ರೀರಾಗ (ಆದಿತಾಳ)ದಲ್ಲಿ ‘ತ್ಯಾಗರಾಜ ಮಹಧ್ವಜರೋಹ’ , ನೀಲಾಂಬರಿ ರಾಗ(ರೂಪಕ ತಾಳ)ದಲ್ಲಿ ‘ತ್ಯಾಗರಾಜಂ ಭಜೇಹಂ ಸತತಂ’ , ರುದ್ರಪ್ರಿಯ ರಾಗ(ಆದಿ ತಾಳ)ದಲ್ಲಿ ‘ತ್ಯಾಗೇಶಂ ಭಜರೇ ರೇಮಾನಸ’ , ಗೌಳ ರಾಗ(ಆದಿತಾಳ)ದಲ್ಲಿ ‘ತ್ಯಾಗರಾಜ ಪಾಲಯಶು ಮಾಂ’ , ಆನಂದ ಭೈರವಿ ರಾಗ(ರೂಪಕ ತಾಳ)ದಲ್ಲಿ ‘ತ್ಯಾಗರಾಜ ಯೋಗವೈಭವಂ ಸದಾಶಿವಂ’  ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
                      ಸಂಗೀತದಷ್ಟೇ ಸಾಹಿತ್ಯವನ್ನು ಪೋಷಿಸುವುದು ದೀಕ್ಷಿತರ ಪರಿಪಾಠ. ಇದನ್ನು ದೀಕ್ಷಿತರ ಹೆಚ್ಚಿನ ಕೃತಿಗಳಲ್ಲಿ ಕಾಣಬಹುದು. ಉದಾ: ತ್ಯಾಗಾರಾಜ ಯೋಗ ವೈಭವಂ(ಆನಂದ ಭೈರವಿ ರಾಗ) ಕೃತಿಯಲ್ಲಿ ಗೋಪುಚ್ಛ ಮತ್ತು ಶ್ರೋತೋವಾಹ ಅಲಂಕಾರಗಳನ್ನು ಬಳಸಿದ್ದಾರೆ. ಗೋಪುಚ್ಛಯತಿಯಲ್ಲಿ ಅಕ್ಷರಗಳು ಏಕಪ್ರಕಾರವಾಗಿ ಕಡಿಮೆಯಾಗುತ್ತಾ ಬರುತ್ತದೆ.  ಪಲ್ಲವಿಯ ಸಾಹಿತ್ಯ ಇಂತಿವೆ:-
ತ್ಯಾಗರಾಜ ಯೋಗ ವೈಭವಂ , ಅಗರಾಜ ಯೋಗ ವೈಭವಂ , ರಾಜ ಯೋಗ ವೈಭವಂ , ಯೋಗ ವೈಭವಂ , ವೈಭವಂ , ಭವಂ , ವಂ                                                                                      ಅದೇ ಕೃತಿಯ ಚರಣದಲ್ಲಿರುವ ಶ್ರೋತೋವಾಹ ಯತಿ ಪ್ರಯೋಗದಲ್ಲಿ ಅಕ್ಷರಗಳು ಕ್ರಮವಾಗಿ ಹೆಚ್ಚಾಗುತ್ತಾ ಹೋಗುತ್ತದೆ. ಆ ಸಾಲುಗಳು ಇಂತಿವೆ: -
ಶಂ , ಪ್ರಕಾಶಂ , ಸ್ವರೂಪ ಪ್ರಕಾಶಂ , ತತ್ವಸ್ವರೂಪ ಪ್ರಕಾಶಂ , ಸಕಲ ತತ್ವಸ್ವರೂಪ ಪ್ರಕಾಶಂ , ಶಕ್ತ್ಯಾದಿ ಸಕಲ ತತ್ವ ಸ್ವರೂಪ ಪ್ರಕಾಶಂ , ಶಿವ ಶಕ್ತ್ಯಾದಿ ಸಕಲ ತತ್ವಸ್ವರೂಪ ಪ್ರಕಾಶಂ
ಹೀಗೆ ದೀಕ್ಷಿತರು ಯಾವುದೇ ಕೃತಿ ರಚಿಸಿದಾಗಲೂ ಏನಾದರೊಂದು ಯೋಜನೆ ಅಥವಾ ವಿಶೇಷವೊಂದು ಇರುತ್ತದೆ. ಹಾಗಾಗಿಯೇ ಏನೋ ಕಲಾರಸಿಕರು ಹೇಳುವುದುಂಟು ದೀಕ್ಷಿತರ ಕೃತಿಗಳು ಪಾಮರರಿಗಲ್ಲ ಪಂಡಿತರಿಗೆ. ಆದರೆ ದೀಕ್ಷಿತರು ಇದ್ಯಾವುದರ ಪರಿವಿಲ್ಲದೆ ದೃಢಭಕ್ತಿಯಿಂದ ಕೃತಿ ರಚಿಸಿದ್ದು ಕೃತಿಗಳಲ್ಲಿ ಅಡಗಿರುವ ಗಾಢಭಕ್ತಿ ಭಾವದಿಂದ ಎದ್ದು ಕಾಣುತ್ತದೆ.

                  ಶ್ರೀ ತಿರುವನೈಕಾವಲ್ ಜಂಬುಕೇಶ್ವರಂ ಲಿಂಗಂ
2 ಪಂಚಭೂತ ಲಿಂಗ ಕೃತಿಗಳು :
                   ಶಿವನನ್ನು ಭೂತಗಳ ಅಧಿಪತಿ ಎನ್ನುವುದುಂಟು. ಹಾಗೆಯೇ ಪಂಚಭೂತಗಳು ಅವನ ಅಧೀನಕ್ಕೊಳಪಟ್ಟವು. ಹಾಗಾಗಿಯೇ ತಿಳಿದವರು ಹೇಳುವುದುಂಟು ಈ ಜಗವು ಶಿವಮಯವು ಎಂದು. ಈ ಒಂದು ತತ್ವವನ್ನು ಪ್ರತಿಪಾದಿಸುವ ಐದುಲಿಂಗಗಳೇ ಕಾಂಚೀಪುರದಲ್ಲಿರುವ ಪೃಥ್ವೀಲಿಂಗ , ತಿರುವನೈ ಕಾವಲ್‍ನಲ್ಲಿರುವ ಅಪ್ಪು(ಜಲ)ಲಿಂಗ , ತಿರುವಣ್ಣಾಮಲೈಯಲ್ಲಿರುವ ತೇಜೋ(ಅಗ್ನಿ)ಲಿಂಗ , ಕಾಳಹಸ್ತಿಲ್ಲಿರುವ ವಾಯುಲಿಂಗ, ಚಿದಂಬರಂನಲ್ಲಿರುವ ಆಕಾಶ ಲಿಂಗ ಹೀಗೆ ಈ ಐದು ಲಿಂಗಗಳನ್ನು ಸ್ತುತಿಸಿ ದೀಕ್ಷಿತರು ರಚಸಿದ ಕೃತಿಗಳೇ ಪಂಚಭೂತಲಿಂಗಸ್ಥಳ ಕೃತಿಗಳು. ಈ ಕೃತಿಗಳಲ್ಲಿ ವಿಶೇಷವಾಗಿ ಲಿಂಗಮುದ್ರೆ, ಕ್ಷೇತ್ರಮುದ್ರೆ, ರಾಗಮುದ್ರೆ ಹಾಗೂ ವಾಗ್ಗೇಯಕಾರ ಮುದ್ರೆಗಳನ್ನು ಜಾಣ್ಮೆಯಿಂದ ಕೃತಿಯಲ್ಲಿ ಪೋಣಿಸಿದ್ದು ದೀಕ್ಷಿತರ ಸಾಹಿತ್ಯ ಪ್ರೌಢಿಮೆಗೆ ಮತ್ತು ಪೂರ್ವಯೋಜನಾ ಕೌಶಲ್ಯಕ್ಕೆ ಸಾಕ್ಷಿ.
ಪಂಚಲಿಂಗಸ್ಥಳ ಕೃತಿಗಳು ಇಂತಿವೆ:-

      ಕೃತಿ
 ರಾಗ
 ತಾಳ

     ಕ್ಷೇತ್ರ ಮುದ್ರೆ
ಲಿಂಗ ಮುದ್ರೆ
ಜಂಬೂಪತೇ ಮಾಂ ಪಾಹಿ
ಯಮನ್ ಕಲ್ಯಾಣಿÂ
ರೂಪಕ
ತಿರುವನೈಕಾವಲ್ ಜಂಬುಕೇಶ್ವರ
ಅಪ್ಪು ಲಿಂಗಂ
ಅರುಣಾಚಲನಾಥಂ ಸ್ಮರಾಮಿ
ಸಾರಂಗ
ರೂಪಕ
ತಿರುವಣ್ಣಾಮಲೈ ಅರುಣಾಚಲನಾಥ
ತೇಜೊ ಲಿಂಗಂ
ಶ್ರೀ ಕಾಳಹಸ್ತೀಶ ಶ್ರಿತಜನಾವನ
ಹುಸೇನಿ
ಝಂಪೆ
ಕಾಳಹಸ್ತಿ ಶ್ರೀಕಾಳಹಸ್ತೀಶ್ವರ
ವಾಯು ಲಿಂಗ
ಆನಂದ ನಟನ ಪ್ರಕಾಶಂ
ಕೇದಾರ
ಛಾಪು
ಚಿದಂಬರಂ ನಟರಾಜ
ಆಕಾಶ ಲಿಂಗಂ
ಚಿಂತಯ ಮಾಕಂದ ಮೂಲಕಂದ
ಭೈರವಿ
ರೂಪಕ
ಕಾಂಚಿಪುರಂ ಏಕಾಮ್ರನಾಥ
ಪ್ರಥ್ವೀ ಲಿಂಗ

3 ತಿರುವಾರೂರು ಪಂಚಲಿಂಗ ಕೃತಿಗಳು :-
                         ದೀಕ್ಷಿತರ ತಿರುವಾರೂರಿನ ಶ್ರೀತ್ಯಾಗರಾಜ ಸ್ವಾಮಿಯ ಕೃತಿಗಳ ಬಗ್ಗೆ ಈ ಮೇಲೆ ನೋಡಿದ್ದೇವೆ. ಈಗ ಅದೇ ದೇವಾಸ್ಥಾನದ ಪ್ರಾಕಾರದೊಳಗಿರುವ ಐದು ಗುಡಿಯಲ್ಲಿರುವ ಶಿವಲಿಂಗದ ಬಗ್ಗೆ ದೀಕ್ಷಿತರು ರಚಿಸಿರುವ ಕೃತಿಗಳನ್ನು ನೋಡೋಣ.

ಸದಾಚಲೇಶ್ವರಂ ಭಾವಯೇಹಂ
ಭೂಪಾಳ
ಆದಿತಾಳ
ಅಚಲೇಶ್ವರಂ
ಹಾಟಕೇಶ್ವರ ಸಂರಕ್ಷಮಾಂ
ಬಿಲಹರಿ
ರೂಪಕತಾಳ
ಹಾಟಕೇಶ್ವರಂ
ಶ್ರೀ ವಲ್ಮೀಕಲಿಂಗಂ ಚಿಂತಯೇ
ಕಾಂಭೋಜಿ
ಅಟತಾಳ
ವಲ್ಮೀಕೇಶ್ವರಂ
ಆನಂದೇಶ್ವರೇಣ ಸಂರಕ್ಷಿತೋಹಂ
ಆನಂದ ಭೈರವಿ
ಛಾಪುತಾಳ
ಆನಂದೇಶ್ವರಂ
ಸಿದ್ಧೇಶ್ವರರಾ ನಮಸ್ತೇ
ನೀಲಾಂಬರಿ
ಛಾಪುತಾಳ
ಸಿದ್ಧೇಶ್ವರಂ

                     ಶ್ರೀ ಕಾಂಚೀಪುರಂ ಏಕಾಮ್ರೇಶ್ವರಂ ಲಿಂಗಂ


ದೀಕ್ಷಿತರ ಇತರ ಕ್ಷೇತ್ರ ಕೃತಿಗಳು ಹಾಗೂ ಶಿವಪರ ಕೃತಿಗಳು ಇಂತಿವೆ :-
ತಂಜಾವೂರಿನ ಬೃಹದೀಶ್ವರ ಕುರಿತು 9ಕೃತಿಗಳು, ಕಾಶಿ ವಿಶ್ವೇಶ್ವರನ ಕುರಿತು 5ಕೃತಿಗಳು, ಮಧುರೈ ಸುಂದರೇಶ್ವರನ ಕುರಿತು 6 ಕೃತಿಗಳು, ಕಾಂಚೀಪುರದ ಏಕಾಮ್ರನಾಥನ ಕುರಿತು 5ಕೃತಿಗಳು,  ಶ್ರೀನಗರದ ನಾಗಲಿಂಗನ ಕುರಿತು 2ಕೃತಿಗಳು, ಮಧ್ಯಾರ್ಜುನದ ಮಹಾಲಿಂಗನ ಕುರಿತು 2ಕೃತಿಗಳು, ನೇಪಾಳದ ಪಶುಪತಿನಾಥನ ಕುರಿತು 1ಕೃತಿ, ಇದಲ್ಲದೆ ಶ್ರೀ ದಕ್ಷಿಣಾಮೂರ್ತಿ, ಶ್ರೀವಟುಕನಾಥ, ನೀಲಕಂಠ, ನೀಲಾಚಲ ನಾಥ, ವೇದಾರಣ್ಯೇಶ್ವರ, ಮರಕತಲಿಂಗ, ಗೋಕರ್ಣೇಶ್ವರ, ಅಗಸ್ತೀಶ್ವರ, ಶಾಲಿವಾಟೀಶ್ವರ, ಮಾರ್ಗಸಹಾಯೇಶ್ವರ , ಅರ್ಧನಾರೀಶ್ವರ, ಶೈಲೇಶ್ವರ, ಶ್ರೀವೈದ್ಯನಾಥ ಮುಂತಾದ ಶಿವಲಿಂಗದ ಕುರಿತು ಕೃತಿರಚಿಸಿದ್ದಾರೆ. ಇದಲ್ಲದೆ ಕಾಶಿಯ ಕ್ಷೇತ್ರಪಾಲ ಕಾಲಭೈರವನ ಕುರಿತು ಭೈರವರಾಗದಲ್ಲಿ ಕೃತಿ ರಚಿಸಿದ್ದಾರೆ. ಹೀಗೆ ದೀಕ್ಷಿತರು ರಚಿಸಿದ ಶಿವಪರ ಕೃತಿಗಳ ಸಂಖ್ಯೆ ಸುಮಾರು 130.
ದೀಕ್ಷಿತರ ಶಿವಪರ ಕೃತಿಗಳು ಮತ್ತು ರಾಗಗಳು:-
                          ಇನ್ನು ದೀಕ್ಷಿತರ ಶಿವಪರ ಕೃತಿಗಳ ರಾಗಗಳನ್ನು ನೋಡಿದರೆ ಅತೀ ಹೆಚ್ಚಾಗಿ ಬಳಕೆಯಾದ ರಾಗ ಶಂಕರಾಭರಣ. ಈ ರಾಗದಲ್ಲಿ ದೀಕ್ಷಿತರು ಸುಮಾರು 13ಶಿವನ ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ಜನ್ಯರಾಗಗಳಲ್ಲಿ ಅತಿ ಹೆಚ್ಚಿನ ರಾಗಗಳು ಶಂಕರಾಭರಣ ರಾಗದಿಂದ ಜನಿತಗೊಂಡವು, ಅಂದರೆ ಸುಮಾರು ಸರಿ ಸುಮಾರು 15ರಾಗಗಳು ಶಂಕರಾಭರಣ ರಾಗದ ಜನ್ಯರಾಗಗಳು.  ಈ ನಿಟ್ಟಿನಲ್ಲಿ ನೋಡಿದರೆ ದೀಕ್ಷಿತರು ಶಿವಕೃತಿಗಳಿಗೆ ಅತೀ ಹೆಚ್ಚು ಬಳಸಿದ್ದು ಶಂಕರಾಭರಣ ರಾಗ.  ಇನ್ನು ಉಳಿದಂತೆ ಶಿವನಿಗೆ ಹತ್ತಿರವಾದ ರಾಗಗಳೆಂದರೆ ಕೇದಾರ ಮತ್ತು ರುದ್ರಪ್ರಿಯ ರಾಗಗಳಲ್ಲಿ ತಲಾ ಎರಡೆರಡು ಕೃತಿಗಳನ್ನು ರಚಿಸಿದ್ದಾರೆ. ಇನ್ನು ಆನಂದ ಭೈರವಿ, ಕಾಂಭೋಜಿ, ದೇವಗಾಂಧಾರ,ತೋಡಿ, ಸುರಟಿ,ಭೈರವಿ,ಶ್ರೀರಾಗ,ದರ್ಬಾರ್, ವಸಂತ, ಧನ್ಯಾಸಿ,ಬೇಗಡೆ ಮುಂತಾದ ಜನಪ್ರಿಯ ರಾಗಗಳಲ್ಲದೆ ನಾಗಾಭರಣ,ಭೈರವ, ಶಿವಪಂತುವರಾಳಿ,ಭೂಪಾಳ, ಸಾರಂಗ, ನಾಗಧ್ವನಿ,ನಾರಾಯಣ ದೇಶಾಕ್ಷಿ,ನಿಷಧ,ಜೀವಂತಿಕಾ,ಸಿಂಧುರಾಮಕ್ರಿಯಾ ಹೀಗೆ ಹಲವು ಅಪರೂಪದ ರಾಗಗಳನ್ನು ಬಳಸಿ ಶಿವಪರ ಕೃತಿಗಳನ್ನು ರಚಿಸಿದ್ದಾರೆ.     

                         ಹಾಗೆಯೇ ದೀಕ್ಷಿತರು ಶಿವಪರ ಕೃತಿಗಳಿಗೆ ಬಳಸಿಕೊಂಡ ಜನಕರಾಗಗಳು ಸುಮಾರು ಇಪ್ಪತ್ತು. ಇವುಗಳಲ್ಲಿ ತೋಡಿ ಮತ್ತು ಶಂಕರಾಭರಣ ಸಂಪೂರ್ಣ ಮೇಳ ಪದ್ಧತಿಯಾದರೆ ಮಿಕ್ಕಿ ಉಳಿದ ಹದಿನೆಂಟು ರಾಗಗಳು ಅಸಂಪೂರ್ಣ ಮೇಳ ಪದ್ಧತಿ ಮತ್ತು ವಿವಾದಿ ಮೇಳಗಳಾಗಿವೆ.                                            
                                ಶ್ರೀ ಕಾಳಹಸ್ತೀ ಕಾಳಹಸ್ತೀಶ್ವರಂ ಲಿಂಗಂ
                 
             
ಕ್ಷೇತ್ರಮುದ್ರೆ:-
                          ದೀಕ್ಷಿತರ ಶಿವಕೃತಿಗಳಲ್ಲಿ ಅತೀ ಹೆಚ್ಚಿನವು ಕ್ಷೇತ್ರಕೃತಿಗಳು. ಅಂದರೆ ದೀಕ್ಷಿತರು ತಮ್ಮ ಕ್ಷೇತ್ರ ಪರ್ಯಟನಾ ಸಂಧರ್ಭಗಳಲ್ಲಿ ಹಲವಾರು ಶಿವ ದೇವಾಲಯಗಳನ್ನು ಸಂದರ್ಶಿಸಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿಯ ಪ್ರಮುಖ ದೇವತೆಯಾದ ಶಿವನನ್ನು ಕುರಿತು ಕೃತಿ ರಚಿಸುತ್ತಿದ್ದರು. ಕೃತಿ ರಚಿಸುವ ಸಂದರ್ಭದಲ್ಲಿ ಕ್ಷೇತ್ರದ ಹೆಸರನ್ನು ಕೃತಿಯಲ್ಲಿ ಚಾಕಚಕ್ಯತೆಯಿಂದ ಸೇರಿಸುವುದು ದೀಕ್ಷಿತರ ಜಾಣ್ಮೆ. ಇಲ್ಲಿ ಕೆಲವೊಂದು ಕ್ಷೇತ್ರಮುದ್ರೆಗಳಿಗೆ ನಿದರ್ಶನ:-
1 ಪಾಲಯ ಮಾಂ ಬೃಹದೀಶ್ವರ - ನಾಯಕಿರಾಗದ ಕೃತಿಯಲ್ಲಿ , ಚರಣದ ಸಾಲಿನ- ವಿಲಸಿತ ತಂಜಪುರೀಶ್ವರ ಬೃಹನ್ನಾಯಕೀ ಮನೋಹರ ಎಂಬ ಸಾಲಿನಲ್ಲಿ ಕ್ಷೇತ್ರ ಮುದ್ರೆ ಕಾಣಬಹುದು.
2 ಹಾಟಕೇಶ್ವರ ಸಂರಕ್ಷಮಾಂ - ಬಿಲಹರಿ ರಾಗದ ಕೃತಿಯಲ್ಲಿ- ಅನುಪಲ್ಲವಿಯಲ್ಲಿ- ಹಾಟಕಕ್ಷೇತ್ರ ನಿವಾಸ ಹಂಸರೂಪ ಚಿದ್ವಿಲಾಸ ಎಂಬ ಸಾಲಿನಲ್ಲಿ ಕ್ಷೇತ್ರ ಮುದ್ರೆ ಕಾಣಬಹುದು.
3 ಸುಂದರೇಶ್ವರಾಯ ನಮಸ್ತೇ - ಶಂಕರಾಭರಣ ರಾಗದ ಕೃತಿಯಲ್ಲಿ – ಅನುಪಲ್ಲವಿಯಲ್ಲಿ – ಮಂದಸ್ಮಿತಾನನಾಯ ಮಧುರಾಪುರೀನಿಲಯಾಯ – ಎಂಬ ಸಾಲಿನಲ್ಲಿ ಕ್ಷೇತ್ರಮುದ್ರೆ ಕಾಣಬಹುದು.
4 ಏಕಾಮ್ರನಾಥೇಶ್ವರೇಣ ಸಂರಕ್ಷಿತೋಹಂ ಶ್ರೀ ಚತುರಂಗಿಣಿ ರಾಗಚರಣದಲ್ಲಿ – ಕಾಂಚೀಪುರ ವಿಲಸಿತ ಪ್ರಭಾವೇನ ಎಂಬ ಸಾಲಿನಲ್ಲಿ ಕ್ಷೇತ್ರಮುದ್ರೆ ಕಾಣಬಹುದು.
5 ಚಿದಂಬರ ನಟರಾಜ ಮೂರ್ತಿಂ ಚಿಂತಯಾಮ್ಯತನುಕೀರ್ತಿಂ ತನುಕೀರ್ತಿ ರಾಗದ ಕೃತಿಯ ಪಲ್ಲವಿಯು ಪ್ರಾರಂಭವಾಗು ವುದು ಚಿದಂಬರ ಎಂಬ ಕ್ಷೇತ್ರಮುದ್ರೆಯಿಂದಲೇ.
6 ಕಾಶಿ ವಿಶ್ವೇಶ್ವರ ಏಹಿ ಮಾಂ ಪಾಹಿ - ಎಂಬ ಕಾಂಭೋಜಿ ರಾಗದ ಕೃತಿಯೂ ಪಲ್ಲವಿಯಲ್ಲಿಯೇ ಕಾಶಿ ಎಂಬ ಕ್ಷೇತ್ರಮುದ್ರೆಯನ್ನು ಒಳಗೊಂಡಿದೆ.
7 ಚಿಂತಯೇ ಮಹಾಲಿಂಗಮೂರ್ತಿಂ – ಎಂಬ ಫರಜ್ ರಾಗದ ಕೃತಿಯ – ಅನುಪಲ್ಲವಿಯಲ್ಲಿ - ಸತತಂ ಮಧ್ಯಾರ್ಜುನಪುರವಾಸಂ ಎಂಬಲ್ಲಿ ಕ್ಷೇತ್ರ ಮುದ್ರೆ ಕಾಣಸಿಗುತ್ತದೆ.
8 ಪಶುಪತೀಶ್ವರಂ ಪ್ರಣೌಮಿ ಸತತಂ – ಎಂಬ ಶಿವಪಂತುವರಾಳಿ  ರಾಗದ ಕೃತಿಯಲ್ಲಿ – ಅನುಪಲ್ಲವಿಯ ಪಶ್ಚಿಮ ಕಾಶ್ಮೀರ (ನೇಪಾಳ) ರಾಜವಿನುತಂ ಎಂಬ ಸಾಲಿನಲ್ಲಿ ಈ ಕೃತಿಯ ಕ್ಷೇತ್ರಮುದ್ರೆಯನ್ನು ಕಾಣಬಹುದು.
9 ಕಾಯಾ ರೋಹಣೇಶಂ ಭಜರೇರೇ ಮಾನಸಕರ್ನಾಟಕ ದೇವಗಾಂಧಾರ ರಾಗದ ಕೃತಿಯಲ್ಲಿ – ಕಲಿಕಲ್ಮಷಾಪಹಂ ಶಿವರಾಜಧಾನಿ ಕ್ಷೇತ್ರಸ್ಥಿತಂ ಎಂದು ಪಲ್ಲವಿಯಲ್ಲಿಯೇ ಕ್ಷೇತ್ರಮುದ್ರೆಯಿದೆ.
10 ಶ್ರೀವೈದ್ಯನಾಥಂ ಭಜಾಮಿ ಅಠಾಣ ರಾಗದ ಕೃತಿಯಲ್ಲಿ – ಧವಳಿತ ವೈದ್ಯನಾಥಕ್ಷೇತ್ರಂ ಎಂದು ಅನುಪಲ್ಲವಿಯಲ್ಲಿ ಕ್ಷೇತ್ರಮುದ್ರೆಯಿದೆ. ಇದಲ್ಲದೆ ಇನ್ನೂ ಹಲವಾರು ಶಿವಪರಕೃತಿಗಳಲ್ಲಿ ಕ್ಷೇತ್ರಮುದ್ರೆಯನ್ನು ಕಾಣಬಹುದು.
                        ಮುಕ್ಕೋಟಿ ದೇವತೆಗಳು ನಿತ್ಯವೂ ಭಜಿಸುವ ಮುಕ್ಕಣ್ಣನಾದ ಪರಮೇಶ್ವರನನ್ನು ಕುರಿತು ತ್ಯಾಗರಾಜರಾದಿಯಾಗಿ ಮುತ್ತಯ್ಯ ಭಾಗವತರು, ಜಯಚಾಮರಾಜೇಂದ್ರ ಒಡೆಯರ್, ಮೈಸೂರು ವಾಸುದೇವಾಚಾರ್ಯ, ಪಾಪನಾಶಂ ಶಿವನ್ ಮುಂತಾದ ವಾಗ್ಗೇಯಕಾರರುಗಳೆಲ್ಲಾ ತಮ್ಮ ಶಕ್ತ್ಯಾನುಸಾರವಾಗಿ ತಾವು ರಚಿಸಿದ ಕೃತಿಗಳ ಮೂಲಕ ಹಾಡಿಹೊಗಳಿದರೂ,  ದೀಕ್ಷಿತರ ಕೃತಿಗಳು ಈ ಎಲ್ಲಾ ಕೃತಿಕಾರರ ಕೃತಿಗಳಿಗಿಂತ ವಿಭಿನ್ನವಾಗಿಯೂ ವಿಶಿಷ್ಟವಾಗಿಯೂ ನಿಲ್ಲುವ ಸಾಧ್ಯತೆಯನ್ನು ಹೊಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಬಹಳ ವಿಪರ್ಯಾಸದ ಸಂಗತಿಯೆಂದರೆ ಇಂದು ನಾವು ಕಚೇರಿಗಳಲ್ಲಿ ದೀಕ್ಷಿತರ ಶಿವಪರ ಕೃತಿಗಳನ್ನು ಕೇಳುವುದು ವಿರಳವಾಗಿದೆ. ಕೃತಿಗಳು ಕ್ಲಿಷ್ಟವೆಂದೋ ಅಥವಾ ಇನ್ಯಾವುದೋ ಕಾರಣಕ್ಕಾಗಿ ದೀಕ್ಷಿತರ ಶಿವನ ಕುರಿತ ಕೃತಿಗಳು ತೆರೆಮರೆಗೆ ಸೇರುತ್ತಿವೆ. ಈ ಬಗ್ಗೆ ಇನ್ನಾದರೂ ಯುವಕಲಾವಿದರು ಇಂಥಹ ಅಪರೂಪದ ಕೃತಿಗಳ ಕಡೆಗೆ ಗಮನಹರಿಸಿ, ಕಚೇರಿಗಳಲ್ಲಿ ಪ್ರಸ್ತುತ ಪಡಿಸಿದರೆ ದೀಕ್ಷಿತರ ಶ್ರಮ ಸಾರ್ಥಕವೆಂದೆನಿಸುತ್ತದೆ.
                        
                          || ಶಿವಾರ್ಪಣಮಸ್ತು||

ಆಧಾರ ಗ್ರಂಥಗಳು :                                                                              ಮುತ್ತುಸ್ವಾಮಿ ದೀಕ್ಷಿತರ ಸಾಹಿತ್ಯಮಂಜರಿ – ವಿದ್ವಾನ್ ಮತ್ತೂರು ಶಿವಶಂಕರ ಮೂರ್ತಿ – ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು

ಕರ್ನಾಟಕ ಸಂಗೀತ ಪಾರಿಭಾಷಿಕ ಶಬ್ದಕೋಶ ಭಾಗ 1,2 – ಡಾ ವಿ ಎಸ್ ಸಂಪತ್ಕುಮಾರಾಚಾರ್ಯ - ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ

ಕರ್ನಾಟಕ ಸಂಗೀತಕ್ಕೆ ಶ್ರೀಜಯಚಾಮರಾಜೇಂದ್ರ ಒಡೆಯರ ಕೊಡುಗೆ – ಡಾ ಸುಕನ್ಯಾ ಪ್ರಭಾಕರ್ -  ಡಿ ವಿ ಕೆ ಮೂರ್ತಿ ಪ್ರಕಾಶನ

ಸುರಹೊನ್ನೆ ಬ್ಲಾಗ್‍ನಲ್ಲಿ 2 ಕಂತುಗಳ ಮೂಲಕ 2015 ಜುಲೈ23 ಮತ್ತು 30ರಂದು ಪ್ರಕಟಗೊಂಡಿದೆ.

ಪಂಚಭೂತ ಲಿಂಗದ ಚಿತ್ರಗಳು : ಅಂತರ್ಜಾಲ ಕೃಪೆ  


  

Friday, 23 January 2015

"ಮಂದ್ರ"ಸಂಗೀತ - ಪಾತ್ರ ರಾಗ ಸಮನ್ವಯ ಸಂಗೀತ ಪ್ರಯೋಗ

‘ಮಂದ್ರ ಸಂಗೀತ’ - ಪಾತ್ರ ರಾಗ ಸಮನ್ವಯ ಸಂಗೀತ ಪ್ರಯೋಗ
  ಎರಡು ವರ್ಷದ ಹಿಂದೆ ಕನ್ನಡದ ಖ್ಯಾತ ಕಾದಂಬರಿಕಾರ ಶ್ರೀಮಾನ್ ಎಸ್ ಎಲ್ ಭೈರಪ್ಪನವರ ಮಂದ್ರ ಕಾದಂಬರಿಯು ಸಂಗೀತ ಕಛೇರಿಯಾಗಿ ಪ್ರಯೋಗಗೊಂಡಿತು. ಕನ್ನಡ ಕಾದಂಬರಿಯ ದೃಷ್ಟಿಯಲ್ಲಿ ನೋಡಿದರೆ ಇದೊಂದು ಮೈಲಿಗಲ್ಲೇ ಸರಿ. ಆ ಸಂದರ್ಭದಲ್ಲಿ ನಾನು ಬರೆದ ಲೇಖನ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಈಗ ನನ್ನ ಬ್ಲಾಗ್ ಪುನ್ನಾಗವರಾಳಿಗೆ ಅಪ್ಲೋಡ್ ಮಾಡುತ್ತಿದ್ದೇನೆ.


    ಕನ್ನಡದಲ್ಲಿ ಸಂಗೀತವನ್ನೇ ಹಿನ್ನಲೆಯಾಗಿಟ್ಟುಕೊಂಡಂಹ ಕಾದಂಬರಿಗಳು ಅದೆಷ್ಟೋ ಬಂದಿದೆ. ಭೈರಪ್ಪನವರು ಮಂದ್ರ ಕಾದಂಬರಿಯಲ್ಲಿ ಸಂಗೀತವನ್ನು ಬಳಸಿಕೊಂಡಂತಹ ರೀತಿ ಅನನ್ಯ. ಹಾಗಾಗಿ ಮಂದ್ರ ಕಾದಂಬರಿಯನ್ನು ಓದುತ್ತಾ ಹೋದಂತೆ ಒಂದು ದೀರ್ಘಾವಧಿ ಸಂಗೀತ ಕಛೇರಿಯನ್ನು ಆಲಿಸಿದಾಗ ದೊರಕುವ ತನ್ಮಯತೆ, ತೃಪ್ತಿ, ಹೃದ್ಯ ಅನುಭವವು ಸಹೃದಯ ಓದುಗರಿಗೆ ದೊರಕುತ್ತದೆ.
    ಮಂದ್ರ ಕಾದಂಬರಿಯಲ್ಲಿ ರಾಗಗಳನ್ನು ಬಳಸಿಕೊಂಡ ರೀತಿಯೇ ಒಂದು ವೈಶಿಷ್ಟ್ಯ. ಇಲ್ಲಿ ಆಯಾ ರಾಗಗಳ ಭಾವ, ಲಕ್ಷಣ, ಹಾಡುವ ಸಮಯ, ಕಾಲ, ಸನ್ನಿವೇಶ, ಸಂದರ್ಭ ಇತ್ಯಾದಿಗಳನ್ನು ಆಯಾ ಪಾತ್ರಗೊಂದಿಗೆ ತುಲನಾತ್ಮಕವಾಗಿ ಹೊಂದಿ ಸಿಕೊಂಡದ್ದು ಕಾದಂಬರಿಕಾರನ ಜಾಣ್ಮೆ. ಮಂದ್ರದಲ್ಲಿ ಒಂದೊಂದು ರಾಗಗಳು ಒಂದೊಂದು ಹೆ±್ಝ್ವ ಪಾತ್ರಗಳನ್ನು ಹೋಲುತ್ತವೆ ಕಾದಂಬರಿಯ ಪ್ರಮುಖ ಪಾತ್ರ ಮೋಹನಲಾಲ್‍ಗೆ ಸಂಗೀತದಷ್ಟೇ ಹೆಣ್ಣಿನ ಸಂಗದಲ್ಲಿಯೂ ಪ್ರಭುತ್ವ. ಇಲ್ಲಿ ತನ್ನ ಜೀವನದಲ್ಲಿ ಹಾದುಹೋದ ಹೆಂಗಸರನ್ನು ಅವನು ಸಂಗೀತದ ಪರಿಭಾಷೆಯಲ್ಲಿ ವರ್ಣಿಸುತ್ತಾನೆ. ಒಬ್ಬಳನ್ನು ಮತ್ತೊಬ್ಬಳ ಬಾಹ್ಯ ಸೌಂದರ್ಯದೊಂದಿಗೆ ಅಳೆದು ತೂಗುತ್ತಾನೆ. ಅವರ ಗುಣ ಸ್ವಭಾವಕ್ಕೆ ತಕ್ಕಂತೆ ಅವರಿಗೆ ಒಂದೊಂದು ರಾಗದ ಹೆಸರು ಕೊಡುತ್ತಾನೆ. ರಾಗದ ಭಾವ-ಸ್ವಭಾವಗಳಿಗೆ ಅವಳನ್ನು ಹೋಲಿಸುತ್ತಾನೆ.


    ಮಂದ್ರ ಕಾದಂಬರಿಯ ರಾಗ ಹಾಗೂ ಪಾತ್ರ ಭಾವಗಳನ್ನು ಸಮೀಕರಿಸಿ ಆ ಮೂಲಕ ರಾಗ ರೂಪು-ರೇಷೆಗಳನ್ನು ಕಛೇರಿಯಾಗಿಸಿದ ವಿಶಿಷ್ಟ ಸಾಧ್ಯತೆಯೇ ಮಂದ್ರ ಸಂಗೀತ. ನಾಲ್ಕಾರು ಇಂತಹ ಪ್ರಯೋಗವಾದ ನಂತರ ಮಂಗಳೂರಿನಲ್ಲಾದ ಪ್ರಯೋಗದಲ್ಲಿ ರಸಿಕರಿಗೆ ದೊರಕಿದ ಅನುಭವದ ಸಮೀಕ್ಷೆ ಮುಂದಿದೆ.
    ಮೊದಲಿಗೆ ಯಮನ್ ರಾಗದ ಭಜನ್‍ನೊಂದಿಗೆ ಆರಂಭವಾದ ಕಛೇರಿ, ಅನಂತರ ಕಾದಂಬರಿಯಲ್ಲಿ ಪ್ರಸ್ತಾಪಿಸಲಾದ ಅಪೂರ್ವವಾದ ಪೂರಿಯಾ ರಾಗದೊಂದಿಗೆ ಮುಂದುವರಿಯುತ್ತದೆ. ಸಾಯಂಕಾಲದ ಅಥವಾ ಸಂಧ್ಯಾರಾಗವೆಂದೇ ಪ್ರಸಿದ್ಧಿ ಹೊಂದಿರುವ ಈ ರಾಗವು ಗಾಯಕ ಉಸ್ತಾದ್ ಫಯಾಜ್‍ಖಾನರ ತುಂಬು ಕಂಠದಲ್ಲಿ ವಿಶಿಷ್ಟವಾಗಿ ಶೋಭಿಸಿತು. ಈ ರಾಗದಲ್ಲಿ ಕಾಣುವ ವಿಷಾದ ಭಾವವು ಕಾದಂಬರಿಯ ನಾಯಕ ಮೋಹನ್‍ಲಾಲ್‍ನ ಗುರು ರಾಜಾಸಾಹೇಬ ಠಾಕೂರರ ವಿಷಾದ ಜೀವನವನ್ನು ಪ್ರತಿನಿಧಿಸುತ್ತದೆ.
    ರಾಜಾಸಾಹೇಬ್ ಠಾಕೂರರ ಬಳಿ ಕಲಿಯುತ್ತಿರುವ ಸಂದರ್ಭದಲ್ಲಿ ಉತ್ಕಟ ಕಾಮ ವಾಂಛೆಗೆ ಸಿಲುಕಿಕೊಳ್ಳುವ ಮೋಹನ ಲಾಲ್ ತನ್ನ ಕಾಮೋಪಶಾಂತಿಯನ್ನು ಹಳ್ಳಿಯ ಮುಗ್ಧ ಹುಡುಗಿ ಚುನ್ನಿಬಾಯಿಯಲ್ಲಿ ಪಡೆಯುತ್ತಾನೆ. ಆ ಸಂದರ್ಭದಲ್ಲಿ ಮೇಘ್ ರಾಗದ ಪ್ರಸ್ತಾಪ ಬರುತ್ತದೆ. ಈ ಮೇಘ್ ರಾಗವು ಕಛೇರಿಯಲ್ಲಿ ವರ್ಷಋತುವಿನ ಮೊದಲ ಮಳೆಯು ಬಿಸಿಲಿನ ಬೇಗೆಗೆ ಬಳಲಿ ಬೆಂಡಾದ ಭೂಮಿಯನ್ನು ತಣಿಸುವಂತೆ ಕೇಳುಗರ ಸಂಗೀತದ ದಾಹವನ್ನು ತಣಿಸಿತು.
    ಆ ನಂತರ ಪ್ರಸ್ತುತಿಗೊಂಡ ಮಾರೂಬಿಹಾಗ್ ರಾಗ ತನ್ನ ಸುಕುಮಾರ ಕೋಮಲ ರೂಪು-ವಯ್ಯಾರದ ಮಾಧುರ್ಯ ದೊಂದಿಗೆ ಕೇಳುಗರನ್ನು ಹೇಳಲಾಗದಂಥಹ ಅವ್ಯಕ್ತ ಆನಂದದಲ್ಲಿ ಮುಳುಗಿಸಿತು. ಈ ರಾಗವು ರಾಜಸ್ತಾನೀ ಮೂಲದವಳಾದ ಜವಹಾರ್‍ಬಾಯಿ ಎಂಬ ಪಾತ್ರವನ್ನು ಪ್ರತಿನಿಧಿಸುತ್ತದೆ. ರಾಜಸ್ತಾನಿ ಜನಪದ ಶೈಲಿಯಲ್ಲಿರುವ ಮಾರೂಬಿಹಾಗ್ ರಾಗದ ಬೆಡಗಿನ ಸಂಚಾರವು ಕಛೇರಿಯಲ್ಲಿ ಉಸ್ತಾದ್ ಫಯಾಜ್‍ಖಾನ್‍ರ ಕಂಠದಲ್ಲಿ ಅದ್ಭುತವಾಗಿ ಮೂಡಿ ಬಂತು. ಇಲ್ಲಿ ಪಂಡಿತ್ ಗುರುಮೂರ್ತಿಯವರ ತಬಲ ಸಾಥಿಯ ಜೊತೆಗಾರಿಕೆಯೂ ಅನನ್ಯ.

    ಅನಂತರದ ಕೋಮಲ್ ರಿಷಭ್ ಅಸಾವರಿ ರಾಗದ ಓಂಕಾರ ಪ್ರಸ್ತುತಿ ಮತ್ತು ರಾಗದ ಪ್ರಸ್ತುತಿಯಲ್ಲಿ ತೊ ತುಮ್ಹರೋ ದಾ ಸಜನು ಮಜನುಮರೆ ಎಂಬ ಕೃತಿ ಕೇಳುಗರಲ್ಲಿ ಕರುಣರಸವನ್ನು ತುಂಬಿಕೊಂಡು ಅವರಲ್ಲಿ ಸಾಕ್ಷಿಪ್ರಜ್ಞೆಯನ್ನು ಮೂಡಿಸಿತು. ಇದು ಕಾದಂಬರಿಯ ಪ್ರಮುಖ ಸ್ತ್ರೀಪಾತ್ರ ಮಧುಮಿತಾ ತನ್ನ ಆತ್ಮವಿಮರ್ಶೆ ಮಾಡುವ ಭಾವಕ್ಕೆ ಪೂರಕವಾದದ್ದು. ನಂತರದ ಆಲಾಪಿಸಿದಷ್ಟೂ ಹರವಾದ ವಿಸ್ತಾರವನ್ನು ನೀಡುವ ದುರ್ಗಾ ರಾಗದ ದೇವಿ ಭಜೋ ದುರುಗಾ ಭವಾನಿ ಕೇಳುಗರನ್ನು ಭಕ್ತಿಪರವಶತೆಯ ಆಳದಲ್ಲಿ ಮುಳುಗಿಸಿತು.
     ಮಂದ್ರ ಕಾದಂಬರಿಯ ನಾಯಕಿ ಮಧುಮಿತಾಳ ಲಾಲಿತ್ಯ, ರೂಪ, ಲಾವಣ್ಯ, ಹೆಣ್ತನಗಳನ್ನು ಮೋಹನ್‍ಲಾಲ್ ಸಂಪೂರ್ಣ ರಾಗ ಶುದ್ಧಕಲ್ಯಾಣ್‍ಗೆ ಹೋಲಿಸುತ್ತಾನೆ. ಶುದ್ಧಕಲ್ಯಾಣ್ ರಾಗ ಕಛೇರಿಯ ಸಂದರ್ಭದಲ್ಲಿ ತನ್ನ ಮಾಧುರ್ಯ, ಗಾಂಭಿರ್ಯ, ಲಜ್ಜಾಭಾವಗಳಿಂದ ಅಪೂರ್ವವಾಗಿ ಮೂಡಿಬಂತು. ಗಾಯಕ ಫಯಾಜ್‍ಖಾನ್‍ರ ಕಂಠದಲ್ಲಿ ಶುದ್ಧಕಲ್ಯಾಣ್ ರಾಗ ಶೃಂಗಾರಗೊಂಡು ಲಜ್ಜೆಯಿಂದ ಹೆಜ್ಜೆಯ ಮೇಲೆ ಹೆಜ್ಜೆಯಿರಿಸಿ ಬಂದ ನವವಧುವಿನಂತೆ, ರೂಪ ಲಾವಣ್ಯದ ಸೊಗಸಿನೊಂದಿಗೆ ಕೇಳುಗರ ಹೃದಯವನ್ನು ಆವರಿಸಿತು. ಮೊಂದರ್ ಬಾಜೋ ಎಂಬ ಕೃತಿಯ ಮೂಲಕ ಪ್ರಶಾಂತವಾಗಿ ಹರಿಯುವ ನದಿಯಂತೆ ನಿಸ್ಸೀಮ ಶಾಂತದೊಂದಿಗೆ ಶುದ್ಧಕಲ್ಯಾಣ್ ರಾಗವು ಕಳೆಗಟ್ಟಿತು.
     ಮಂದ್ರದ ಮತ್ತೊಂದು ಪ್ರಮುಖ ಸ್ತ್ರೀಪಾತ್ರ ಅಪೂರ್ವಸುಂದರಿ, ನೃತ್ಯಲಲನೆ ಮನೋಹರಿದಾಸಳನ್ನು ಹೋಲುವ ರಾಗ ಬಾಗೇಶ್ರೀ. ಕಛೇರಿಯಲ್ಲಿ ಫಯಾಜ್ ಖಾನರು ಪ್ರಸ್ತುತ ಪಡಿಸಿದ ಬಾಗೇಶ್ರೀ ರಾಗದ ಗುಂದಲ್ ರೇ ಮಾಲನಿಯಾ ನೃತ್ಯೋಚಿತವಾದ ಕೃತಿ ಹಾಗೂ ತನ್ನ ಬಾಗು ಬಳುಕು ಒನಪು ಒಯ್ಯಾರದ ಲಯಕಾರಿ ನಡೆಯಿಂದ ಚಂಚಲ ಮನಸ್ಸಿನ ಮನೋಹರಿದಾಸಳ ಪ್ರತೀಕದಂತಿತ್ತು. ಇಲ್ಲಿ ರವೀಂದ್ರ ಕಾಟೋಟಿಯವರ ಹಾರ್ಮೊನಿಯಂ ಮತ್ತು ಪಂಡಿತ್ ಗುರುಮೂರ್ತಿ ವೈದ್ಯರ ತಬ್ಲಾ ಸಾಥಿ ಅಪೂರ್ವವಾಗಿತ್ತು.

      ರಂಗ್ ರಲಿಯಾ ಎಂಬ ಕೃತಿಯೊಂದಿಗೆ ಪ್ರಸ್ತುತಗೊಂಡ ಮಾಲ್‍ಕೌಂಸ್ ರಾಗಭಾವವು ನಿರೂಪಕ ಆರ್. ಗಣೇಶರವರ ಪ್ರಕಾರ ಲೋಲಕದ ಓಲಾಟದಂತೆ, ಉಯ್ಯಾಲೆಯಲ್ಲಿ ಜೀಕುವಂತೆ. ಈ ಮಾತಿನ ಮೂರ್ತರೂಪದಂತೆ ಕೇಳುಗರು ಮಾಲ್ ಕೌಂಸ್ ರಾಗದ ತುಯ್ದಾಟ, ಹೊಯ್ದಾಟಗಳಿಗೆ ತೂಗಿ ತೊನೆದಾಡಿದರು.
      ವಿರಹಕ್ಕೆ, ಗಾಂಭಿರ್ಯಕ್ಕೆ, ಹೃದಯ ವೇದನೆಗೆ ಹೆಸರಾದ ಘನಗಾಂಭೀರ್ಯದ ಗಂಡುದನಿಗೆ ಹೇಳಿಮಾಡಿಸಿದಂಥ ದರ್ಬಾರಿ ರಾಗವು ಮುಂದೆ ಪ್ರಸ್ತುತಗೊಂಡಿತು. ಬಳಿಕ ಮಂದ್ರ ಕಾದಂಬರಿಯ ಮತ್ತೊಂದು ಪ್ರಮುಖ ಸ್ತ್ರೀಪಾತ್ರ ಲಾರೆನ್ ಸ್ಮಿತ್ ಎಂಬ ವಿದೇಶಿ ಮಹಿಳೆಯ ಪ್ರತಿರೂಪದಂತಿರುವ ರಾಗ ಭೂಪಾಲಿ ಪ್ರಸ್ತುತಗೊಂಡಿತು. ಭೋರ್ಗರೆಯು ಸಮುದ್ರ ದಂತಿರುವ ಭೂಪಾಲಿಯ ನಾದಮಾಧುರ್ಯ, ಸ್ವರಗಳ ಸುಖಮಯ ಸಂಚಾರ ಉಸ್ತಾದ್ ಫಯಾಜ್ ಖಾನರ ಕಂಚಿನ ಕಂಠ ದಲ್ಲಿ ಬಲು ಸೊಗಸಾಗಿ ಶೋಭೆಗೊಂಡಿತು.
       ಕಛೇರಿಯ ಮಂಗಳ ರೂಪವಾಗಿ ಮೂಡಿ ಬಂದ ಕೃತಿ ಭೈರವಿಯನ್ನು ಭೈರಪ್ಪನವರು ಮೋಹನಲಾಲನ ಮಡದಿ, ಸಂಗೀತ ಜ್ಞಾನವೇ ಇಲ್ಲದ ಹಳ್ಳಿ ಹೆಂಗಸು ರಾಮ್‍ಕುಮಾರಿಗೆ ಹೋಲಿಸುತ್ತಾರೆ. ಕಛೇರಿಯಲ್ಲಿ ಜೋಗಿ ಮತ್ ಜಾ ಎಂಬ ಮೀರಾ ಭಜನ್ ಅತ್ಯದ್ಭುತವಾಗಿ ಮೂಡಿಬಂತು. ಇಲ್ಲಿ ಬರುವ ರಾಧೆಯ ಉತ್ಕಟ ಪ್ರೇಮ ವಿಲಾಪದ ಸರ್ವ ಸಮರ್ಪಣಾ ಭಾವವಂತೂ ಅನನ್ಯ. ಫಯಾಜ್‍ಖಾನರ ಕಂಠದಲ್ಲಿ ಭೈರವಿಯ ಕರುಣೆ, ವಿರಹ, ಆರ್ತತೆ, ಭಕ್ತಿ, ಸಮರ್ಪಣೆಗಳ ಭಾವ ಶೋತೃಗಳನ್ನು ನಿಧಾನವಾಗಿ ಆವರಿಸಿ ಕೊನೆಗೆ ಆಲಾಪ ತಾನಗಳ ಭಾವ ತೀವ್ರತೆಯಿಂದ ಮುಳುಗಿಸಿಬಿಟ್ಟಿತು.

       ಪೂರಿಯಾದ ವಿಷಾದ, ಮಾರೂಬಿಹಾಗ್ ರಾಗದ ಸುಕುಮಾರ್ಯ ಕೋಮಲತೆ, ಕೋಮಲ್ ರಿಷಭ್ ಅಸಾವರಿಯ ಆತ್ಮಶೋಧನೆ, ದುರ್ಗಾರಾಗದ ಭಕ್ತಿ ಪರವಶತೆ, ಶುದ್ಧಕಲ್ಯಾಣ್ ರಾಗದ ಲಜ್ಜಾಭಾವ, ಬಾಗೇಶ್ರೀಯ ಲಯಲಾಸ್ಯ, ಮಾಲ್ ಕೌಂಸ್‍ನ ಮೃದುಮಾಧುರ್ಯ, ಭೈರವಿಯ ಆರ್ತತೆ, ವಿರಹ ಹೇಗೆ ಹಲವು ರಾಗಗಳ ಭಾವ ಸಾರಗಳನ್ನು ಉಸ್ತಾದ್ ಫಯಾಜ್ ಖಾನರು ಕಛೇರಿಯಲ್ಲಿ ಅದ್ಭುತವಾಗಿ ಪ್ರಸ್ತುತಪಡಿಸಿದರು. ನಿರೂಪಣೆಯಲ್ಲಿ ಶತಾವಧಾನಿ ಆರ. ಗಣೇಶ್‍ರವರ ವಿದ್ವತ್ಪೂರ್ಣ ಮಾತುಗಾರಿಕೆ ಸಂಗೀತ ರಸಿಕರ ಗಮನ ಸೆಳೆಯಿತು. ಸಂಸ್ಕøತ ಭೂಯಿಷ್ಟವಾದ ಶೃತಿ-ಲಯಬದ್ಧವಾದ ಅವರ ಮಾತು ಮತ್ತೆ ಮತ್ತೆ ಕೇಳುವಂತಿತ್ತು. ಮಂದ್ರ ಕಾದಂಬರಿಯನ್ನು ಅವರು ಆಳವಾಗಿ ಅಧ್ಯಯನ ಮಾಡಿದ ಕುರುಹು ಕಛೇರಿ ನಿರೂಪಣೆಯ ಸಂದರ್ಭದಲ್ಲಿ ಶ್ರುತಗೊಂಡಿತು. ಹಾರ್ಮೋನಿಯಂನಲ್ಲಿ ರವೀಂದ್ರ ಕಾಟೋಟಿ ಮತ್ತು ತಬ್ಲಾದಲ್ಲಿ ಪಂಡಿತ್ ಗುರುಮೂರ್ತಿ ವೈದ್ಯರ ಜೊತೆ ಸಾಥೀದಾರಿಕೆ ಸಖ-ಸಖಿ ಸಂಚಾರಿ ಭಾವದಂತಿತ್ತು. ಇಂಥಹ ಪ್ರಯೋಗವು ಕಾದಂಬರಿ ಓದದವರಿಗೆ ಓದುವಂತೆ ಪ್ರೇರೇಪಿಸಿದರೆ, ಕಾದಂಬರಿ ಓದಿದವರಿಗೆ ಪುನರ್ಮನನ ಮಾಡಿಕೊಳ್ಳಲು ಸಹಾಯವಾಯಿತು.

ಚಿತ್ರಕೃಪೆ  :  ಶ್ರೀ ಅರವಿಂದ ಕುಡ್ಲ